- ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ ಹಾಗೂ ಗಟ್ಟಿತನ ಇರುತ್ತದೆ. ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡು ಹೆಚ್ಚಿನ ಸಾಮರ್ಥ್ಯ ಗಳಿಸಿದ್ದಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು
ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಸಹಪಠ್ಯ ವಿದ್ಯಾರ್ಥಿ ಜೀವನದಲ್ಲಿ ಕೌಶಲ ಹಾಗೂ ಮೌಲ್ಯಗಳನ್ನು ತಿಳಿಸಿ ಕೊಡಲಿದೆ. ಪಠ್ಯದ ಜತೆಗೆ ಸಾಂಸ್ಕೃತಿಕ ಚಟುವಟಿಕೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ. ಭವಿಷ್ಯದಲ್ಲಿ ಶಿಸ್ತಿನ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದು ಪ್ರತಿಪಾದಿಸಿದರು.ಸರ್ಕಾರಿ ಶಾಲೆ ವಿದ್ಯಾರ್ಥಿಗಳು ನಾಟಿ ಹಣ್ಣಿನಂತೆ, ಸಿಹಿ ಜಾಸ್ತಿ. ವಿಶ್ವೇಶ್ವರಯ್ಯ, ಅಬ್ದುಲ್‌ಕಲಾಂ ಸೇರಿದಂತೆ ಅನೇಕ ಗಣ್ಯ ಮಾನ್ಯರು ಜನಸಾಮಾನ್ಯರಲ್ಲಿ ನೆಲೆಯೂರಲು ಸರ್ಕಾರಿ ಶಾಲೆಗಳೇ ಮೂಲ ಕಾರಣ. ಹೀಗಾಗಿ ಶಾಲೆ ಬಗ್ಗೆ ಕೀಳರಿಮೆ ಹೊಂದದೇ ಶಿಕ್ಷಣದ ಕಡೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.ಇತ್ತೀಚೆಗೆ ಪದವಿ ಕಾಲೇಜಿನ ವಿಜ್ಞಾನ ವಿಷಯದಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಾಂಶು ಪಾಲರು ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹೆಚ್ಚು ಮುತುವರ್ಜಿ ವಹಿಸಬೇಕು. ಸರ್ಕಾರ ವಿದ್ಯಾರ್ಥಿಗಳಿಗೆ ಸವಲತ್ತು ನೀಡಿ ಪ್ರೋತ್ಸಾಹಿಸುತ್ತಿದ್ದು ಅಧಿಕಾರಿಗಳು ವಿದ್ಯಾರ್ಥಿಗಳ ಸೇರ್ಪಡೆ ಬಗ್ಗೆ ಅರಿವು ಮೂಡಿಸಬೇಕು ಎಂದು ಸೂಚಿಸಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಅನ್ನದಾನ ಬದುಕಿಗೆ, ರಕ್ತದಾನ ಜೀವನಕ್ಕೆ ಪೂರಕ. ಅದರಂತೆ ವಿದ್ಯಾ ದಾನ ಮಕ್ಕಳ ಭವಿಷ್ಯ ನಿರ್ಮಾಣಕ್ಕೆ ಬುನಾದಿ. ಕಲಿಕೆ ವೇಳೆಯಲ್ಲಿ ಮಕ್ಕಳು ಸಮಯ ವ್ಯರ್ಥಗೊಳಿಸಿದರೆ ಜೀವನಪೂರ್ತಿ ಪರಿತಪಿಸಬೇಕು. ಹೀಗಾಗಿ ವ್ಯಾಸಂಗದಲ್ಲಿ ಮೈಮರೆಯದೇ ಹೆಚ್ಚು ಪರಿಶ್ರಮವಹಿಸಬೇಕು ಎಂದರು.ಮಕ್ಕಳ ಬದುಕಿನಲ್ಲಿ ವಿನಯ, ವಿವೇಕದಿಂದ ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಶ್ರೀಮಂತಿಕೆ ಜೊತೆಗೆ ಸರಳತೆ ಹಾಗೂ ದಾನದ ಮನೋಭಾವ ಇರಬೇಕು. ಭವಿಷ್ಯದಲ್ಲಿ ಶ್ರೀಮಂತಿಕೆಗಿಂತ ಹೆಚ್ಚು ಸರಳತೆಗೆ ನೂರುಪಟ್ಟು ಸ್ಥಾನ ಲಭಿಸಲು ಸಾಧ್ಯ ಎಂದರು.ಈ ಕಾಲೇಜಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಿಂದಿನ ಅವಧಿಯಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಶೌಚಾಲಯ ಸೇರಿದಂತೆ ಇನ್ನಿತರೆ ಕಾಮಗಾರಿಗೆ ಟೆಂಡರ್ ಕರೆದು ಅನುದಾನ ಮಂಜೂರಾಗಿದೆ. ಇದೀಗ ಶಂಕುಸ್ಥಾಪನೆ ನೆರವೇರುತ್ತಿದೆ. ಸದ್ಯದಲ್ಲೇ ತಾವು ಕೂಡಾ ಹೆಚ್ಚಿನ ಶ್ರಮವಹಿಸಿ ಶಾಲೆ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.ಕಾಲೇಜಿನ ಪ್ರಾಂಶುಪಾಲ ಜಿ.ಬಿ. ವಿರೂಪಾಕ್ಷ ಮಾತನಾಡಿ, ಪ್ರಸ್ತುತ ಕಾಲೇಜಿನಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಒದಗಿಸಿ ಸಜ್ಜುಗೊಳಿಸಿದ ಪರಿಣಾಮ ಪ್ರತಿವರ್ಷ ಕಾಲೇಜು ಶೇ. 97 ರಷ್ಟು ಫಲಿತಾಂಶ ಪಡೆದು ಮುಂಚೂಣಿಯಲಿದೆ. ಮುಂದಿನ ವಾರ್ಷಿಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಅಣಿಯಾಗಿ ಕಾಲೇಜಿಗೆ ಕೀರ್ತಿ ತರಬೇಕು ಎಂದು ಆಶಿಸಿದರು.ಕಾಲೇಜು ಸಣ್ಣಪುಟ್ಟ ಅಭಿವೃದ್ಧಿ ವಿಚಾರದಲ್ಲಿ ಹಿಂದಿರುವ ಕಾರಣ ಹಾಲಿ ಹಾಗೂ ಮಾಜಿ ಶಾಸಕರು ಇತ್ತ ಗಮನಹರಿಸಬೇಕು. ಶೌಚಾಲಯ, ಕೊಠಡಿಗಳ ಕೊರತೆಯಿದೆ. ಇನ್ನಷ್ಟು ಹೆಚ್ಚು ಸೌಲಭ್ಯವನ್ನು ಕಾಲೇಜಿಗೆ ದೊರಕಿಸಿದರೆ ಮತ್ತಷ್ಟು ಸಾಧನೆ ಮಾಡಬಹುದು ಎಂದರು.ಸಾಹಿತಿ ಚಟ್ನಳ್ಳಿ ಮಹೇಶ್ ಮಾತನಾಡಿ, ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಸನ್ನಡತೆ ಬೀಜ ಬಿತ್ತಬೇಕು. ತ್ರಿಮೂರ್ತಿ ಸಂಕೇತ ಗುರುಗಳಿಗೆ ಗೌರವಿಸುವ ಸದ್ಗುಣ ತುಂಬಬೇಕು. ಕಲೆ, ಸಂಸ್ಕೃತಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಾಲೇಜಿನ ಉಪನ್ಯಾಸಕರು ಮುತು ವರ್ಜಿವಹಿಸಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಎತ್ತಿಹಿಡಿಯಬೇಕು ಎಂದು ಕಿವಿಮಾತು ಹೇಳಿದರು.ಇದೇ ವೇಳೆ ವಿವಿಧ ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಮಾರಂಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪುಟ್ಟಾನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ರಫೀಕ್ ಅಹಮ್ಮದ್, ಸದಸ್ಯರಾದ ಬಿ.ಬಿ.ಪ್ರಜ್ವಲ್, ಸೀತಾರಾಮನ್, ಎಂ.ಸಿ.ಸುರೇಶ್ ಉಪಸ್ಥಿತರಿದ್ದರು. 12 ಕೆಸಿಕೆಎಂ 1ಚಿಕ್ಕಮಗಳೂರಿನ ಬೇಲೂರು ರಸ್ತೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ಧ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಶಾಸಕ ಎಚ್.ಡಿ. ತಮ್ಮಯ್ಯ ಉದ್ಘಾಟಿಸಿದರು. ಚಟ್ನಳ್ಳಿ ಮಹೇಶ್, ಪ್ರಾಂಶುಪಾಲರಾದ ಜಿ.ಬಿ. ವಿರೂಪಾಕ್ಷಪ್ಪ, ಪುಟ್ಟಾನಾಯ್ಕ, ರಫೀಕ್ ಇದ್ದರು.