ಲಕ್ಷ್ಮೇಶ್ವರ: ಪಟ್ಟಣದ ಕೆಂಚಲಾಪುರ ಬಡಾವಣೆಯ 33 ವರ್ಷ ಇತಿಹಾಸ ಹೊಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬಂದ್ ಮಾಡಿರುವ ಹಿನ್ನೆಲೆ ಮಂಗಳವಾರ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ ಶಿಮಿಕೇರಿ ಅವರು ಶಿಕ್ಷಕರು ಹಾಗೂ ಪಾಲಕರ ಮನವೊಲಿಸಿ ಶಾಲೆಗೆ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ತರಲು ಯಶಸ್ವಿಯಾಗಿದ್ದಾರೆ.
ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇರುವ ಶಾಲೆಗೆ ಶಿಕ್ಷಣ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ದಾಖಲಾತಿ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕೆ ಸುತ್ತಮುತ್ತಲಿನ ಜನರ ಸಹಕಾರ ಅಗತ್ಯವಾಗಿದೆ ಎಂದು ಮಂಜುನಾಥ ಮಾಗಡಿ ಹಾಗೂ ಕೆಂಚಲಾಪುರ ಓಣಿಯ ಹಿರಿಯರ ನಾಗರಿಕರ ಒತ್ತಾಯವಾಗಿದೆ.
ಕಳೆದ 4 ವರ್ಷದ ಶಾಲೆಯ ವಿದ್ಯಾರ್ಥಿಗಳ ಹಾಜರಾತಿ ಸಂಖ್ಯೆ ಕಡಿಮೆಯಾಗುತ್ತ ಬಂದರೂ ಇಲಾಖೆಯ ಕಣ್ಮುಚ್ಚಿ ಕುಳಿತಿದೆ. ಕಳೆದ ವರ್ಷ 26 ಮಕ್ಕಳ ಹಾಜರಾತಿ ಇತ್ತು. ಈ ಬಾರಿ 11ಕ್ಕೆ ಇಳಿದಿದೆ. ಜೂನ್‌ನಲ್ಲಿ 4 ವಿದ್ಯಾರ್ಥಿಗಳ ಜುಲೈನಲ್ಲಿ 7 ವಿದ್ಯಾರ್ಥಿಗಳು ಪಾಲಕರನ್ನು ಕರೆದುಕೊಂಡು ಬಂದು ಟಿಸಿ ತೆಗೆದುಕೊಂಡು ಬೇರೆ ಶಾಲೆಗೆ ದಾಖಲಾತಿ ಹೊಂದಿ ತಿಂಗಳು ಗತಿಸುತ್ತ ಬಂದಿದೆ. ಇದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಮಕ್ಕಳನ್ನು ಕರೆತರಲು ವಿಳಂಬ ಮಾಡಿರುವುದು ವಿಪರ್ಯಾಸ.ಶಾಲೆಯಲ್ಲಿ ಇರುವ ಇಬ್ಬರು ಶಿಕ್ಷಕಿಯರನ್ನು ಕಳೆದ 1 ತಿಂಗಳಿನಿಂದ ಎಸ್ಐಆರ್ ಕಾರ್ಯ ಹಾಗೂ ಬಿಎಲ್‌ಒ ಕೆಲಸಕ್ಕೆ ನೇಮಕ ಮಾಡಲಾಗಿದೆ. ಹೀಗಾಗಿ ಶಾಲೆಯ ಕಡೆ ಗಮನ ಕೊಡದೆ ಇರುವುದರಿಂದ ಪಾಲಕರು ಟಿಸಿ ತೆಗೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ.
ಕಾರಣ ಕೇಳಿ ನೋಟಿಸ್: ಪಟ್ಟಣದ ಕೆಂಚಲಾಪುರ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ನಿರ್ಲಕ್ಷ್ಯದಿಂದ ಮಕ್ಕಳ ದಾಖಲಾತಿ ಕಡಿಮೆಯಾಗಿದೆ. 2 ದಿನದಲ್ಲಿ ಓರ್ವ ಪರಿಣಿತ ಶಿಕ್ಷಕರನ್ನು ನಿಯೋಜಿಸಿ ಅಲ್ಲಿರುವ ಒಬ್ಬ ಶಿಕ್ಷಕಿ ಬೇರೆ ಕಡೆ ನಿಯೋಜನೆ ಮಾಡಲಾಗುವುದು. ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಈ ವಾರ ಎಸ್‌ಡಿಎಂಸಿ ಅಧ್ಯಕ್ಷ, ಸದಸ್ಯರ ಹಾಗೂ ಸುತ್ತಮುತ್ತಲಿನ ಜನರನ್ನು ಕರೆಸಿ ಸಭೆ ಮಾಡಲಾಗುವುದು ಎಂದು ಬಿಇಒ ಶಿವರಾಜ ಶಿಮಿಕೇರಿ ತಿಳಿಸಿದರು.