ಸರ್ಕಾರಿ ಯೋಜನೆಗಳು ಬಡ ಜನರಿಗೆ ವರದಾನ

KannadaprabhaNewsNetwork | Published : Mar 21, 2025 12:31 AM

ಸಾರಾಂಶ

ಅಥಣಿ ನಗರೋತ್ಥಾನ ಯೋಜನೆಯಡಿ ಪುರಸಭೆಯಿಂದ ಫಲಾನುಭವಿಗಳಿಗೆ ಇನ್ವರ್ಟರ್‌ ಹಾಗೂ ಶೈಕ್ಷಣಿಕ ಸಹಾಯಧನ ಚೆಕ್ ವಿತರಿಸಲಾಯಿತು.

ಕನ್ನಡಪ್ರಭ ವಾರ್ತೆ ಅಥಣಿ

ಸರ್ಕಾರ ಪ್ರತಿಯೊಂದು ಯೋಜನೆಗಳು ಬಡವರಿಗೆ ವರದಾನವಾಗಿದ್ದು, ಬಡವರ ಅಭಿವೃದ್ಧಿಗಾಗಿ, ಮಹಿಳೆಯರ ಸಬಲೀಕರಣಕ್ಕಾಗಿ, ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪುರಸಭೆಯ ಅಧ್ಯಕ್ಷೆ ಶಿವಲೀಲಾ ಬುಟಾಳೆ ಹೇಳಿದರು.

ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ಗುರುವಾರ ಅಮೃತ ನಗರೋತ್ಥಾನ ಯೋಜನೆಯಡಿ 2022-23ನೇ ಸಾಲಿನ ಫಲಾನುಭವಿಗಳಿಗೆ ಇನ್ವರ್ಟರ್ ಹಾಗೂ 2024-25ನೇ ಸಾಲಿನ ಪುರಸಭೆ ಅನುದಾನದಡಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ ಚಕ್ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನೇಕ ಬಡ ಕುಟುಂಬಗಳು ಅವಕಾಶಗಳಿಂದ ವಂಚಿತರಾದಾಗ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಸ್ವಯಂ ಉದ್ಯೋಗಕ್ಕಾಗಿ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು, ವಿಕಲಚೇತನರಿಗೆ ತ್ರಿಚಕ್ರ ವಾಹನಗಳನ್ನು, ಬಡ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಲ್ಯಾಪ್ಟಾಪ್, ಬೆಳಕಿನ ಸಹಾಯಕ್ಕಾಗಿ ಇನ್ವರ್ಟರ್, ಸಹಾಯಧನ ಚೆಕ್ ನಂತಹ ಅನೇಕ ಸೌಲಭ್ಯಗಳು ಪುರಸಭೆಯ ನಗರೋತ್ಥಾನ ಯೋಜನೆಯಡಿ ಪತಿ ವರ್ಷ ವಿತರಿಸಲಾಗುತ್ತಿದೆ. ಅಥಣಿ ಪಟ್ಟಣದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಫಲಾನುಭವಿಗಳು ಇವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಮಾತನಾಡಿ, ಯೋಜನೆಯಡಿ 99 ಜನರಿಗೆ ಇನ್ವರ್ಟರ್‌ಗಳನ್ನು ಮತ್ತು 22 ಜನ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಹಾಯಧನ (ಶಿಷ್ಯವೇತನ) ವಿತರಿಸಲಾಗುತ್ತಿದೆ. ಪಟ್ಟಣದ ಐತಿಹಾಸಿಕ ಜೋಡಿ ಕೆರೆಗಳ ಅಭಿವೃದ್ಧಿ ಹಾಗೂ ಭಾಗೀರಥಿ ನಾಲಾ ಅಭಿವೃದ್ಧಿಗಾಗಿ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಪುರಸಭೆ ಆಡಳಿತ ಹಾಗೂ ಶಾಸಕರ ಮಾರ್ಗದರ್ಶನದಂತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷೆ ಭುವನೇಶ್ವರಿ ಯಕ್ಕಂಚಿ, ಸದಸ್ಯರಾದ ಸೈಯದ್ ಅಮೀನ್ ಗದ್ಯಾಳ, ರಾಜಶೇಖರ ಗುಡ್ಡೋಡಗಿ, ದತ್ತಾ ವಾಸ್ಟರ್, ಮೃಣಾಲಿನಿ ದೇಶಪಾಂಡೆ, ಮಲ್ಲಿಕಾರ್ಜುನ ಬುಟಾಳಿ, ರಿಯಾಜ್ ಸನದಿ, ವಿಲೀನರಾಜ ಯಲಮಲ್ಲೇ, ಆಶಿಫ್ ತಂಬೋಳಿ, ದಿಲೀಪ ಲೋನಾರಿ, ಕಲ್ಲೇಶ್ ಮಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article