ವಸತಿ ಶಾಲೆಗೆ ಖರೀದಿಸಿದ ಜಮೀನು ಲಾವಣಿ- ಆರೋಪ

KannadaprabhaNewsNetwork | Published : Jan 13, 2025 12:47 AM

ಸಾರಾಂಶ

ಶಾಲೆಯ ಪ್ರಾಚಾರ್ಯ ಕಳೆದ 3 ವರ್ಷದಿಂದ ಒಂದು ಎಕರೆಗೆ 7 ಸಾವಿರದಂತೆ 13 ಎಕರೆ 3 ಗಂಟೆ ಜಮೀನನ್ನು ಲಾವಣಿ ನೀಡಿದ್ದು, ಈ ಬಗ್ಗೆ ನಾವು ಸಂಘಟನೆ ಮೂಲಕ ವಿಚಾರಿಸಿದಾಗ ತಾವು ಇಲಾಖೆಯ ಜಿಲ್ಲಾಧಿಕಾರಿ ಗಮನಕ್ಕೆ ತಂದು ಲಾವಣಿ ನೀಡಿರುವುದಾಗಿ ಹೇಳಿದ್ದಾರೆ.

ಮುಂಡರಗಿ: ಪಟ್ಟಣದ ಖಾಸಗಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರದಿಂದ ತಾಲೂಕಿನ ಬೂದಿಹಾಳ ಗ್ರಾಮದ ಹತ್ತಿರ 13 ಎಕರೆ 3 ಗುಂಟೆ ಜಮೀನು ಖರೀದಿಸಿದ್ದು, ಆ ಜಮೀನನ್ನು ಶಾಲೆಯ ಪ್ರಾಚಾರ್ಯ ಲಾವಣಿ ಕೊಟ್ಟಿದ್ದಾರೆ ಎಂದು ತಾಲೂಕು ಅಂಬೇಡ್ಕರ್ ದಲಿತ ಚಳವಳಿ ವೇದಿಕೆ ಅಧ್ಯಕ್ಷ ಲಕ್ಷ್ಮಣ ತಗಡಿನಮನಿ ಆರೋಪಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು ಬಾಡಿಗೆ ಕಟ್ಟದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಲ್ಲಿ ಮಕ್ಕಳಿಗೆ ಆಟವಾಡಲು, ಸರಿಯಾಗಿ ಓಡಾಡಲು ಜಾಗದ ಕೊರತೆ ಇರುವುದರಿಂದ ಅನೇಕ ಬಾರಿ ಸ್ವಂತ ಜಮೀನು ಖರೀದಿಸುವಂತೆ ಒತ್ತಾಯಿಸಿದ್ದರ ಫಲವಾಗಿ ಸರ್ಕಾರ 2021-22ನೇ ಸಾಲಿನಲ್ಲಿ ಈ ಜಮೀನನ್ನು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಪ್ರಾಚಾರ್ಯರ ಹೆಸರಿನಲ್ಲಿ ಖರೀದಿಸಿದ್ದು, ಈ ಕುರಿತು ಉತಾರವೂ ಇದೆ.

ಈ ಶಾಲೆಯ ಪ್ರಾಚಾರ್ಯ ಕಳೆದ 3 ವರ್ಷದಿಂದ ಒಂದು ಎಕರೆಗೆ 7 ಸಾವಿರದಂತೆ 13 ಎಕರೆ 3 ಗಂಟೆ ಜಮೀನನ್ನು ಲಾವಣಿ ನೀಡಿದ್ದು, ಈ ಬಗ್ಗೆ ನಾವು ಸಂಘಟನೆ ಮೂಲಕ ವಿಚಾರಿಸಿದಾಗ ತಾವು ಇಲಾಖೆಯ ಜಿಲ್ಲಾಧಿಕಾರಿ ಗಮನಕ್ಕೆ ತಂದು ಲಾವಣಿ ನೀಡಿರುವುದಾಗಿ ಹೇಳಿದ್ದಾರೆ. ಸರ್ಕಾರಿ ಇಲಾಖೆಗೆ ಖರೀದಿಸಿದ ಜಮೀನನ್ನು ಸರ್ಕಾರಿ ಅಧಿಕಾರಿಗಳೇ ಲಾವಣಿ ಕೊಡಲು ಅವಕಾಶವಿದೆಯೇ? ಇದ್ದರೆ ಮೂರು ವರ್ಷದಿಂದ ಬಂದ ಹಣದಿಂದ ಶಾಲೆಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಈ ಜಾಗೆ ಖರೀದಿಸಿ 3 ವರ್ಷವಾದರೂ ಇದು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗೆ ಸಂಬಂಧಿಸಿದ ಜಮೀನು ಎಂದು ಶಾಲೆಯ ಅಧಿಕಾರಿಗಳು ಅಲ್ಲೊಂದು ನಾಮಫಲಕ ಹಾಕಿರಲಿಲ್ಲ. ಆದರೆ, ಈ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದಿರುವುದನ್ನು ಗಮನಿಸಿ ಸಂಬಂಧಿಸಿದ ಶಾಲೆಯ ಪ್ರಾಚಾರ್ಯರನ್ನು ಪ್ರಶ್ನಿಸಿದಾಗ ಒಂದು ವಾರದ ಹಿಂದೆ ಅಲ್ಲೊಂದು ನಾಮಫಲಕ ಹಾಕಿದ್ದಾರೆ. ಒಂದು ವೇಳೆ ಮೊದಲೇ ನಾಮಫಲಕ ಹಾಕಿದ್ದರೆ ಅಲ್ಲಿ ಬೆಳೆ ಬೆಳೆಯಲು ಸಾಧ್ಯವೇ ಎಂದು ತಗಡಿನಮನಿ ಪ್ರಶ್ನಿಸಿದರು.

ಸಂಬಂಧಪಟ್ಟ ಇಲಾಖೆಯ ಜಿಲ್ಲಾಧಿಕಾರಿಗಳು ಹಾಗೂ ತಾಲೂಕಾಧಿಕಾರಿಗಳು ಈ ಕೂಡಲೇ ಲಾವಣಿ ನೀಡಿದ ಪ್ರಾಚಾರ್ಯರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ತಕ್ಷಣವೇ ಅವರನ್ನು ಅಮಾನತು ಮಾಡಬೇಕು. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ಎಸ್ಸಿ ಎಸ್ಟಿ ಕಾಯ್ದೆಯಡಿಯಲ್ಲಿ ನಾವೇ ಪ್ರಕರಣ ದಾಖಲಿಸುತ್ತೇವೆ. ಶಾಸಕರು ಈ ಬಗ್ಗೆ ಗಮನಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದರು.

ತಾಲೂಕು ಅಂಬೇಡ್ಕರ್ ದಲಿತ ಚಳವಳಿ ವೇದಿಕೆ ಕಾರ್ಯದರ್ಶಿ ಮಂಜುನಾಥ ತಳಗೇರಿ ಮಾತನಾಡಿ, ಅಲ್ಲಿ ನಿತ್ಯ ನೂರಾರು ಮಕ್ಕಳು ಓದುತ್ತಿದ್ದು, ಮಕ್ಕಳ ಅನುಕೂಲಕ್ಕಾಗಿ ಸರ್ಕಾರ ಜಮೀನು ಖರೀದಿಸಿ ಕೊಟ್ಟಿದ್ದು, ಶಾಲೆಯ ಜವಾಬ್ದಾರಿಯುತ ಪ್ರಾಚಾರ್ಯ ಕಟ್ಟಡ ನಿರ್ಮಾಣಕ್ಕೆ ಒತ್ತಾಯಿಸುವುದನ್ನು ಬಿಟ್ಟು ಆ ಜಮೀನನ್ನು ಲಾವಣಿ ಕೊಟ್ಟಿರುವುದು ದುರ್ದೈವದ ಸಂಗತಿಯಾಗಿದೆ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ತಾಲೂಕು ಅಂಬೇಡ್ಕರ್ ದಲಿತ ಚಳವಳಿ ವೇದಿಕೆ ಗೌರವಾಧ್ಯಕ್ಷ ನಿಂಗಪ್ಪ ಪೂಜಾರ ಉಪಸ್ಥಿತರಿದ್ದರು.

Share this article