ಲಕ್ಷ್ಮೇಶ್ವರದ ಕ್ರೀಡಾಂಗಣ ಜಾಗದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ವಿರೋಧ

KannadaprabhaNewsNetwork |  
Published : Aug 26, 2026, 02:30 AM IST
ಸಾರ್ವಜನಿಕರ ಜತೆ ತಹಸೀಲ್ದಾರ್ ಎಂ. ಧನಂಜಯ ಚರ್ಚೆ ನಡೆಸಿದರು. | Kannada Prabha

ಸಾರಾಂಶ

ಭೂಮಾಪನ ಇಲಾಖೆಯವರಿಗೆ ಸ್ಥಳದಲ್ಲಿಯೇ ಅಳತೆಗೆ ತಕರಾರು ಅರ್ಜಿ ಬರೆದು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆ ಭೂಮಾಪನಾ ಅಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮರಳಿ ಹೋದರು.

ಲಕ್ಷ್ಮೇಶ್ವರ: ಕ್ರೀಡಾಂಗಣದ ಜಾಗದಲ್ಲಿ ಪ್ರಜಾಸೌಧ ನಿರ್ಮಿಸಲು ವಿರೋಧ ವ್ಯಕ್ತಪಡಿಸಿದ ಘಟನೆ ಮಂಗಳವಾರ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ದೊಡ್ಡೂರು ರಸ್ತೆಯಲ್ಲಿ ಉಮಾ ವಿದ್ಯಾಲಯ ಹೈಸ್ಕೂಲ್ ಮೈದಾನದ ಬಳಿ ನಿರ್ಮಿಸಲು ಉದ್ದೇಶಿಸಿರುವ ತಾಲೂಕು ಆಡಳಿತದ ಪ್ರಜಾಸೌಧ ಕಟ್ಟಡದ ಜಾಗದ ಅಳತೆ ಮಾಡಲು ತಹಸೀಲ್ದಾರ್ ಎಂ. ಧನಂಜಯ ಅವರೊಂದಿಗೆ ಇತರೆ ಇಲಾಖೆಯ ಅಧಿಕಾರಿಗಳು ಆಗಮಿಸಿದ ವೇಳೆ ಪಟ್ಟಣದ ಕಾಂಗ್ರೆಸ್ ಮುಖಂಡ ಚನ್ನಪ್ಪ ಜಗಲಿ ಹಾಗೂ ಹಲವರು ವಿರೋಧ ವ್ಯಕ್ತಪಡಿಸಿದರು. ಮಂಗಳವಾರ ಭೂಮಾಪನ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆ, ಕ್ರೀಡಾ ಇಲಾಖೆಗೆ ಸೇರಿದ ಜಾಗದ ಸರ್ವೆ ಮಾಡಲು ಆಗಮಿಸಿದ ವೇಳೆ ಮೈದಾನದಲ್ಲಿದ್ದ ಯುವಕರು ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಚನ್ನಪ್ಪ ಜಗಲಿ ಅವರ ಮುಖಂಡತ್ವದಲ್ಲಿ ತಹಸೀಲ್ದಾರ್ ಧನಂಜಯ ಎಂ. ಅವರ ಸಮ್ಮುಖದಲ್ಲಿಯೇ ಲಕ್ಷ್ಮೇಶ್ವರದಲ್ಲಿ ಇರುವ ಒಂದೇ ದೊಡ್ಡ ಆಟದ ಮೈದಾನ ಇದಾಗಿದ್ದು, ೪೦೦ ಮೀ ಓಟದ ಮೈದಾನಕ್ಕೆ ಅವಶ್ಯವಿರುವಷ್ಟು ಜಾಗವನ್ನು ಬಿಟ್ಟು ಉಳಿದ ಜಾಗದಲ್ಲಿ ಪ್ರಜಾಸೌಧ ನಿರ್ಮಾಣ ಮಾಡಿ. ಪ್ರಜಾಸೌಧ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಯಾವುದೇ ಕಾರಣಕ್ಕೂ ಒಂದಿಂಚೂ ಮೈದಾನದ ಜಾಗವನ್ನು ಬಿಟ್ಟು ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

ಆಗ ತಹಸೀಲ್ದಾರ್ ಧನಂಜಯ ಎಂ. ಅವರು ಕಂದಾಯ ಇಲಾಖೆಗೆ ಸೇರಿದ 2 ಎಕರೆ 34 ಗುಂಟೆ ನಿವೇಶನದಲ್ಲಿ ಮಾತ್ರ ಪ್ರಜಾಸೌಧ ನಿರ್ಮಿಸುತ್ತೇವೆ. ಕಂದಾಯ ಇಲಾಖೆಗೆ ಸೇರಿದ ನಿವೇಶನದಲ್ಲಿ ಪ್ರಜಾಸೌಧ ನಿರ್ಮಿಸುವುದು ಉದ್ದೇಶವಾಗಿದೆ. ಮೂಲತಃ ಈ ನಿವೇಶನ ಕಂದಾಯ ಇಲಾಖೆಗೆ ಸೇರಿದ್ದು, ಕ್ರೀಡಾ ಹಾಗೂ ಯುವ ಸಬಲೀಕರಣ ಇಲಾಖೆಗೆ ಸೇರಿದ ಉಳಿದ ಜಾಗ ಇದೆ. ಅನ್ಯ ಇಲಾಖೆಯಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದಾಗ, ತಾಲೂಕು ಕ್ರೀಡಾಂಗಣವಾಗುವ ಈ ಮೈದಾನದಲ್ಲಿ ೪೦೦ ಮೀಟರ್ ಸುತ್ತಳತೆ ಜಾಗ ಬೇಕಾಗಿರುವುದರಿಂದ ಪ್ರಜಾಸೌಧ ನಿರ್ಮಾಣವಾದರೆ ಮೈದಾನಕ್ಕೆ ತೊಂದರೆಯಾಗುತ್ತದೆ. ಅದಕ್ಕಾಗಿ ಜಾಗದ ಅಳತೆ ಮಾಡುವುದಕ್ಕೂ ನಮ್ಮ ವಿರೋಧವಿದ್ದು, ಈ ಕುರಿತಂತೆ ಊರಿನ ಹಿರಿಯರ, ಪ್ರಮುಖರ ಸಭೆಯನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕರೆದು ಕ್ರೀಡಾಂಗಣಕ್ಕೆ ಧಕ್ಕೆಯಾಗದಂತೆ ಕಟ್ಟಡ ನಿರ್ಮಿಸಲು ನಿರ್ಧರಿಸಿ ಎಂದು ಸಾರ್ವಜನಿಕರು ಹೇಳಿದರು.

ಭೂಮಾಪನ ಇಲಾಖೆಯವರಿಗೆ ಸ್ಥಳದಲ್ಲಿಯೇ ಅಳತೆಗೆ ತಕರಾರು ಅರ್ಜಿ ಬರೆದು ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನೆಲೆ ಭೂಮಾಪನಾ ಅಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಮರಳಿ ಹೋದರು.

ಈ ವೇಳೆ ಕಂದಾಯ ನಿರೀಕ್ಷಕ ಎಂ.ಎ. ನದಾಫ್, ತಾಲೂಕು ಭೂಮಾಪನ ಅಧಿಕಾರಿ ಇಲಿಯಾಸ ಮಕಾಂದಾರ, ಪುರಸಭೆ ಕಂದಾಯ ಅಧಿಕಾರಿ ಸುರೇಶ ಪೂಜಾರ, ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ಮಂಜುನಾಥ ಉಳ್ಳಟ್ಟಿ, ಯುವ ಮುಖಂಡರಾದ ಡಿ.ಬಿ. ಫಕ್ಕಿರಪ್ಪ, ಮೋಹನ ನಂದೆಣ್ಣವರ, ಸಂತೋಷ ನಂದೆಣ್ಣವರ, ಮಂಜುನಾಥ ಎಚ್.ಎಸ್., ವಿಶ್ವನಾಥ ಭಜಕ್ಕನವರ, ಅಬ್ದುಲ್‌ಗನಿ ನವಲಗುಂದ, ಎಸ್.ಎಫ್. ಕೊಡ್ಲಿ, ಮುಖ್ಯೋಪಾಧ್ಯಾಯ ಎಂ.ಬಿ. ಸಂಗನಪೇಟ, ಅಶೋಕ ಲಿಂಗಶೆಟ್ಟಿ ಸೇರಿದಂತೆ ಅನೇಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಹುಲಿ ಪ್ರತ್ಯಕ್ಷ: ಸೆರೆ ಹಿಡಿಯಲು ಸ್ಥಳೀಯರ ಒತ್ತಾಯ
ಕುಷ್ಟಗಿಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ