ಕನ್ನಡಪ್ರಭವಾರ್ತೆ ಸಾಗರ
ಉಪ ವಿಭಾಗಾಧಿಕಾರಿ ಕಚೇರಿ ಎದುರು ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಗುರುವಾರ ಆಗಮಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಸರ್ಕಾರ ರೈತರ ಪ್ರತಿಭಟನೆಗೆ ಮಣಿದಿದ್ದು, ಶರಾವತಿ ಸಂತ್ರಸ್ತರು ಸೇರಿದಂತೆ ಜಿಲ್ಲೆಯಲ್ಲಿ ಜ್ವಲಂತವಾಗಿರುವ ಭೂಮಿ ಹಕ್ಕು ವಿವಾದದ ಪರಿಹಾರಕ್ಕೆ ಟಾಸ್ಕ್ ಫೋರ್ಸ್ ರಚನೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಅಗತ್ಯವಿರುವ ಕಾನೂನು ಬದಲಾವಣೆಗೂ ಮುಂದಾಗಿದೆ ಎಂದರು.
ಬಡ ರೈತರ ಜಮೀನು ಕಿತ್ತುಕೊಳ್ಳುವ ಅರಣ್ಯ ಇಲಾಖೆಯ ನೋಟಿಸ್‌ಗೂ ತಡೆ ಹಾಕುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕೂಡ ರೈತರ ಸಮಸ್ಯೆ ಪರಿಹಾರಕ್ಕೆ ಅಗತ್ಯ ನೆರವು ನೀಡುವ ಭರವಸೆ ಕೊಟ್ಟಿದ್ದಾರೆ.11 ದಿನದಿಂದ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಮೊದಲ ಹಂತದ ಜಯ ದೊರೆತಿದೆ. ಒಂದು ವೇಳೆ ಮುಂದಿನ ದಿನದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ನಮ್ಮ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸದಿದ್ದಲ್ಲಿ ಹೋರಾಟ ಮುಂದುವರಿಸೋಣ. ನಿಮ್ಮ ಜೊತೆ ಸೇರಿ ಹೋರಾಟಕ್ಕೆ ಧುಮುಕುತ್ತೇನೆ. ಈಗ ಧರಣಿ ಸತ್ಯಾಗ್ರಹಕ್ಕೆ ವಿರಾಮ ಹಾಕಿ ಎಂದು ಕಾಗೋಡು ತಿಮ್ಮಪ್ಪ ಮನವಿ ಮಾಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ಮಾತನಾಡಿ, ಬೆಂಗಳೂರಿನಲ್ಲಿ ನಡೆದ ಸಭೆ ಯಶಸ್ವಿಯಾಗಿದೆ. ಸಚಿವ ಮಧು ಬಂಗಾರಪ್ಪ ಕೂಡ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿದ್ದರು. ಜೊತೆಯಲ್ಲಿ ಎಲ್ಲರೂ ಒಟ್ಟಾಗಿ ಸಮಸ್ಯೆ ಪರಿಹಾರಕ್ಕೆ ಶ್ರಮಿಸುತ್ತೇವೆ. ನಿಮ್ಮ ಬೇಡಿಕೆ ಈಡೇರಿಸುವುದು ನಮ್ಮ ಜವಾಬ್ದಾರಿ ಎಂದಿದ್ದರು.ಮುಖ್ಯ ಕಾರ್ಯದರ್ಶಿಯವರು ಭರವಸೆ ನೀಡಿದ್ದಾರೆ. ನಮ್ಮೆಲ್ಲರ ಮಾರ್ಗದರ್ಶಕರು, ಈ ಹೋರಾಟಕ್ಕೆ ಚಾಲನೆ ನೀಡಿದ್ದ ಹಿರಿಯರಾದ ಕಾಗೋಡು ತಿಮ್ಮಪ್ಪನವರು ಸರ್ಕಾರದ ಮೇಲೆ ಹಾಗೂ ಸಚಿವರ ಮಾತಿಗೆ ಬೆಲೆ ಕೊಡೋಣ. ಅವರು ಈಗ ನೀಡಿರುವ ಭರವಸೆಯ ಈಡೇರಿಕೆಗೆ ಕಾಲಾವಕಾಶ ಕೊಡೋಣ ಎಂದರು. ಸದ್ಯ ಪ್ರತಿಭಟನೆ ಕೈಬಿಡುವಂತೆ ಕೇಳಿಕೊಂಡಿದ್ದಾರೆ. ನಮ್ಮ ನಾಯಕರ ಮಾತಿಗೆ ಗೌರವಿಸಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆದಿದ್ದೇವೆ. ಜಿಲ್ಲೆಯ ಹತ್ತಾರು ಸಂಘ ಸಂಸ್ಥೆಗಳು, ಸಾವಿರಾರು ರೈತರು, ಸಂಸದರು, ಜನಪ್ರತಿನಿಧಿಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರಿಗೂ ಧನ್ಯವಾದ ತಿಳಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ತೀ.ನ.ಶ್ರೀನಿವಾಸ್, ರಮೇಶ್ ಕೆಳದಿ, ರಾಮಚಂದ್ರಪ್ಪ ಮನೆಘಟ್ಟ, ಹೇಮಂತ್, ಬೇದೂರು ಗಿರಿ, ದೇವರಾಜು, ಶಿವು ಮೈಲಾರಿಕೊಪ್ಪ, ಚಂದ್ರಣ್ಣ ಮೊದಲಾದವರಿದ್ದರು.