ಅರ್ಹರಿಗೆ ಸವಲತ್ತು ನೀಡುವುದೇ ಸರ್ಕಾರದ ಗುರಿ: ಶರತ್‌

KannadaprabhaNewsNetwork | Published : Apr 14, 2025 1:22 AM

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ

ಕನ್ನಡಪ್ರಭ ವಾರ್ತೆ ಹೊಸಕೋಟೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಹಾಗೂ ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ತಾಪಂ ಹಾಗೂ ವಿವಿಧ ಇಲಾಖೆಗಳಿಂದ ಫಲಾನುಭವಿಗಳಿಗೆ ವಿವಿಧ ಸವಲತ್ತು ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಕಲಚೇತನರಿಗೆ ಸರ್ಕಾರ ಶೇ.೫ರಷ್ಟು ಅನುದಾನ ಮೀಸಲಿಟ್ಟಿದೆ. ಆದರೆ ಕೆಲ ಇಲಾಖೆಗಳಿಂದ ಸೂಕ್ತ ರೀತಿಯಲ್ಲಿ ಅನುದಾನ ಬಳಕೆಯಾಗದೆ ಉಳಿದಿದ್ದ ಅನುದಾನಗಳಲ್ಲಿ ಒಟ್ಟುಗೂಡಿಸಿ 10 ವಿಕಲಚೇತನರಿಗೆ 11 ಲಕ್ಷ ವೆಚ್ಚದಲ್ಲಿ ಇಂಧನ ಚಾಲಿತ ತ್ರಿಚಕ್ರ ವಾಹನ ವಿತರಣೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ೫೦ ಫಲಾನುಭವಿಗಳಿಗೆ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ, ವಾಣಿಜ್ಯ ಕೈಗಾರಿಕಾ ಇಲಾಖೆಯಿಂದ 150 ಫಲಾನುಭವಿಗಳಿಗೆ ಹೊಲಿಗೆ ಯಂತ್ರ, ಕಾರ್ಮಿಕ ಇಲಾಖೆಯಿಂದ ಬಾರ್ ಬೆಂಡಿಂಗ್, ವೆಲ್ಡಿಂಗ್ ಯಂತ್ರಗಳ ವಿತರಣೆ, ತೋಟಗಾರಿಕೆ ಇಲಾಖೆಯಿಂದ ಹೈ ಪ್ರೆಷರ್ ಔಷಧ ಸಿಂಪಡಣಾ ಯಂತ್ರ ಹಾಗೂ 25 ಪ್ರಗತಿಪರ ರೈತರಿಗೆ ಸೀಡ್ ಕಿಟ್ ವಿತರಣೆ ಮಾಡಲಾಗಿದೆ ಎಂದರು.

ಗ್ಯಾರಂಟಿ ಸಮಿತಿ ಅಧ್ಯಕ್ಷ ಚಿಕ್ಕಹುಲ್ಲೂರು ಬಚ್ಚೇಗೌಡ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜಾತಿ ಧರ್ಮ ಮಧ್ಯವರ್ತಿಗಳಿಲ್ಲದೆ ಬಡವರಿಗೆ ಮಹಿಳೆಯರಿಗೆ ಪಂಚ ಗ್ಯಾರಂಟಿಗಳನ್ನು ನೀಡಿ ನೇರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ. ಫಲಾನುಭವಿಗಳು ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ತಾಪಂ ಇಒ ಡಾ. ನಾರಾಯಣಸ್ವಾಮಿ, ಬಿಇಒ ಪದ್ಮನಾಭ್, ವಾಣಿಜ್ಯ ಹಾಗೂ ಕೈಗಾರಿಕೆ ಇಲಾಖೆ ಅಧಿಕಾರಿ ಶ್ರೀಕಾಂತ್, ಕಾರ್ಮಿಕ ಇಲಾಖೆ ಅಧಿಕಾರಿ ಎಚ್.ಎಂ.ಚಂದ್ರೇಗೌಡ, ಶಿಶು ಕಲ್ಯಾಣಾಧಿಕಾರಿ ಶಿವಮ್ಮ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೇಶವಮೂರ್ತಿ, ನಿರ್ದೆಶಕರಾದ ಡಾ.ಸುಬ್ಬರಾಜ್, ಕೊರಳೂರು ಸುರೇಶ್, ನಗರಸಭಾ ಸದಸ್ಯರಾದ ರಮಾ, ಗಣೇಶ್, ಮುಖಂಡರಾದ ಡಾ.ಸದಾನಂದ್, ಗೋಪಾಲ್, ಪಾರ್ವತಮ್ಮ ಇತರರಿದ್ದರು.

ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಚಿವರಾದ ಕೃಷ್ಣ ಬೈರೇಗೌಡರು 16 ಕೋಟಿ ಅನುದಾನದಲ್ಲಿ ಪ್ರಜಾಸೌಧ ನಿರ್ಮಿಸಲು ಗ್ರೀನ್‌ ಸಿಗ್ನೆಲ್‌ ನೀಡಿದ್ದು, ಶೀಘ್ರದಲ್ಲೇ ಕಾಮಗಾರಿ ಭೂಮಿಪೂಜೆ ನೆರವೇರಿಸಲಾಗುವುದು.

-ಶರತ್ ಬಚ್ಚೇಗೌಡ ಶಾಸಕರು

Share this article