ಬಿಜೆಪಿ ನನ್ನ ತಾಯಿ, ಬಿಟ್ಟು ಇರಲಾರೆ : ಮಾಜಿ ಉಪಮುಖ್ಯಮಂತ್ರಿ ಕೆ. ಎಸ್.ಈಶ್ವರಪ್ಪ

KannadaprabhaNewsNetwork | Updated : Jan 13 2025, 11:29 AM IST

ಸಾರಾಂಶ

ಬಿಜೆಪಿ ನನ್ನ ತಾಯಿಯಂದು ನಾನು ಮೊದಲಿನಿಂದಲೂ ಹೇಳ್ತಾ ಇದ್ದೇನೆ. ತಾಯಿ ಬಿಟ್ಟು ಯಾವತ್ತಾದರೂ ಮಗ ಇರ್ತಾನೇನು? ನಾನು ಬಿಜೆಪಿ ಬಿಟ್ಟು ಇನ್ನೆಲ್ಲಿಗೆ ಹೋಗ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ಸೇರುವ ಕುರಿತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುಳಿವು ನೀಡಿದ್ದಾರೆ.

  ಬಾಗಲಕೋಟೆ : ಬಿಜೆಪಿ ನನ್ನ ತಾಯಿಯಂದು ನಾನು ಮೊದಲಿನಿಂದಲೂ ಹೇಳ್ತಾ ಇದ್ದೇನೆ. ತಾಯಿ ಬಿಟ್ಟು ಯಾವತ್ತಾದರೂ ಮಗ ಇರ್ತಾನೇನು? ನಾನು ಬಿಜೆಪಿ ಬಿಟ್ಟು ಇನ್ನೆಲ್ಲಿಗೆ ಹೋಗ್ತೇನೆ ಎಂದು ಪರೋಕ್ಷವಾಗಿ ಬಿಜೆಪಿ ಸೇರುವ ಕುರಿತು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಸುಳಿವು ನೀಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳು ಇವೆ. ಈ ಗೊಂದಲಗಳು ಶುದ್ಧೀಕರಣ ಆಗಬೇಕು ಎಂಬುದು ನನ್ನ ಆಶಯ. ಬಿಜೆಪಿಗೆ ಸಿದ್ಧಾಂತ ಇದೆ. ಡಾ.ಶಾಮಪ್ರಸಾದ ಮುಖರ್ಜಿ ಅವರು ಪಕ್ಷಕ್ಕೆ ಬಲಿದಾನ ಮಾಡಿದ್ರು. ಪಂಡಿತ ದೀನದಯಾಳ ಉಪಾಧ್ಯಾಯರ ಕಗ್ಗೊಲೆ ಆಯ್ತು ಪಕ್ಷಕ್ಕಾಗಿ, ಅವರೆಲ್ಲರ ಆದರ್ಶ ಇಟ್ಟುಕೊಂಡಿರುವ ನನಗೂ, ಲಕ್ಷಾಂತರ ಕಾರ್ಯಕರ್ತರ ಉದ್ದೇಶವು ಬಿಜೆಪಿ ಶುದ್ಧಿಕರಣ ಆಗಬೇಕು ಎಂಬುದಾಗಿದೆ ಎಂದು ಹೇಳಿದರು.

ಬಿಜೆಪಿ ಶುದ್ಧೀಕರಣ ಅವಶ್ಯ:

ಬ್ರಿಗೇಡ್ ಬಗ್ಗೆ ಬಸವರಾಜ್ ಬೊಮ್ಮಾಯಿ ಅವರು ಈ ಬಗ್ಗೆ ಆಲೋಚನೆ ಮಾಡ್ತೇವೆ ಎಂದಿದ್ದ ವಿಚಾರದ ಕುರಿತು ಮಾತನಾಡಿದ ಈಶ್ವರಪ್ಪ ಅವರು, ಬಸವರಾಜ್ ಬೊಮ್ಮಾಯಿ ಅವರನ್ನು ಖಾಸಗಿಯಾಗಿ ಕೇಳಿ. ಬಿಜೆಪಿಯಲ್ಲಿ ಈಗ ನಡೆಯುತ್ತಿರುವುದು ಸರಿ ಇದೇಯಾ? ಅಂತ ಕೇಳಿ ನೋಡಿ. ಶೇ.99ರಷ್ಟು ಈಶ್ವರಪ್ಪ ತೆಗೆದುಕೊಂಡಿರುವ ಸ್ಟ್ಯಾಂಡ್ ಸರಿ ಇದೆ ಎಂದು ಹೇಳುತ್ತಾರೆ ಎಂದರು.

ಬಿಜೆಪಿ ಶುದ್ಧೀಕರಣ ಆಗಬೇಕು ಎಂದು ಎಲ್ರೂ ಹೇಳ್ತಾರೆ. ಆದರೆ, ಇದನ್ನು ಬಹಿರಂಗವಾಗಿ ಬರಲು ತಯಾರಿಲ್ಲ. ಎಂಎಲ್‌ಎ ಟಿಕೆಟ್ ಹೋಗುತ್ತೆ. ಮಂತ್ರಿ ಸ್ಥಾನ ಹೋಗುತ್ತೆ. ಜಿಲ್ಲಾ ಪರಿಷತ್ ಹೋಗುತ್ತೆ. ಆದರೆ, ನನಗೆ ಏನು ಬೇಕಾದ್ರೂ ಹೋಗಲಿ, ನನಗೆ ಎಲ್ಲವನ್ನು ಈ ಪಾರ್ಟಿ ಕೊಟ್ಟಿದೆ. ಅಡಕೆ ಬಟ್ಟಿಲಿ ಕೂಲಿ ಮಾಡ್ತಿದ್ದ ತಾಯಿ ಮಗ ನಾನು, ನನಗೆ ಎಂಎಲ್‌ಎ ಮಾಡಿ, ವಿವಿಧ ಇಲಾಖೆಗಳ ಮಂತ್ರಿ ಮಾಡಿ, ಉಪಮುಖ್ಯಮಂತ್ರಿ ಮಾಡಿದರೂ ಕೂಡ, ಆ ಪಕ್ಷದಲ್ಲಿ ಆಗುತ್ತಿರುವ ಗೊಂದಲಗಳು, ಸಿದ್ಧಾಂತಕ್ಕೆ ಆಗುತ್ತಿರುವ ತೊಂದರೆಗಳು ನೋಡಿಕೊಂಡು, ನನ್ನದೆ ಆದ ಒಂದು ಸ್ಥಾನಕ್ಕೆ ಸುಮ್ಮನಿರಲಾ? ಎಂದು ಪ್ರಶ್ನೆ ಮಾಡಿದ ಈಶ್ವರಪ್ಪ ಅವರು, ಪಕ್ಷದ ಶುದ್ಧೀಕರಣ ಆಗಬೇಕು ಎನ್ನುವ ಪ್ರಯತ್ನ ಮಾಡ್ತಿದ್ದೇನೆ. ರಾಜ್ಯದಲ್ಲಿ ತುಂಬಾ ಜನ ಕಾರ್ಯಕರ್ತರ ಅಭಿಪ್ರಾಯವೂ ಇದೆ ಆಗಿದೆ. ಖಂಡಿತ ಶುದ್ಧೀಕರಣ ಆಗುತ್ತೆ ಎನ್ನುವ ನಂಬಿಕೆಯಲ್ಲಿ ನಾನು ಇದ್ದೇನೆ ಎಂದರು.

ಜನರಿಗೆ ಸರ್ಕಾರ ಹಾಗೂ ಶಾಸಕರನ್ನು ಪ್ರಶ್ನೆ ಮಾಡುವ ಹಕ್ಕೆ ಇಲ್ಲವಾಗಿದೆ. ಅವರ ಕಡೆಗೂ ದುಡ್ಡು ತಿಂದು, ಇವರ ಕಡೆಗೂ ದುಡ್ಡು ತಿಂತಿರಿ. ಇಬ್ಬರ ಕಡೆಗೂ ಹೆಂಡ ಕುಡಿತಿರಿ, ಮತ್ತೆ ಜಾತಿನೂ ಮಾಡಿ ಓಟು ಹಾಕ್ತಿರಿ. ಮತ್ತೆ ಈಗ ನಿಮಗೆ ಕೇಳುವ ಅಧಿಕಾರ ಏನಿದೆ? ಎಂದ ಈಶ್ವರಪ್ಪ ಅವರು, ಸಮಾಜವೂ ಜಾಗೃತಿ ಆಗಬೇಕು. ಸಮಾಜವನ್ನು ಜಾಗೃತಿ ಮಾಡುವ ಕರ್ತವ್ಯ ಪಕ್ಷಗಳದ್ದು. ಸಾಧು, ಸಂತರ ಜವಾಬ್ದಾರಿಯೂ ಇದೆ. ಹೆಂಗಿದ್ರು ಜನರು ದಾರಿ ತಪ್ಪಿದ್ದಾರೆ. ಇನ್ನು ದಾರಿ ತಪ್ಪಿಸುತ್ತೇವೆ ಎಂದು ರಾಜಕೀಯ ಪಕ್ಷಗಳು ಹೋಗುವುದು ಒಳ್ಳೆಯದಲ್ಲ ಎಂದರು.

ಕಾಂಗ್ರೆಸ್ ಪಕ್ಷದಲ್ಲಿ ಜಾತಿ ವಿಷಬೀಜ ಸಿಕ್ಕಾಪಟ್ಟೆ ಬಂದೋಗಿದೆ. ಕಾಂಗ್ರೆಸ್ ಪಕ್ಷದ ಸ್ಥಿತಿ ನೋಡಿದ್ರೆ ಇವತ್ತು ಮಹಾತ್ಮಾ ಗಾಂಧೀಜಿ ಬದುಕಿದ್ರೆ ನೇಣು ಹಾಕಿಕೊಳ್ತಿದ್ರು ಎಂದ ಈಶ್ವರಪ್ಪ ಅವರು, ಇಷ್ಟೊಂದು ಜಾತಿವಾದ ಪಕ್ಷಕ್ಕೆ ಒಳ್ಳೆಯದಲ್ಲ. ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಬಹಳ ಗೊಂದಲದಲ್ಲಿದೆ. ಇವತ್ತು ಡಿಕೆಶಿ ಅವರು ನಾನು ಒಬ್ಬಂಟಿ ಆಗಿರುತ್ತೇನೆ. ನಾನು ಯಾವ ಕಾರ್ಯಕರ್ತರ ಹತ್ತಿರವೂ ಹೋಗಲ್ಲ. ಯಾವ ಶಾಸಕರ ಬೆಂಬಲವನ್ನು ಕೇಳಲ್ಲ. ಪಕ್ಷ ತೀರ್ಮಾನ ಮಾಡಲಿ ಎಂದಿದ್ದಾರೆ. ಇದು ಬರೀ ಗಂಟಲು ಮೇಲಿನ ಮಾತು ಆಗಿರಬಾರದು ಎಂದು ಹೇಳಿದರು.

ಒಳಗಡೆ ಇದ್ದುಕೊಂಡು ಗುಂಪುಗಾರಿಕೆ ಮಾಡೋದು. ಒಕ್ಕಲಿಗರೆಲ್ಲ ಸೇರಿಕೊಂಡು ಎಸ್.ಎಂ.ಕೃಷ್ಣ ಅಂತ ವ್ಯಕ್ತಿಯ ಹೆಸರು ದುರುಪಯೋಗ ಮಾಡಿಕೊಂಡು ಅದೆಂತದ್ದೋ ಕಾರ್ಯಕ್ರಮ ಮಾಡ್ತೇವೆ ಅಂತಾರೆ. ಈ ಕಡೆಗೆ ದಲಿತರು, ಹಿಂದುಳಿದವರು ನಾವೆಲ್ಲ ಒಟ್ಟಿಗೆ ಸೇರಿಕೊಳ್ಳುತ್ತೇವೆ ಎನ್ನುತ್ತಾರೆ. ಕಾಂಗ್ರೆಸ್ ಪಕ್ಷ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವವರು ಈ ಮಾತು ಹೇಳ್ತಿದ್ದಾರೆ. ಕಾಂಗ್ರೆಸ್‌ ಒಂದು ಪಕ್ಷ ಇದೆ. ಸಂಬಂಧಪಟ್ಟವರನ್ನು ಕರೆದು ಚರ್ಚೆ ಮಾಡಿ, ಯಾರನ್ನ ಮುಖ್ಯಮಂತ್ರಿ ಮಾಡ್ತಾರೋ ಮಾಡಲಿ. ಇಲ್ಲವೇ ಶಾಸಕರಿಂದ ವೋಟಿಂಗ್ ಮಾಡಿಸಲಿ. ಹೀಗೆ ಜಾತಿ ಜಾತಿ ಅಂತ ಜಾತಿ ಮುಖಂಡರನ್ನು ಮುಖ್ಯಮಂತ್ರಿ ಮಾಡ್ತೇವೆ ಅಂದ್ರೆ ಯಾವ ನ್ಯಾಯ ಇದು? ಎಂ.ಬಿ.ಪಾಟೀಲ, ಪರಮೇಶ್ವರ, ಜಾರಕಿಹೊಳಿ ನಾನೇ ಮುಖ್ಯಮಂತ್ರಿ ಆಗಬೇಕು ಅಂತಾರೆ. ಯಾರಾದರೂ ಆಗಿ, 140 ಜನ ಶಾಸಕರ ಬಹುಮತ ಇದೆ. ಬೇಡ ಅಂತ ಯಾರು ಅಂದಿಲ್ಲ. ಆದರೆ, ಇಷ್ಟೊಂದು ಗುಂಪುಗಾರಿಕೆ, ಅದು ಜಾತಿವಾದಿ ಮುಖಾಂತರ ಮುಖ್ಯಮಂತ್ರಿ ಆಯ್ಕೆ ಮಾಡ್ತಿರೋದು ತುಂಬಾ ಅನ್ಯಾಯ, ಇದನ್ನು ನಾನು ಉಗ್ರವಾಗಿ ಖಂಡನೆ ಮಾಡುವೆ ಎಂದರು.

ಸಿಬಿಐ, ಐಟಿ, ಇಡಿ ಸಂಹಾರಕ್ಕೆ ಹೋಮ

ಡಿಕೆಶಿ ಶತ್ರು ಸಂಹಾರ ಪ್ರತ್ಯಂಗಿರಾ ಹೋಮ ಮಾಡಿದ ಕುರಿತು ಬಾಗಲಕೋಟೆಯಲ್ಲಿ ಮಾಜಿ ಡಿಸಿಎಮ್ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದು, ಶತ್ರು ಸಂಹಾರ ಅಂದ ತಕ್ಷಣ ವ್ಯಕ್ತಿ ಅಂತ ಯೋಚನೆ ಮಾಡಬೇಡಿ ಎಂದಿದ್ದಾರೆ. ಉದಾಹರಣೆಗೆ ಐಟಿ, ಸಿಬಿಐ ಹಾಗೂ ಇಡಿ ಅವುಗಳು ಕೆಲವರಿಗೆ ಶತ್ರು ಅಲ್ಲ ಭೂತ ಕಂಡಂಗೆ ಕಾಣ್ತಿರ್ತಾವೆ. ಅದರ ಸಂಹಾರ ಅಂತ ಹೊರಟಿದ್ದಾರೆ ಅವರು, ಅವರಿಗೆ ನ್ಯಾಯ ಸಿಗಲಿ ಅಂತ ಮಾತ್ರ ಹೇಳ್ತಿನಿ ಎಂದರು.

Share this article