- ಹೊನ್ನಾಳಿಯಲ್ಲಿ ಅಭಿನಂದನೆ ಸ್ವೀಕರಿಸಿ ನಿವೃತ್ತ ಉಪನಿರ್ದೇಶಕ ರಾಜಶೇಖರ್
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಶಿಕ್ಷಕರು ಬದ್ಧತೆಯಿಂದ ಇಚ್ಛಾಶಕ್ತಿ ತೋರಿ ತಮ್ಮ ವೃತ್ತಿಯನ್ನು ಮಾಡಬೇಕು. ಆಗ ಮಾತ್ರವೇ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯವೆಂದು ರಾಜ್ಯ ಶಿಕ್ಷಕರ ಕಲ್ಯಾಣ ನಿಧಿಯ ನಿವೃತ್ತ ಉಪನಿರ್ದೇಶಕ ಜಿ.ಎಸ್.ರಾಜಶೇಖರ್ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಹೊನ್ನಾಳಿ- ನ್ಯಾಮತಿ ತಾಲೂಕಿನ ಜಿ.ಎಸ್.ಆರ್. ಅಭಿಮಾನಿ ಬಳಗ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ ಇಲಾಖೆಯಲ್ಲಿ ಕೇವಲ 14 ದಿನಗಳಲ್ಲಿ 1100 ಕಡತಗಳನ್ನು ವಿಲೇವಾರಿ ಮಾಡಿ ಸಂಬಂಧಪಟ್ಟವರಿಗೆ ಅನುಕೂಲ ಮಾಡಿಕೊಡಲಾಗಿದೆ. ಶಾಸಕ ಡಿ.ಜಿ.ಶಾಂತನಗೌಡ ಅವರ ಸಹಕಾರದಿಂದ ಬಾಕಿಯಿದ್ದ ₹50 ಲಕ್ಷ ಶಿಕ್ಷಕರ ವೈದ್ಯಕೀಯ ವೆಚ್ಚದ ಮರುಪಾವತಿ ಬಿಡುಗೊಡೆಗೊಳಿಸಲಾಗಿತ್ತು ಎಂದು ಮಾಹಿತಿ ನೀಡಿದರು.ಈ ಹಿಂದೆ ಡಿ.ಜಿ.ಶಾಂತನಗೌಡ ಶಾಸಕರಾಗಿದ್ದ ಅವಧಿಯಲ್ಲಿ ತಮ್ಮ ಕರ್ತವ್ಯದಲ್ಲಿ ಹಸ್ತಕ್ಷೇಪ ಮಾಡದಿರುವಂತೆ ಭರವಸೆ ಪಡೆದು ಬಿಇಒ ಆಗಿ ಇದೇ ಹೊನ್ನಾಳಿಯಲ್ಲಿ ಕಾರ್ಯನಿರ್ವಹಿಸಿದ್ದು, ತಮ್ಮ ಅವಧಿಯಲ್ಲಿ ಸ್ವಯಂಕೃತ ಅಪರಾಧದಿಂದ 25 ಶಿಕ್ಷಕರನ್ನು ಸಸ್ಪೆಂಡ್ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದು ಬೇಸರ ವ್ಯಕ್ತಪಡಿಸಿದರು. 9 ವರ್ಷಗಳ ನಂತರವೂ ತಮ್ಮನ್ನು ಕರೆದು ಅಭಿನಂದನೆ ಸಲ್ಲಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ್ದ ಬಿಇಒ ಕೆ.ಟಿ.ನಿಂಗಪ್ಪ ಮಾತನಾಡಿ, ನಿಷ್ಠುರತೆಯಿಂದ ಯಾವುದೇ ಸ್ವಾರ್ಥವಿಲ್ಲದೇ ದಕ್ಷತೆಯಿಂದ ಬಿಇಒ ಆಗಿ ಕಾರ್ಯನಿರ್ವಹಿಸಿದ್ದ ಜಿ.ಎಸ್.ರಾಜಶೇಖರ್ ಅವರನ್ನು ಜಿ.ಎಸ್.ಆರ್. ಅಭಿಮಾನಿ ಬಳಗ ವತಿಯಿಂದ ಸನ್ಮಾನಿಸುತ್ತಿರುವುದು ಶ್ಲಾಘನೀಯ ಎಂದರು.ನಿವೃತ್ತ ಅಕ್ಷರ ದಾಸೋಹ ಇಲಾಖೆ ಸಹಾಯಕ ನಿರ್ದೇಶಕ ಭರ್ಮಪ್ಪ ಮೈಸೂರು ಮಾತನಾಡಿ, ವ್ಯಕ್ತಿ ತುಂಬಾ ವರ್ಷಗಳ ಕಾಲ ನೆನಪಿನಲ್ಲಿ ಉಳಿಯಬೇಕಾದರೆ ಆ ವ್ಯಕ್ತಿಯ ವ್ಯಕ್ತಿತ್ವ, ಕಾರ್ಯವೈಖರಿ ಕಾರಣವಾಗುತ್ತದೆ. ಇದಕ್ಕೆ ಜಿ.ಎಸ್.ರಾಜಶೇಖರ್ ಅವರೇ ಉತ್ತಮ ಉದಾಹರಣೆ ಎಂದರು.
ಎಸ್.ಎಚ್.ಜ್ಯೋತಿ, ಎ.ಕೆ.ಚನ್ನೇಶ್, ಚಂದ್ರಶೇಖರ್, ಎ.ಶೇಖರಪ್ಪ,ಸೋಮಶೇಖರ್ ಮತ್ತಿತರರ ಶಿಕ್ಷಕರು ಜಿ.ಎಸ್.ಆರ್. ಅವರ ಬಗ್ಗೆ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲಲ್ಇ ಎಸ್.ಜಿ.ಉಮಾಪತಿ ಸ್ವಾಗತಿಸಿ, ಕೆ.ಎಂ. ಕರಿಬಸವಯ್ಯ ನಿರೂಪಿಸಿದರು. ಬಿ.ಎಸ್.ರುದ್ರೇಶ್ ಅತಿಥಿಗಳನ್ನು ಪರಿಚಯಿಸಿ, ಎಂ.ಸಿದ್ದಪ್ಪ ವಂದಿಸಿದರು.ಬಿಆರ್‌ಸಿ ಎಂ.ತಿಪ್ಪೇಶಪ್ಪ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ನಾಗೇಂದ್ರಪ್ಪ, ಟಿಪಿಇಒ ಜಗದೀಶ್, ನ್ಯಾಮತಿ ಎನ್‌ಜಿಒ ಅಧ್ಯಕ್ಷ ಸಿದ್ದೇಶಪ್ಪ, ಪ್ರಾ.ಶಾ.ಶಿ. ಸಂಘದ ಅಧ್ಯಕ್ಷರಾದ ಎಚ್.ಕೆ. ಚಂದ್ರಶೇಖರ್, ಜ್ಞಾನೇಶ್, ಪ್ರಧಾನ ಕಾರ್ಯದರ್ಶಿ ಕೆ.ಪ್ರಕಾಶ್ ನಾಯ್ಕ್ ಹಾಗೂ ಅವಳಿ ತಾಲೂಕುಗಳ ಜಿ.ಎಸ್.ಆರ್. ಅಭಿಮಾನಿ ಬಳಗದ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
- - -(ಕೋಟ್) ಜಿ.ಎಸ್.ರಾಜಶೇಖರ್ ಮತ್ತು ಭರ್ಮಪ್ಪ ಮೈಸೂರು ಅವರು ಶಿಕ್ಷಣ ಇಲಾಖೆಯಲ್ಲಿ ತಮ್ಮ ದಕ್ಷ ಕಾರ್ಯವೈಖರಿಯಿಂದ ಅನೇಕ ಬದಲಾವಣೆಗಳನ್ನು ತಂದು ಗುಣಮಟ್ಟದ ಶಿಕ್ಷಣಕ್ಕಾಗಿ ಶ್ರಮಿಸಿದ್ದರು.
- ಅರುಣ್‌ಕುಮಾರ್, ಅಧ್ಯಕ್ಷ, ಸರ್ಕಾರಿ ನೌಕರರ ಸಂಘ.- - -
-12ಎಚ್.ಎಲ್.ಐ2.ಜೆಪಿಜಿ:ಸಮಾರಂಭದಲ್ಲಿ ಜಿ.ಎಸ್.ರಾಜಶೇಖರ್ ಅವರನ್ನು ಅಭಿನಂದಿಸಲಾಯಿತು.