ಹಿರೇಬೀಡಿನಾಳ ಗ್ರಾಮದಲ್ಲಿ ಶಾಲೆ ಗೋಡೆಗೆ ಸ್ವತಃ ಬಣ್ಣ ಹಚ್ಚಿದ ಜಿಪಂ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ
ಅಮರೇಶ್ವರಸ್ವಾಮಿ ಕಂದಗಲ್ಲಮಠ
ಕನ್ನಡಪ್ರಭ ವಾರ್ತೆ ಕುಕನೂರುಸರ್ಕಾರಿ ಶಾಲೆಗಳ ಅಂಗಳ ಸ್ವಚ್ಛತೆ, ಗೋಡೆಗಳಿಗೆ ಬಣ್ಣ, ಗೋಡೆ ಬರಹ.. ಹೀಗೆ ಸರ್ಕಾರಿ ಶಾಲೆಗಳನ್ನು ಇಲ್ಲೋರ್ವ ಸರ್ಕಾರಿ ಅಧಿಕಾರಿ ತಮ್ಮ ಸ್ವಂತ ಹಣದಲ್ಲಿ ಅಭಿವೃದ್ಧಿ ಮಾಡುತ್ತಿರುವುದು ಸಾರ್ವಜನಿಕರ ಗಮನ ಸೆಳೆದಿದೆ.
ಕೊಪ್ಪಳದ ಜಿಪಂ ಉಪ ಕಾರ್ಯದರ್ಶಿ ಆಗಿರುವ ಮಲ್ಲಿಕಾರ್ಜುನ ತೊದಲಗಿ ಇಂಥದೊಂದು ಕೈಂಕರ್ಯ ಆರಂಭಿಸಿದ್ದು, ತಮ್ಮ ಬಿಡುವಿನ ವೇಳೆಯನ್ನು ಹೀಗೆ ವಿನಿಯೋಗಿಸುತ್ತಿದ್ದಾರೆ.ಮೂಲತಃ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದವರಾದ ತೊದಲಬಾಗಿ, ತಿಂಗಳ ಕೊನೆ ಶನಿವಾರ, ಅಂದರೆ ನಾಲ್ಕನೇ ಶನಿವಾರ ರಜೆ ದಿನವಾಗಿದ್ದು, ಅದನ್ನು ಯಾವುದಾದರೂ ಒಂದು ಶಾಲೆಯ ಅಭಿವೃದ್ಧಿಗೆ ಮೀಸಲಿಡುತ್ತಾರೆ. ಅದರಂತೆ ಈ ಸಲ ಕುಕನೂರು ತಾಲೂಕಿನ ಹಿರೇಬೀಡಿನಾಳ ಗ್ರಾಮದಲ್ಲಿ 207ನೇ ವಾರದ ಕಾರ್ಯ ಮಾಡಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಗೆ ಪೇಂಟಿಂಗ್ ಮಾಡಿದ್ದಾರೆ. ತೊದಲಬಾವಿ ಅವರು ಬಂದು ಕೆಲಸ ಮಾಡುತ್ತಿರುವುದನ್ನು ನೋಡಿ, ಪ್ರೇರಣೆಗೊಂಡು ಗ್ರಾಪಂ ಸಿಬ್ಬಂದಿ, ಶಿಕ್ಷಕ ವರ್ಗದವರು ಸಹ ಆಗಮಿಸಿ ಕೆಲಸ ಮಾಡಿದರು. ತಾವೊಬ್ಬ ಉನ್ನತ ಹುದ್ದೆ ಅಧಿಕಾರಿ ಎಂಬ ಯಾವುದೇ ಹಮ್ಮು-ಬಿಮ್ಮು ತೋರದೇ ಸ್ವತಃ ಪೇಂಟ್ ಮಾಡಿದರು.
207 ಶಾಲೆಗಳಿಗೆ ಬಣ್ಣ:ಈ ಹಿಂದೆ ಕೆಲಸ ಮಾಡಿದ ಬಾಗಲಕೋಟೆ ಜಿಲ್ಲೆಯಲ್ಲಿ 108 ಶಾಲೆ, ಶಿವಮೊಗ್ಗದಲ್ಲಿ 72 ಶಾಲೆ ಹಾಗೂ ಈಗ ಸದ್ಯ ಕೆಲಸ ಮಾಡುತ್ತಿರುವ ಕೊಪ್ಪಳದಲ್ಲಿ 27 ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಿದ್ದಾರೆ.
ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೂ ಇವರು ಶ್ರಮಿಸುತ್ತಾರೆ. ಹೆಣ್ಣು ಮಗುವಿನ ಕುಟುಂಬಸ್ಥರೊಂದಿಗೆ ಶಾಲಾ ಆವರಣದಲ್ಲಿ 20 ಸಸಿ ನೆಡುವ ಕಾರ್ಯಕ್ರಮ ಮಾಡುತ್ತಿದ್ದಾರೆ. ತಮ್ಮೊಂದಿಗೆ ಆಸಕ್ತಿದಾಯಕ ಪರಿಸರ ಪ್ರೇಮಿಗಳ ತಂಡವನ್ನು ರಚಿಸಿ ಅನೇಕ ಸಮಾಜಮುಖಿ ಕಾರ್ಯ ಮಾಡುತ್ತಿದ್ದಾರೆ.