ಸೋಮರಡ್ಡಿ ಅಳವಂಡಿ ಕೊಪ್ಪಳ
ಈ ಶಾಲೆ ಕಂಗೊಳಿಸುತ್ತಿದೆ. ಶಾಲೆಯ ಒಳ ಮತ್ತು ಹೊರಗೂ ವಿಶೇಷ ಬಣ್ಣ ಬಳೆಯಲಾಗಿದೆ. ಅಷ್ಟೇ ಅಲ್ಲ, ಶಾಲೆಯ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗೆ ನಿತ್ಯವೂ ಗುಂಪು ಚರ್ಚೆ ಮಾಡಿ ವಿಶೇಷ ತರಗತಿಗಳನ್ನು ನಡೆಸಲಾಗುತ್ತದೆ.ಅಷ್ಟಕ್ಕೂ ಇದು, ಯಾವುದೋ ಖಾಸಗಿ ಶಾಲೆಯಲ್ಲ. ಕೊಪ್ಪಳ ನಗರದ ಬನ್ನಿಕಟ್ಟಿಯಲ್ಲಿರುವ ಸರ್ಕಾರಿ ಪ್ರೌಢ ಶಾಲೆ.
ಹೌದು, ಪ್ರಸಕ್ತ ವರ್ಷ ಶಾಲೆಯ ಮುಖ್ಯೋಪಾಧ್ಯಯ ಶೇಖಣ್ಣ ಸಿ.ಹಾಗೂ ಇತರ ಶಿಕ್ಷಕರು ಮತ್ತು ಸಿಬ್ಬಂದಿ ಸೇರಿಕೊಂಡು ಇಡೀ ಶಾಲೆಗೆ ತಾವೇ ತಮ್ಮ ಸ್ವಂತ ಹಣ ಹಾಕಿ ಸುಣ್ಣಬಣ್ಣ ಮಾಡಿಸಿದ್ದಾರೆ. ಹಲವಾರು ವರ್ಷಗಳಿಂದ ಸುಣ್ಣ ಬಣ್ಣ ಕಾಣದೆ ಮಾಸಿ ಹೋಗಿದ್ದ ಶಾಲೆಗೆ ಸರ್ಕಾರದ ಅನುದಾನ ನಿರೀಕ್ಷೆ ಮಾಡುತ್ತಾ ಕುಳಿತುಕೊಳ್ಳದೆ ಎಲ್ಲರೂ ಕೈಲಾದ ಸಹಾಯ ಮಾಡುತ್ತಾ ಸುಮಾರು ₹60-70 ಸಾವಿರ ಸಂಗ್ರಹಿಸಿ ಸುಣ್ಣ ಬಣ್ಣ ಮಾಡಿಸಿದ್ದಾರೆ.ವಿಶೇಷ ತರಗತಿಗಳು: ಕೇವಲ ಶಾಲೆಗೆ ಮಾತ್ರ ಸುಣ್ಣಬಣ್ಣ ಮಾಡಿಲ್ಲ. ಮಕ್ಕಳ ಕಲಿಕೆಯ ಮಟ್ಟ ಹೆಚ್ಚಳ ಮಾಡಲು, ಫಲಿತಾಂಶ ಸುಧಾರಣೆ ಮಾಡಲು ಹಲವಾರು ಯೋಜನೆ ಜಾರಿ ಮಾಡಿದ್ದಾರೆ.
ಶಾಲೆಯಲ್ಲಿ ಹಿಂದುಳಿದ ಮಕ್ಕಳ ಯಾದಿ ಸಿದ್ಧ ಮಾಡಿ, ಅವರಿಗೆ ವಿಶೇಷ ತರಗತಿಗಳನ್ನು ನಿತ್ಯವೂ ನಡೆಸುತ್ತಾರೆ. ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಗುಂಪು ಚರ್ಚೆ ಏರ್ಪಡಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳ ಕಲಿಕಾ ಮಟ್ಟ ಸುಧಾರಣೆಯಾಗುತ್ತಿದೆ.ನಿತ್ಯವೂ ವಿದ್ಯಾರ್ಥಿಗಳಿಗೆ ಕರೆ: ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರಿಗೆ ಹಂಚಿಕೆ ಮಾಡಲಾಗಿದೆ. ಹಂಚಿಕೆಯಾದ ಮಕ್ಕಳಿಗೆ ನಿತ್ಯವೂ ಬೆಳಗ್ಗೆ 5 ಗಂಟೆಗೆ ಕರೆ ಮಾಡಿ ಎಬ್ಬಿಸುತ್ತಾರೆ. ಅಷ್ಟೇ ಅಲ್ಲ ಓದಿಕೊಳ್ಳುವಂತೆ ಮಾರ್ಗದರ್ಶನ ಮಾಡುತ್ತಾರೆ. ಈ ಕುರಿತು ಪಾಲಕರೊಂದಿಗೆ ಚರ್ಚೆ ಮಾಡಿ ಮಕ್ಕಳಿಗೆ ಓದುವಂತೆ ಮಾಡುತ್ತಾರೆ. ಇದರಿಂದ ವಿದ್ಯಾರ್ಥಿಗಳು ನಿತ್ಯವೂ ಬೆಳಗ್ಗೆಯೇ ಓದುವ ಅಭ್ಯಾಸ ಮಾಡಿಕೊಂಡಿದ್ದಾರೆ. ಓದುವಾಗ ಕಠಿಣವೆನಿಸಿದರೆ ಆಗಲೇ ಶಿಕ್ಷಕರೊದಿಗೆ ಚರ್ಚೆ ಮಾಡಲು ಅವಕಾಶ ನೀಡಲಾಗಿದೆ. ಗೊಂದಲ ಇರುವುದನ್ನು ದೂರವಾಣಿ ಮೂಲಕವೇ ಇತ್ಯರ್ಥ ಮಾಡುತ್ತಾರೆ. ಹೀಗೆ, ಕೊಪ್ಪಳ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಈಗ ಹಲವಾರು ಸುಧಾರಣೆಗನ್ನು ಕೈಗೊಳ್ಳಲಾಗಿರುವುದು ಇದರೇ ಶಾಲೆಗಳಿಗೆ ಪ್ರೇರಣೆಯಾಗಿದೆ.
ಕಾಂಪೌಂಡ್ ಇಲ್ಲ: ಶಾಲೆಗೆ ಸೂಕ್ತ ಕಾಂಪೌಂಡ್ ಇಲ್ಲ. ಹೀಗಾಗಿ ಸಮಸ್ಯೆಯಾಗುತ್ತಿದೆ. ಯಾರಾದರೂ ದಾನಿಗಳ ಮೂಲಕ ಕಾಂಪೌಂಡ್ ಸಹ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಾಂಪೌಂಡ್ ನಿರ್ಮಾಣಕ್ಕೆ ದಾನಿಗಳು ಸಿಗದೆ ಇದ್ದರೆ ಸರ್ಕಾರದ ಅನುದಾನ ನಿರೀಕ್ಷೆ ಮಾಡುವುದು, ಅದು ಆಗದೆ ಇದ್ದರೆ ಬರುವ ವರ್ಷದ ವೇಳೆಗೆ ಇದೇ ಮಾದರಿಯಲ್ಲಿ ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳಲು ಶಿಕ್ಷಕರು ಹಾಗೂ ಮುಖ್ಯೋಪಾಧ್ಯಾಯರು ಚಿಂತನೆ ನಡೆಸಿದ್ದಾರೆ.ಪಾಲಕರು ನಮ್ಮನ್ನೇ ನಂಬಿ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಹೀಗಾಗಿ ಅವರ ಕಲಿಕಾ ಮಟ್ಟ ಸುಧಾರಣೆ ಮಾಡುವ ದಿಸೆಯಲ್ಲಿ ಹಲವಾರು ವಿನೂತನ ಕ್ರಮವಹಿಸಿದ್ದೇವೆ. ಹಾಗೆಯೇ ಶಾಲೆ ಮಾಸಿ ಹೋಗಿದ್ದರಿಂದ ನಾವೆಲ್ಲರೂ ಸೇರಿ ಹಣಹಾಕಿ, ಸುಣ್ಣಬಣ್ಣ ಮಾಡಿಸಿದ್ದೇವೆ ಎಂದು ಶಾಲಾ ಮುಖ್ಯೋಪಾಧ್ಯಾಯ ಶೇಕಣ್ಣ ಸಿ. ತಿಳಿಸಿದ್ದಾರೆ.