ಕನ್ನಡಪ್ರಭ ವಾರ್ತೆ ಗುರುಮಠಕಲ್
ಪಟ್ಟಣದಲ್ಲಿರುವ ಅಲ್ಪಸಂಖ್ಯಾತರ ಬಡಾವಣೆಗಳ ಮೂಲಭೂತ ಅಭಿವೃದ್ಧಿಗಾಗಿ 5 ಕೋಟಿ ರು.ಗಳ ಅನುದಾನ ಬಿಡುಗಡೆಯಾಗಿದ್ದು, ಅಲ್ಪಸಂಖ್ಯಾತರ ಮುಖಂಡರೊಂದಿಗೆ ಚರ್ಚಿಸಿ ಅಭಿವೃದ್ಧಿ ಕಾರ್ಯಗಳ ಕ್ರಿಯಾಯೋಜನೆ ಮಾಡಲಾಗುವುದು ಎಂದು ಶಾಸಕ ಶರಣಗೌಡ ಕಂದಕೂರು ಭರವಸೆ ನೀಡಿದರು.ಪಟ್ಟಣದ ಹೊರವಲಯದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಯಾದಗಿರಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ 2019-20ನೇ ಸಾಲಿನ ಪ್ರಧಾನ ಮಂತ್ರಿ ಜನವಿಕಾಸ ಯೋಜನೆ ಅಡಿಯಲ್ಲಿ ಅಂದಾಜು 2.35 ಕೋಟಿ ರು. ಗಳ ವೆಚ್ಚದಲ್ಲಿ ಮಂಜೂರಾದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಮಾದರಿ ಕಟ್ಟಡ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಉತ್ತಮ ಯೋಜನೆ ರೂಪಿಸುತ್ತೇನೆ. ಸರಕಾರದ ಯೋಜನೆಗಳು ಜನರಿಗೆ ತಲುಪುವ ಕಾರ್ಯ ಮಾಡುತ್ತೇನೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುತ್ತೇನೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ನನ್ನ ಕ್ಷೇತ್ರದಲ್ಲಿ ಯಾರು ಶಿಕ್ಷಣದಿಂದ ವಂಚಿತರಾಗಬಾರದು. ಉತ್ತಮ ಮತ್ತು ಗುಣಮಟ್ಟ ಕಲಿಕಾ ವಾತಾವರಣ ಕಲ್ಪಿಸಲು ಆದ್ಯತೆ ನೀಡುತ್ತೇನೆ. ಆರೋಗ್ಯ,ಶಿಕ್ಷಣ ಮತ್ತು ಶುದ್ಧವಾದ ಕುಡಿಯುವ ನೀರುಗಾಗಿ ಒತ್ತು ನೀಡುತ್ತೇನೆ. ಉತ್ತಮ ಕಲಿಕಾ ಶಿಕ್ಷಣಗಾಗಿ ಕ್ಷೇತ್ರದಲ್ಲಿ ಕಂಪ್ಯೂಟರ್ ಲ್ಯಾಬ್ ಗಳು ಮತ್ತು ಡೆಸ್ಕಗಳು ಸೇರಿದಂತೆ ಇತರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದು, ಉತ್ತಮ ಅಂಕಗಳೊಂದಿಗೆ ವಿದ್ಯಾರ್ಥಿಗಳು ತೇರ್ಗಡೆಯಾಗಬೇಕು ಎಂದರು.
ಅಲ್ಪಸಂಖ್ಯಾತರ ಇಲಾಖೆಯ ಜಿಲ್ಲಾ ಅಧಿಕಾರಿ ಪ್ರವೀಣಕುಮಾರ, ಬಸವರಾಜ ಶರಭೈ, ಕಾಲೇಜಿನ ಪ್ರಾಚಾರ್ಯ ನವಚೇತನರೆಡ್ಡಿ, ಪುರಸಭೆ ಮಾಜಿ ಅಧ್ಯಕ್ಷ ಪಪಣ್ಣ ಮನ್ನೆ, ಪುರಸಭೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಮಾಜಿ ತಾಪಂ ಸದಸ್ಯ ಮಲ್ಲಿಕಾರ್ಜುನ ಅರುಣಿ, ಮೈನಾರಿಟಿ ಅಧ್ಯಕ್ಷ ಮಹ್ಮದ್ ಇಸ್ಮಯಿಲ್ ಪ್ಯಾರೆ, ಪುರಸಭೆ ಸದಸ್ಯರಾದ ಖಾಜಾ ಮಯನೊದ್ಧೀನ್, ಅನ್ವರ್ ಹೈಮದ್, ಆಶನ್ನ ಬುದ್ದ, ಸೀರಜ್ ಚಿಂತಕುಂಟಿ, ಹಿರಿಯ ಮುಖಂಡರಾದ ಜಿ. ತಮ್ಮಣ್ಣ, ಕಿಷ್ಟಾರೆಡ್ಡಿ, ರವೀಂದ್ರರೆಡ್ಡಿ ಗವಿನೋಳ ಸೇರಿದಂತೆ ಇತರರಿದ್ದರು.