ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ನಿಡಘಟ್ಟ ಸರ್ಕಾರಿ ಶಾಲೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಹಾಲಿ ದುಸ್ಥಿತಿಯಲ್ಲಿರುವ ಶಾಲೆಗಳನ್ನು ಶೇ.೪೦ರಷ್ಟು ಸುಸ್ಥಿತಿಗೆ ತಂದಿದ್ದೇವೆ. ಮೂರು ವರ್ಷಗಳಲ್ಲಿ ಶೇ.90ರಷ್ಟು ಸುಸ್ಥಿತಿಗೆ ತರಲಾಗುವುದು ಎಂದು ಭರವಸೆ ನೀಡಿದರು.
ಕಳೆದ ಒಂಬತ್ತೂವರೆ ತಿಂಗಳಲ್ಲಿ ಸರ್ಕಾರಿ ಶಾಲೆಗಳಲ್ಲಿ 8200 ನೂತನ ಕೊಠಡಿಗಳನ್ನು ನಿರ್ಮಿಸಲಾಗಿದೆ. ಇನ್ನೂ 1500 ಹೊಸ ಕೊಠಡಿಗಳ ನಿರ್ಮಾಣಕ್ಕೆ ಯೋಜನೆ ರೂಪಿಸಿಕೊಳ್ಳಲಾಗಿದೆ. ಮಳೆಯಿಂದಾಗಿ ಕರಾವಳಿ ಭಾಗದಲ್ಲಿ ಸಾಕಷ್ಟು ಶಾಲಾ ಕೊಠಡಿಗಳು ಕುಸಿದಿವೆ. ಈ ಭಾಗದಲ್ಲೂ ಶಾಲಾ ಕೊಠಡಿಗಳು ಕುಸಿತಕ್ಕೊಳಗಾಗಿವೆ ಎಂದು ತಿಳಿಸಿದರು.ರಾಜ್ಯದಲ್ಲಿರುವ 46 ಸಾವಿರ ಶಾಲೆಗಳ ಅಭಿವೃದ್ಧಿಗೆ ಅನುದಾನದ ಅಗತ್ಯವೂ ಇದೆ. ಇದೀಗ 68 ಕೋಟಿ ರು. ವೆಚ್ಚದಲ್ಲಿ 2500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತಿದೆ. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಶಿಕ್ಷಣವನ್ನು ನೀಡಲಾಗುವುದು. ಶಿಕ್ಷಕರಿಗೆ ಕೊರತೆ ಎದುರಾಗದಂತೆ ಎಚ್ಚರವಹಿಸಿ, ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲಾಗುವುದು ಎಂದು ನುಡಿದರು.
ತಾಲೂಕಿನ ನಿಡಘಟ್ಟ ಶಾಲೆಗೆ 11 ಕೊಠಡಿಗಳ ಅಗತ್ಯವಿರುವುದಾಗಿ ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಕೊಠಡಿಗಳನ್ನು ದುರಸ್ತಿಮಾಡುವ ಬದಲು ಸಂಪೂರ್ಣವಾಗಿ ಕೆಡವಿ ಹೊಸದಾಗಿ ನಿರ್ಮಿಸುವುದೇ ಒಳ್ಳೆಯದು. ಅದಕ್ಕಾಗಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ನನ್ನ ಇಲಾಖೆಯಿಂದ ಶೀಘ್ರ ಮಂಜೂರಾತಿ ದೊರಕಿಸಿಕೊಡುವುದಾಗಿ ತಿಳಿಸಿದರು.
ಶಾಸಕರಾದ ಕೆ.ಎಂ.ಉದಯ್ , ಪಿ.ರವಿಕುಮಾರ್ , ಡಿಡಿಪಿಐ ಎಚ್ .ಶಿವರಾಮೇಗೌಡ, ಡಯಟ್ ನ ಪುರುಷೋತ್ತಮ್ , ಬಿಇಒ ಕಾಳೀರಯ್ಯ ಇದ್ದರು.