ಖಾಸಗಿ ಶಾಲೆಗೆ ಸಡ್ಡು ಹೊಡೆದ ಸರ್ಕಾರಿ ಶಾಲೆ

KannadaprabhaNewsNetwork | Published : Mar 2, 2024 1:48 AM

ಸಾರಾಂಶ

ಒಂದೂವರೆ ಕೋಟಿ ರುಪಾಯಿ ಅನುದಾನದಲ್ಲಿ ನವೀಕರಣಗೊಂಡ ಇಂಡಿ ತಾಲೂಕಿನ ಅಥರ್ಗಾ ಗ್ರಾಮದ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯ ಉದ್ಘಾಟನೆ ಕಾರ್ಯಕ್ರಮ ಮಾ.3ರಂದು ನಡೆಯಲಿದೆ. ಅಂದು ಬೆಳಗ್ಗೆ ಸಂಸದ ರಮೇಶ ಜಿಗಜಿಣಗಿ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಉದ್ಘಾಟನೆ ಮಾಡಲಿದ್ದಾರೆ ಎಂದು ಅಥರ್ಗಾ ಗ್ರಾಪಂ ಅಧ್ಯಕ್ಷ ನಾಗರಾಜಗೌಡ ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ಇಲ್ಲಿನ ಸರ್ಕಾರಿ ಶಾಲೆಯ ಹಂಚಿನ ಚಾವಣಿ ಸಂಪೂರ್ಣವಾಗಿ ಮುರಿದು ಮಕ್ಕಳು ಮತ್ತು ಶಿಕ್ಷಕರು ಆತಂಕದಲ್ಲೇ ಪಾಠ, ಪ್ರವಚನ ಮಾಡುತ್ತಿದ್ದರು. ಇದನ್ನು ಅರಿತ ಗ್ರಾಮಸ್ಥರೆಲ್ಲರು ಸಂಸದ ರಮೇಶ ಜಿಗಜಿಣಗಿ ಅವರನ್ನು ಭೇಟಿ ಮಾಡಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲು ಅನುದಾನಕ್ಕೆ ಮನವಿ ಮಾಡಿದ್ದೆವು.

ಈ ವೇಳೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಂಸದರು ₹1 ಕೋಟಿ ಅನುದಾನ ನೀಡಿ ಶಾಲೆಯ ನವೀಕರಣಕ್ಕೆ ಸಹಾಯ ಮಾಡಿದ್ದಾರೆ. ಇದರ ಜೊತೆಗೆ ಅಥರ್ಗಾ ಗ್ರಾಪಂನಿಂದ ₹45 ಲಕ್ಷ ಅನುದಾನವನ್ನು ನೀಡಿ ಅಭಿವೃದ್ಧಿಗೊಳಿಸಲಾಗಿದೆ. ಒಂದೂವರೆ ಕೋಟಿ ಅನುದಾನದಲ್ಲಿ ಖಾಸಗಿ ಶಾಲೆಯನ್ನೇ ಮೀರಿಸುವಷ್ಟು ಸರ್ಕಾರಿ ಶಾಲೆ ಇದೀಗ ನಿರ್ಮಾಣವಾಗಿದೆ. ಶಾಲೆಯ ಕೊಠಡಿಗಳು, ಛಾವಣಿ, ಫುಟಪಾತ್, ಶೌಚಾಲಯ, ಬಾಸ್ಕೆಟ್ ಬಾಲ್ ಮೈದಾನ, ಶಾಲೆಯ ಸುತ್ತಲು ಕಾಂಪೌಂಡ್ ಎಲ್ಲವನ್ನೂ ಹೈಟೆಕ್ ಆಗಿ ನಿರ್ಮಾಣ ಮಾಡಲಾಗಿದೆ. ಇಡೀ ಜಿಲ್ಲೆಯಲ್ಲೇ ಇಷ್ಟೊಂದು ಸುಸಜ್ಜಿತ ಮಾದರಿ ಶಾಲೆ ಎಲ್ಲೂ ಇಲ್ಲ. ಶಾಲೆ ನವೀಕರಣಕ್ಕೆ ಸಹಕರಿಸಿದ ಸಂಸದ ರಮೇಶ ಜಿಗಜಿಣಗಿಗೆ ಗ್ರಾಮಸ್ಥರು ಧನ್ಯವಾದ ಅರ್ಪಿಸಿದ್ದಾರೆ.

ಈ ವೇಳೆ ಪಂಚಾಯತಿ ಅಧ್ಯಕ್ಷ ನಾಗರಾಜಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಗಣಪತಿ ಮಾಣಿಕೋಲ, ಪಿಕೆಪಿಎಸ್ ಅಧ್ಯಕ್ಷ ಅಶೋಕಗೌಡ ಬಿರಾದಾರ, ಮುವ ಮುಖಂಡರಾದ ಪ್ರಕಾಶ ಹಿಟ್ಟನಳ್ಳಿ, ಸಲೀಂ ನಾದಾಫ್, ಶ್ರೀಶೈಲ ನಾಗಣಸೂರ ಉಪಸ್ಥಿತಿ ಇದ್ದರು.

Share this article