ಕನ್ನಡಪ್ರಭ ವಾರ್ತೆ ಹಾಸನ
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಕುಸಿದಿದೆ. ಕೆಲವೆಡೆ ಶೇ.೫೦ಕ್ಕೂ ಕಡಿಮೆ ಮಳೆಯಾಗಿದ್ದು, ತಾಪಮಾನ ೩೦ ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಿದೆ. ಬಿತ್ತನೆ ಪ್ರಮಾಣವೂ ಶೇ.೪೦ರಷ್ಟಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ಬೆಳೆ ಬಂದಿಲ್ಲ. ಆದರೆ ಈ ಬಗ್ಗೆ ಕೃಷಿ ಸಚಿವರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಸರ್ಕಾರದ ಅಂಕಿ- ಅಂಶಗಳ ಪ್ರಕಾರ ಮಲೆನಾಡು ಭಾಗದಲ್ಲಿ ಶೇ.೩೪, ಕರಾವಳಿ ಭಾಗದಲ್ಲಿ ಶೇ.೩೦, ಉತ್ತರ ಒಳನಾಡಿನಲ್ಲಿ ಶೇ.೨೪ ಹಾಗೂ ದಕ್ಷಿಣ ಒಳನಾಡಿನಲ್ಲಿ ಶೇ.೧೮ರಷ್ಟು ಮಳೆ ಕೊರತೆಯಿದೆ. ಆದರೂ ಬರ ಪರಿಸ್ಥಿತಿಯನ್ನು ನಿರ್ಧರಿಸುವಾಗ ಈ ಅಂಶಗಳನ್ನು ಸಮರ್ಪಕವಾಗಿ ಪರಿಗಣಿಸಲಾಗುತ್ತಿಲ್ಲ ಎಂದು ಹೇಳಿದರು. ಮುಂಗಾರು ಹಂಗಾಮಿನಲ್ಲಿ ರಾಜ್ಯದ ಸುಮಾರು ೮೪ ಲಕ್ಷ ಎಕರೆ ಭೂಮಿ ಮಳೆಯಾಶ್ರಿತವಾಗಿದ್ದು, ಸರ್ಕಾರದ ಪ್ರಕಾರ ಶೇ.೬೦ರಷ್ಟು ಮಾತ್ರ ಬಿತ್ತನೆಯಾಗಿದೆ. ಆದರೆ ವಾಸ್ತವ ಪರಿಸ್ಥಿತಿ ಇದಕ್ಕಿಂತಲೂ ಗಂಭೀರವಾಗಿದೆ. ಹಲವು ಕಡೆ ಬಿತ್ತನೆ ಮಾಡಿದ ಬೆಳೆಗಳು ಮಳೆಯಿಲ್ಲದೆ ಒಣಗಿ ಹೋಗಿವೆ ಎಂದು ನಾರಾಯಣಗೌಡ ತಿಳಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ತಾಲೂಕುಗಳಿದ್ದರೂ ಕೇವಲ ಒಂಬತ್ತು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದಲ್ಲಿಯೂ ಹಲವು ತಾಲೂಕುಗಳು ಬರದ ಪರಿಣಾಮ ಎದುರಿಸುತ್ತಿದ್ದರೂ ಸೀಮಿತ ಪ್ರದೇಶಗಳನ್ನು ಮಾತ್ರ ಬರಪೀಡಿತವೆಂದು ಗುರುತಿಸಲಾಗಿದೆ. ಹಾಸನ ಜಿಲ್ಲೆಯಲ್ಲಿ ಐದು ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಆದರೆ ಆಲೂರು ಹಾಗೂ ಬೇಲೂರು ತಾಲೂಕಿನ ಮಳೆಯಾಶ್ರಿತ ಪ್ರದೇಶಗಳಲ್ಲಿಯೂ ಮಳೆಯ ಕೊರತೆಯಿಂದ ಬೆಳೆಗಳು ಸಂಪೂರ್ಣ ಹಾನಿಗೊಳಗಾಗಿವೆ ಎಂದು ಹೇಳಿದರು.ಜಿಲ್ಲೆಯಾದ್ಯಂತ ಜೋಳ, ರಾಗಿ ಸೇರಿದಂತೆ ವಿವಿಧ ಬೆಳೆಗಳು ಹಾನಿಯಾಗಿದ್ದು, ಕೆರೆ- ಕಟ್ಟೆಗಳಲ್ಲಿಯೂ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಸರ್ಕಾರ ಕೂಡಲೇ ವಿಶೇಷ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರು ಪಾವತಿಸಬೇಕಾದ ಶೇ.೧೦೦ರಷ್ಟು ಪ್ರೀಮಿಯಂ ಅನ್ನು ರಾಜ್ಯ ಸರ್ಕಾರವೇ ಭರಿಸಬೇಕು. ಪ್ರತಿಯೊಂದು ತಾಲೂಕಿಗೂ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಬೆಳೆ ಹಾನಿಗೊಳಗಾದ ರೈತರಿಗೆ ತ್ವರಿತವಾಗಿ ಪರಿಹಾರ ತಲುಪಿಸಬೇಕು ಎಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಿರೀಶ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಟರಾಜು, ನಾಗೇಶ್, ಕಾರ್ಯಕಾರಿ ಮಂಡಳಿ ಸದಸ್ಯ ಶಕುನಿಗೌಡ ಇತರರು ಉಪಸ್ಥಿತರಿದ್ದರು.