ಕೊಪ್ಪಳ: ಸರ್ಕಾರದ ಎಲ್ಲ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕು. ಸರಿಯಾಗಿ ಕರ್ತವ್ಯ ನಿರ್ವಹಿಸದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹಾಗೂ ನವಲಗುಂದ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಅವರು ಗುರುವಾರ ಕೊಪ್ಪಳ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಕರ್ನಾಟಕ ವಿಧಾನ ಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯಿಂದ ಹಮ್ಮಿಕೊಂಡಿದ್ದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.ರಾಜ್ಯದ ವಿವಿಧ ಜಿಲ್ಲೆಗಳಿಗೆ ನಾವು ಹೊರಟಿರುವ ಉದ್ದೇಶ ಆಯಾ ಜಿಲ್ಲೆಯ ಸಮಸ್ಯೆ ತಿಳಿದುಕೊಳ್ಳುವುದಾಗಿದೆ. ಸರ್ಕಾರದ ಹಲವಾರು ಕಾರ್ಯಕ್ರಮ ಸರಿಯಾಗಿ ಅನುಷ್ಠಾನಗೊಳ್ಳದಿದ್ದರೆ ಏನು ಪ್ರಯೋಜನ. ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಮಿಷನ್ ಇಂದ್ರ ಧನುಷ್, ಮಾತೃ ವಾತ್ಸಲ್ಯ ಯೋಜನೆ, ಮಕ್ಕಳ ರಕ್ಷಣಾ ಘಟಕ, ಬಾಲ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ, ದೇವದಾಸಿ ಮಕ್ಕಳಿಗೆ ಸಹಾಯ ಸೇರಿದಂತೆ ಇತರೆ ಹಲವಾರು ಯೋಜನೆಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಅವುಗಳನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಬೇಕೆಂದರು.
ಕಳೆದ ಕೆಲವು ತಿಂಗಳ ಹಿಂದೆ ಯಾದಗಿರಿ ಜಿಲ್ಲೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿ ಅದು ರಾಷ್ಟ್ರವ್ಯಾಪಿ ಸುದ್ದಿಯಾಗುವುದರ ಜತೆಗೆ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ನಡೆಯಿತು. ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಪೋಕ್ಸೊ ಪ್ರಕರಣ ಎಷ್ಟಾಗಿವೆ ಮಾಹಿತಿ ನೀಡಿ ಅಂತಹ ಘಟನೆ ಜಿಲ್ಲೆಯಲ್ಲಿ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.ವಿಧಾನಸಭಾ ಸದಸ್ಯರು ಹಾಗೂ ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಎಚ್.ಎ.ಇಕ್ಬಾಲ್ ಹುಸೇನ್ ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಕಿಡ್ನಾಫ್, ರೇಫ್, ಮಿಸ್ಸಿಂಗ್, ಪೋಕ್ಸೋ ಪ್ರಕರಣಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವುದರಿಂದ ಇದರ ನಿಯಂತ್ರಣಕ್ಕೆ ಅಧಿಕಾರಿಗಳು ಕಡಿವಾಣ ಹಾಕಬೇಕಿದೆ ಎಂದರು.
ವಿಧಾನಸಭಾ ಸದಸ್ಯರು ಹಾಗೂ ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಶರಣಗೌಡ ಕಂದಕೂರ ಮಾತನಾಡಿ, ನಮ್ಮ ಭಾಗದಲ್ಲಿ ಬಡತನ, ಬಾಲ್ಯವಿವಾಹ, ಮಕ್ಕಳ ಮಿಸ್ಸಿಂಗ್ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಿರುವುದರಿಂದ ಅದನ್ನು ಸರಿಪಡಿಸುವ ಕೆಲಸ ನಾವು ಮಾಡಬೇಕಿದೆ. ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ರೇಫ್ ಕಿಡ್ನಾಫ ಸಂಖ್ಯೆ ಕಡಿಮೆ ಮಾಡಲು ಜಾಗೃತಿ ಮೂಡಿಸಬೇಕು ಎಂದರು.ಜಿಲ್ಲಾಧಿಕಾರಿ ಡಾ.ಸುರೇಶ ಬಿ. ಇಟ್ನಾಳ ಮಾತನಾಡಿ, ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಮಕ್ಕಳ ಕಾವಲು ಸಮಿತಿಗಳು ಕಾರ್ಯನಿರ್ವಹಿಸುತ್ತಿವೆ.ಅದೇ ರೀತಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಮಕ್ಕಳ ಕಾವಲು ಸಮಿತಿಗಳ ರಚನೆಗಾಗಿ ಸಂಬಂಧಿಸಿದ ಇಲಾಖೆಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಇದಕ್ಕೆ ಅನುಮೋದನೆ ಸಿಕ್ಕ ನಂತರ ಜಿಲ್ಲೆಯ ನಗರ ಪ್ರದೇಶಗಳಲ್ಲಿಯೂ ಮಕ್ಕಳ ಕಾವಲು ಸಮಿತಿ ರಚಿಸಲಾಗುವುದು ಎಂದರು.
ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎನ್.ಎಚ್.ಕೋನರಡ್ಡಿ ಮಾತನಾಡಿ, ಕೊಪ್ಪಳ ಜಿಲ್ಲಾಧಿಕಾರಿಗಳು ಉತ್ತಮ ಸಲಹೆ ನೀಡಿದ್ದಾರೆ. ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಯೂ ಮಕ್ಕಳ ಕಾವಲು ಸಮಿತಿಗಳ ರಚನೆಗೆ ಸರ್ಕಾರದಿಂದ ಅನುಮೋದನೆಗೆ ಕ್ರಮ ಕೈಗೊಳ್ಳಲಾಗುವುದು.ಅದರಂತೆ ರಾಜ್ಯಾದ್ಯಂತ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಮಕ್ಕಳ ಕಾವಲು ಸಮಿತಿ ರಚನೆಗೆ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಗಳ ರಾಜ್ಯಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.ಸನ್ಮಾನ: ಕರ್ನಾಟಕ ವಿಧಾನಮಂಡಲದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಹಾಗೂ ಸದಸ್ಯರಿಗೆ ಜಿಲ್ಲಾಡಳಿತದ ಪರವಾಗಿ ಇದೇ ವೇಳೆ ಸನ್ಮಾನಿಸಲಾಯಿತು.
ಸಭೆಯಲ್ಲಿ ಪೋಲಿಸ್ ಮಹಾನಿರೀಕ್ಷಕ ಸತೀಶ್ ಕುಮಾರ್, ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ವರ್ತಿಕ ಕಟಿಯಾರ್, ಕೊಪ್ಪಳ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಎಸ್ಪಿ ಡಾ.ರಾಮ್ ಎಲ್ ಅರಸಿದ್ಧಿ, ಶಾಲಾ ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಅಪರ ಆಯುಕ್ತ ಪಾಂಡ್ವೆ ರಾಹುಲ್ ತುಕಾರಾಮ್ ಹಾಗೂ ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳು, ಕೊಪ್ಪಳ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.