ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದ ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳು ಮತ್ತು ಇಲಾಖೆಯ ಜಿಲ್ಲಾ ಉಪನಿರ್ದೇಶಕರು ಪೋಸ್ಟರ್‌ಗಳನ್ನು ಅಳವಡಿಸುವ ಮೂಲಕ ದಾಖಲಾತಿ ಹೆಚ್ಚಳಕ್ಕೆ ಕ್ರಮ ವಹಿಸುವಂತೆ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಮೇ 29ರಿಂದ ಶಾಲಾ ದಾಖಲಾತಿ ಆರಂಭಗೊಂಡಿದ್ದು, ಜೂನ್ ಅಂತ್ಯದವರೆಗೂ ದಾಖಲಾತಿಗೆ ಅವಕಾಶ ನೀಡಲಾಗಿದೆ.
ಪೋಸ್ಟರ್‌ನಲ್ಲಿ ಸರ್ಕಾರಿ ಶಾಲೆಗಳಲ್ಲಿ ಉಚಿತ ದಾಖಲಾತಿ, ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಸಾಕ್ಸ್ ಉಚಿತವಾಗಿ ನೀಡಲಾಗುತ್ತದೆ. ಪ್ರತಿದಿನ ಮಧ್ಯಾಹ್ನ ಬಿಸಿಯೂಟ, ಅಪೌಷ್ಟಿಕತೆ ಹೋಗಲಾಡಿಸಲು ವಾರದಲ್ಲಿ ಆರು ದಿನ ಮೊಟ್ಟೆ/ಬಾಳೆಹಣ್ಣು, ಕ್ಷೀರಭಾಗ್ಯದ ಜೊತೆಗೆ ರಾಗಿಮಾಲ್ಟ್ ವಿತರಣೆ ಸೇರಿ ಸರ್ಕಾರಿ ಶಾಲೆಗಳಲ್ಲಿನ ಇತರೆ ಸೌಲಭ್ಯಗಳು, ಜೊತೆಗೆ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಇರುವ ಕಲಿಕಾ ಚಿಲುಮೆ, ಗಣಿತ ಗಣಕ, ಓದು ಕರ್ನಾಟಕ, ಕಲಿಕಾ ದೀಪ, ಜ್ಞಾನ ಸೇತು, ವಿದ್ಯಾ ವಿಜೇತ ಮತ್ತಿತರ ಕಾರ್ಯಕ್ರಮಗಳ ಮಾಹಿತಿ ಒಳಗೊಂಡಂತೆ ಪೋಸ್ಟರ್ ಸಿದ್ಧಪಡಿಸಲಾಗಿದೆ.ಜೊತೆಗೆ 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳಿಸಿ ಶಿರಸಿಯ ಸರ್ಕಾರಿ ಉರ್ದು ಪ್ರೌಢ ಶಾಲೆಯ ಶಗುಪ್ತಾ ಅಂಜುಂ, ಬೆಳಗಾವಿ ಜಿಲ್ಲೆಯ ದೇವಲಾಪುರದ ಸರ್ಕಾರಿ ಪ್ರೌಢ ಶಾಲೆಯ ರೂಪಾ ಚನ್ನೇಗೌಡ ಪಾಟೀಲ್ ಅವರು ಮಾಡಿರುವ ಅಮೋಘ ಸಾಧನೆಯನ್ನು ಪೋಸ್ಟರ್‌ನಲ್ಲಿ ಪ್ರದರ್ಶಿಸಲು ನಿರ್ದೇಶಿಸಲಾಗಿದೆ.