ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಅವಶ್ಯಕ-ಸಾಲಿಮಠ

KannadaprabhaNewsNetwork | Published : Jan 13, 2025 12:47 AM

ಸಾರಾಂಶ

ಸಮಾಜ ಮತ್ತು ದೇಶದ ಬಗ್ಗೆ ಕಳಕಳಿ ಹೊಂದಿರುವ ಯುವಜನಾಂಗದ ಕೊರತೆ ಎದ್ದು ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಪ್ರಾಥಮಿಕವಾಗಿ ನೈತಿಕ ಶಿಕ್ಷಣ ನೀಡುವಲ್ಲಿ ಪಾಲಕವರ್ಗದವರು ಮತ್ತು ಗುಣಮಟ್ಟದ ಶಿಕ್ಷಣ ಪೂರೈಸುವಲ್ಲಿ ಶಿಕ್ಷಕ ವೃಂದದವರು ಸಮರ್ಥ ಹೆಜ್ಜೆ ಇಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಹೇಳಿದರು.

ಅಕ್ಕಿಆಲೂರು: ಸಮಾಜ ಮತ್ತು ದೇಶದ ಬಗ್ಗೆ ಕಳಕಳಿ ಹೊಂದಿರುವ ಯುವಜನಾಂಗದ ಕೊರತೆ ಎದ್ದು ಕಾಣುತ್ತಿದ್ದು, ಈ ನಿಟ್ಟಿನಲ್ಲಿ ಪ್ರಾಥಮಿಕವಾಗಿ ನೈತಿಕ ಶಿಕ್ಷಣ ನೀಡುವಲ್ಲಿ ಪಾಲಕವರ್ಗದವರು ಮತ್ತು ಗುಣಮಟ್ಟದ ಶಿಕ್ಷಣ ಪೂರೈಸುವಲ್ಲಿ ಶಿಕ್ಷಕ ವೃಂದದವರು ಸಮರ್ಥ ಹೆಜ್ಜೆ ಇಡಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ಸಾಲಿಮಠ ಹೇಳಿದರು. ಪಟ್ಟಣದ ಶ್ರೀ ಚನ್ನವೀರೇಶ್ವರ ಗ್ರಾಮೀಣ ಗುರುಕುಲದಲ್ಲಿ ನಡೆದಿರುವ ಗುರುಕುಲ ಸಂಭ್ರಮ-22 ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಬದಲಾವಣೆ ಅಗತ್ಯವಾಗಿದ್ದು, ಯುವಪೀಳಿಗೆ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದುವ ಮಹತ್ತರ ಜವಾಬ್ದಾರಿಯ ಹೊಣೆ ಹೊರಬೇಕಿದೆ. ದೃಶ್ಯ ಮಾಧ್ಯಮದ ಹಾವಳಿಯಿಂದಾಗಿ ಸಮುದಾಯದಲ್ಲಿ ಮರೆಯಾಗುತ್ತಿರುವ ಮಾನವೀಯ ಮೌಲ್ಯಗಳಿಗೆ ಮರುಜೀವ ತುಂಬುವ ನಿಟ್ಟಿನಲ್ಲಿ ಯುವಶಕ್ತಿಗೆ ಪ್ರೇರಕಶಕ್ತಿಯಾಗಿ ನಿಲ್ಲಬೇಕಾದ ಅನಿವಾರ್ಯತೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕನದ್ದಾಗಿದೆ ಎಂದರು. ಸಂಸ್ಥೆಯ ನಿರ್ದೇಶಕ ನ್ಯಾಯವಾದಿ ಕೆಂಪಣ್ಣ ಪಾವಲಿ ಮಾತನಾಡಿ, ಪಾಶ್ಚಮಾತ್ಯ ರಾಷ್ಟ್ರಗಳ ಶಿಕ್ಷಣ ಪದ್ದತಿ ಹಾಗೂ ಭಾರತದ ಶಿಕ್ಷಣ ಪದ್ಧತಿ ನಡುವೆ ಸಾಕಷ್ಟು ವ್ಯತ್ಯಾಸಗಳಿದ್ದು, ಇಲ್ಲಿಯ ಯುವಜನಾಂಗ ಎಲ್ಲವನ್ನು ಸಾಧಿಸಬಲ್ಲ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ಹೊಂದಿದೆ. ವಿದೇಶಿ ಸಂಸ್ಕೃತಿಯ ದಾಸರಾಗಿ ಸಮುದಾಯದಲ್ಲಿ ನೈತಿಕ ಗುಣಮಟ್ಟದ ಕುಸಿತಕ್ಕೆ ಕಾರಣರಾಗಿರುವ ಯುವಶಕ್ತಿ ಜಾಗೃತಗೊಂಡು ದೇಶವನ್ನು ಪ್ರಗತಿಪಥದಲ್ಲಿ ಮುನ್ನಡೆಸುವಲ್ಲಿ ಮುಂದಾಗಬೇಕಾಗಿದೆ ಎಂದರು. ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ಸಾಕ್ಷಿ ಆರ್.ಡಿ., ನೂರಫ್ಜಾ ಲತಿಫಸಾಬನವರ, ವರ್ಷಿಣಿ ಸಿ. ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು. ವಿರಕ್ತಮಠದ ಶಿವಬಸವ ಶ್ರೀಗಳು ಸಮ್ಮುಖ ವಹಿಸಿದ್ದರು. ನಿರ್ದೇಶಕರಾದ ಶಿವಕುಮಾರ ದೇಶಮುಖ, ಮಲ್ಲಿಕಾರ್ಜುನ ಕಂಬಾಳಿ, ಶರತ್ ಸಣ್ಣವೀರಪ್ಪನವರ, ಜಿ.ಎಸ್.ಮುಚ್ಚಂಡಿ, ಬಾಬಣ್ಣ ಮುತ್ತಿನಕಂತಿಮಠ, ತೋಟಪ್ಪ ತುಪ್ಪದ, ಕವಿತಾ ಅರಳೇಶ್ವರ, ಹೇಮಾ ಮಹಾಲಿಂಗಶೆಟ್ಟರ, ಆಡಳಿತಾಧಿಕಾರಿ ಸುರೇಂದ್ರ ಕರೆಮ್ಮನವರ, ಮುಖ್ಯ ಶಿಕ್ಷಕ ವಿಜಯ ಪರಶಿಕ್ಯಾತಣ್ಣನವರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Share this article