ವೈದ್ಯರ ನಿರ್ಲಕ್ಷ್ಯದಿಂದ ಶಿಶು ಸಾವು, ಸರ್ಕಾರಿ ಆಸ್ಪತ್ರೆ ಎದುರು ಶವವಿಟ್ಟು ಪ್ರತಿಭಟನೆ

KannadaprabhaNewsNetwork |  
Published : Aug 26, 2026, 02:30 AM IST
ಹಾನಗಲ್ಲ ಸರ್ಕಾರಿ ಆಸ್ಪತ್ರೆ ಬಾಗಿಲಲ್ಲಿ ಶವವಿಟ್ಟುಕೊಂಡು ಧರಣಿ ನಡೆಸುತ್ತಿರುವ ಚಿಕ್ಕೇರಿಹೊಸಳ್ಳಿ ಮಂಜುನಾಥ ಜೀವಣ್ಣನವರ ಕುಟುಂಬದವರು ಮತ್ತು ಸಾರ್ವಜನಿಕರೊಂದಿಗೆ ಚರ್ಚಿಸುತ್ತಿರುವ ಜಿಲ್ಲಾ ನೋಡಲ್ ಅಧಿಕಾರಿ ಚನ್ನಬಸಯ್ಯ ವಿರಕ್ತಮಠ, | Kannada Prabha

ಸಾರಾಂಶ

ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ತೆತ್ತ ೨೪ ದಿನಗಳ ಶಿಶುವನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆ ಬಾಗಿಲಲ್ಲಿಟ್ಟುಕೊಂಡು ಕುಟುಂಬದವರು ಸಂಜೆಯವರೆಗೂ ಧರಣಿ ನಡೆಸಿದರು. ಸಾವಿಗೆ ಕಾರಣವಾದ ಹಾನಗಲ್ಲ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು, ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಹಾನಗಲ್ಲ: ವೈದ್ಯರ ನಿರ್ಲಕ್ಷ್ಯದಿಂದ ಪ್ರಾಣ ತೆತ್ತ ೨೪ ದಿನಗಳ ಶಿಶುವನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆ ಬಾಗಿಲಲ್ಲಿಟ್ಟುಕೊಂಡು ಕುಟುಂಬದವರು ಸಂಜೆಯವರೆಗೂ ಧರಣಿ ನಡೆಸಿದರು. ಸಾವಿಗೆ ಕಾರಣವಾದ ಹಾನಗಲ್ಲ ಸರ್ಕಾರಿ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮೇಲೆ ಕ್ರಮ ಜರುಗಿಸಬೇಕು, ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಜುಲೈ ೩೧ರ ಸಂಜೆ ಹಾನಗಲ್ಲ ತಾಲೂಕಿನ ಚಿಕ್ಕೇರಿ ಹೊಸಳ್ಳಿಯ ಮಂಜುನಾಥ ಜೀವಣ್ಣನವರ ಎಂಬುವವರ ಗರ್ಭಿಣಿ ಪತ್ನಿಯನ್ನು ಹೆರಿಗೆಗಾಗಿ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಲ್ಲಿ ಹೆರಿಗೆಗೆ ವೈದ್ಯರು, ಶುಶ್ರೂಷಕರು ಮಾಡಿದ ಪ್ರಯತ್ನ ವಿಫಲವಾಗಿ, ನಂತರ ಹಾವೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕಳಿಸಿಕೊಡಲಾಯಿತು. ಅಲ್ಲಿನ ಸರ್ಕಾರಿ ಆಸ್ಪತ್ರೆಯ ಬಾಗಿಲು ತಲುಪುತ್ತಿದ್ದಂತೆ ಹೆರಿಗೆ ಆಯಿತು. ಆದರೆ ಮಗುವಿನ ಸ್ಥಿತಿ ಗಂಭೀರವಾಗಿತ್ತು. ಕೂಡಲೇ ಚಿಕಿತ್ಸೆ ಆರಂಭಿಸಿದರಾದರೂ ಮಗುವಿನ ಜೀವದ ಬಗ್ಗೆ ಭರವಸೆ ಉಳಿಯದೇ, ನಂತರ ಅಲ್ಲಿನ ಖಾಸಗಿ ಆಸ್ಸತ್ರೆಗೆ ಮಗುವನ್ನು ದಾಖಲಿಸಲಾಯಿತು. ಆದರೆ ಮಗುವಿನ ಜೀವ ಉಳಿಸಲು ವೈದ್ಯರು ಮಾಡಿದ ಯತ್ನಗಳು ಫಲಿಸದೇ ಮಗು ಮಂಗಳವಾರ ಮೃತಪಟ್ಟಿದೆ.

ಹಾನಗಲ್ಲಿನಲ್ಲಿ ಜುಲೈ ೩೧ರಂದು ತಾಯಿಯನ್ನು ಹೆರಿಗೆಗೆ ದಾಖಲಿಸಿದಾಗಲೇ ವೈದ್ಯರು ಅಥವಾ ಹೆರಿಗೆ ಮಾಡಿಸುವ ಶುಶ್ರೂಷಕರು ಸರಿಯಾದ ನಿರ್ಣಯ ತೆಗೆದುಕೊಂಡಿದ್ದರೆ ಮಗುವಿನ ಪ್ರಾಣಕ್ಕೆ ಅಪಾಯವಿರಲಿಲ್ಲ. ತಮ್ಮಿಂದಾಗದಿದ್ದರೆ ಕೂಡಲೇ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಬೇಕಾಗಿತ್ತು. ಆದರೆ ಇಲ್ಲಿನ ವೈದ್ಯರು, ಶುಶ್ರೂಷಕರು ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಮಗುವಿನ ಪ್ರಾಣ ಹೋಗಲು ಹಾನಗಲ್ಲ ಸರ್ಕಾರಿ ಅಸ್ಪತ್ರೆಯ ಸಿಬ್ಬಂದಿಯ ವೈಫಲ್ಯವೇ ಕಾರಣ ಎಂದು ದೂರಿದರು.

ಮಂಗಳವಾರ ಹಾವೇರಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನವಾದ ಮಗುವನ್ನು ನೇರವಾಗಿ ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ತಂದ ಕುಟುಂಬದವರು ಆಸ್ಪತ್ರೆ ಬಾಗಿಲಿನಲ್ಲಿ ಧರಣಿ ನಡೆಸಿದರು.

ನೋಡಲ್ ಅಧಿಕಾರಿ ಭೇಟಿ: ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ನೋಡಲ್ ಅಧಿಕಾರಿ ಚನ್ನಬಸಯ್ಯ ವಿರಕ್ತಮಠ, ಜಿಲ್ಲಾಸ್ಪತ್ರೆಯಲ್ಲಿ ಕೆಲವು ಸೌಲಭ್ಯಗಳ ಕೊರತೆ ಕಾರಣದಿಂದ ಈ ಮಗುವನ್ನು ಖಾಸಗಿ ಆಸ್ಪತ್ರೆಗೆ ಕಳಿಸಿ ಆಸ್ಪತ್ರೆಯಿಂದಲೇ ಚಿಕಿತ್ಸೆ ಕೊಡಿಸಲಾಗಿದೆ. ಆದಾಗ್ಯೂ ಶಿಶು ಮರಣ ಹೊಂದಿದ್ದು, ಈ ಘಟನೆ ಬಗ್ಗೆ ಯಾವುದೇ ನಿರ್ಲಕ್ಷ್ಯ ತೋರುವುದಿಲ್ಲ ಎಂದರು. ಘಟನೆಯ ಕುರಿತು ತನಿಖೆ ನಡೆಸಿ, ತಪ್ಪಿತಸ್ಥರ ಮೇಲೆ ವಿಳಂಬವಿಲ್ಲದೆ ಕ್ರಮ ಜರುಗಿಸುವ ವಿಶ್ವಾಸ ವ್ಯಕ್ತಪಡಿಸಿದರೂ ಕೂಡ ಪ್ರತಿಭಟನಾಕಾರರು ಇದಕ್ಕೆ ಒಪ್ಪದೆ, ಜಿಲ್ಲಾ ವೈದ್ಯಾಧಿಕಾರಿಗಳೇ ಖುದ್ದಾಗಿ ಇಲ್ಲಿಗೆ ಭೇಟಿ ನೀಡಿ ಸ್ಥಳದಲ್ಲಿಯೇ ನಿರ್ಲಕ್ಷ್ಯವಹಿಸಿದ ವೈದ್ಯರನ್ನು ಅಮಾನತು ಮಾಡಬೇಕು ಧರಣಿ ಮುಂದುವರಿಸಿದರು.

ಸಂಜೆ ೬.೩೦ರ ಹೊತ್ತಿಗೆ ಜಿಲ್ಲಾ ನೋಡಲ್ ಅಧಿಕಾರಿ ಚನ್ನಬಸಯ್ಯ ವಿರಕ್ತಮಠ, ವೈದ್ಯಾಧಿಕಾರಿ ಅಖಿಲೇಶ ಮಾಳೋದೆ ಅವರು ಪ್ರತಿಭಟನಾ ನಿರತರೊಂದಿಗೆ ಚರ್ಚೆ ನಡೆಸಿ, ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದು ಹಾಗೂ ಶಿಶುವಿನ ತಾಯಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದ್ದರಿಂದ ಕುಟುಂಬದವರು ಹಾಗೂ ಸಾರ್ವಜನಿಕರು ಪ್ರತಿಭಟನೆಯನ್ನು ಕೈ ಬಿಟ್ಟರು.

ಹಾನಗಲ್ಲ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ ತೋರಿಕೆಗಾಗಿ ಒಂದು ಆಸ್ಪತ್ರೆ ಇದ್ದಂತಿದೆ. ಇಲ್ಲಿ ಬಂದ ರೋಗಿಗಳನ್ನು ನಿರ್ಲಕ್ಷಿಸುವುದು, ವಿನಾಕಾರಣ ಬೇರೆ ಆಸ್ಪತ್ರೆಗಳಿಗೆ ಕಳಿಸುವುದು, ಕೆಲವೊಮ್ಮೆ ಸರಿಯಾದ ಚಿಕಿತ್ಸೆಗೆ ಮುಂದಾಗದೇ ರೋಗಿಗಳನ್ನು ಹುಬ್ಬಳ್ಳಿ ಕಿಮ್ಸಗೆ ಕಳಿಸುವುದು ಸರ್ವೇಸಾಮಾನ್ಯವಾಗಿದೆ. ಜನಪ್ರತಿನಿಧಿಗಳು ಸರ್ಕಾರಿ ಆಸ್ಪತ್ರೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಬಡವರ ಕಷ್ಟಕ್ಕೆ ಆಸ್ಪತ್ರೆ ಸ್ಪಂದಿಸುತ್ತಿಲ್ಲ. ಅವರಿಂದ ಇಲ್ಲಿಗೆ ವೈದ್ಯರ ಕೊರತೆ ನೀಗಿಸಲು ಆಗುತ್ತಿಲ್ಲ. ಈಗ ಮೃತ ಶಿಶುವಿನ ಕುಟುಂಬಕ್ಕೆ ನ್ಯಾಯ ಒದಗಿಸುವ ತೀರಾ ಅಗತ್ಯವಿದೆ. ಇದು ಇಲಾಖೆಯದ್ದೇ ಜವಾಬ್ದಾರಿ ಎಂದು ಜೆಡಿಎಸ್‌ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಂಪಿಯಲ್ಲಿ ಹುಲಿ ಪ್ರತ್ಯಕ್ಷ: ಸೆರೆ ಹಿಡಿಯಲು ಸ್ಥಳೀಯರ ಒತ್ತಾಯ
ಕುಷ್ಟಗಿಯಲ್ಲಿ ಚುಟುಕು ಸಾಹಿತ್ಯ ಸಮ್ಮೇಳನ