ಕನ್ನಡಪ್ರಭ ವಾರ್ತೆ ಶಿರಾ ಸರ್ಕಾರಿ ಶಾಲೆಗಳು ನೂತನ ಕಟ್ಟಡದೊಂದಿಗೆ ಹೈಟೆಕ್ ಸ್ಪರ್ಶ ಪಡೆಯುವುದರ ಜೊತೆಗೆ ಗುಣಮಟ್ಟದ ಶಿಕ್ಷಣ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ದೊರಕಬೇಕು. ಹಳ್ಳಿಗಾಡಿನ ಪ್ರತಿಭಾವಂತ ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ನಂತಹ ಉನ್ನತ ಹುದ್ದೆಯನ್ನು ಪಡೆಯುವಂತಹ ಸ್ಥಿತಿ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಅಭಿವೃದ್ಧಿ ಮಾಡುತ್ತಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಚಿದಾನಂದ ಎಂ ಗೌಡ ಹೇಳಿದರು.ಅವರು ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ತರೂರು ಗ್ರಾಮದಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯನ್ನು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ ಗೌಡ ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ೧ ಕೋಟಿ ರು. ವೆಚ್ಚದಲ್ಲಿ ನೂತನ ಹೈಟೆಕ್ ಶಾಲಾ ಕೊಠಡಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಶಿಕ್ಷಣದಿಂದಲೇ ಸಮಾಜದ ಬದಲಾವಣೆ ಸಾಧ್ಯ ಎಂಬ ಧ್ಯೇಯ ವಾಕ್ಯದೊಂದಿಗೆ ಶಿರಾ ಕ್ಷೇತ್ರವನ್ನು ಶಿಕ್ಷಣ ಕಾಶಿ ಮಾಡಬೇಕೆಂಬುದೇ ನನ್ನ ಗುರಿಯಾಗಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿದ್ದೇನೆ. ಕ್ಷೇತ್ರದ ಹೃದಯವಂತ ಜನರು ನನ್ನ ಈ ಪ್ರಾಮಾಣಿಕ ಸೇವೆಯನ್ನು ಪರಿಗಣಿಸಿ ಆಶೀರ್ವದಿಸಲಿದ್ದಾರೆ ಎಂಬ ನಂಬಿಕೆ ಇದೆ ಎಂದ ಅವರು ಕಾಂಗ್ರೆಸ್ ಸರಕಾರ ಉಚಿತ ಭಾಗ್ಯಗಳಿಗೆ ಹೆಚ್ಚು ಆದ್ಯತೆ ನೀಡಿ, ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷ ತೋರಿದೆ ಎಂದರು.ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಮಾತನಾಡಿ ಸರ್ಕಾರ ಶಿಕ್ಷಣ, ನೀರಾವರಿ, ಆರೋಗ್ಯ ಕ್ಷೇತ್ರಗಳಿಗೆ ಹೆಚ್ಚು ಆದ್ಯತೆ ನೀಡಿದಾಗ ಮಾತ್ರ ಜನಸಾಮಾನ್ಯರಿಗೆ ಸಹಕಾರಿಯಾಗಲಿದೆ. ವಿಧಾನ ಪರಿಷತ್ ಸದಸ್ಯ ಚಿದಾನಂದ ಗೌಡ ಅವರು ಶಿರಾ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಿರುವುದು ಮೆಚ್ಚುವಂತಹದ್ದು, ಸರ್ಕಾರಿ ಶಾಲೆಯಲ್ಲಿ ಸಿಗುವಂತಹ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ, ಸಮಾಜ ಮೆಚ್ಚುವಂತೆ ತಮ್ಮ ಬದುಕನ್ನು ಉಜ್ಜನಗೊಳಿಸಿಕೊಳ್ಳಬೇಕು ಎಂದರು.ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಕಾರದ ವೀರಬಸವ ಸ್ವಾಮೀಜಿ ವಿದ್ಯಾರ್ಥಿಗಳು ತಂದೆ- ತಾಯಂದಿರ ಒತ್ತಾಸೆಗೆ ಪೂರಕವಾಗಿ ಶಿಕ್ಷಣ ಪಡೆದು ಯಶಸ್ವಿಯಾಗಬೇಕು, ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ ಗೌಡ ರವರ ಸರ್ಕಾರಿ ಶಾಲೆಗಳ ಅಭಿವೃದ್ಧಿಯ ಪರಿಕಲ್ಪನೆ ಸಮಾಜ ಎಂದೂ ಮರೆಯುವುದಿಲ್ಲ. ನಾವು ಮಾಡುವ ಸೇವೆ ದೇವರಿಗೆ ಮೆಚ್ಚುಗೆ ಯಾದರೆ , ಸೇವೆಯ ಫಲ ಆ ವ್ಯಕ್ತಿಗೆ ಲಭಿಸಲಿದೆ ಎಂದರು.ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷ ಮುದಿಮುಡು ರಂಗಶಾಮಯ್ಯ, ತರೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಪುಷ್ಪಲಕ್ಷ್ಮಿ ಪುಟ್ಟರಾಜು, ಉಪಾಧ್ಯಕ್ಷ ಗೀತಾ, ಗ್ರಾ ಪಂ ಸದಸ್ಯ ಗಂಗಣ್ಣ, ತಿಪ್ಪಣ್ಣ, ತಾಲೂಕು ಗ್ರಾಮಾಂತರ ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ಪಟೇಲ್, ಮಾಜಿ ಅಧ್ಯಕ್ಷ ಚಿಕ್ಕಣ್ಣ, ಗ್ರಾಮ ಪಂಚಾಯತಿ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಉಗ್ರಪ್ಪ, ಹಿರಿಯ ಮುಖಂಡ ಬರಗೂರು ಶಿವಕುಮಾರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್.ನಾಗರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತರಾಜು, ಶಿಕ್ಷಣ ಸಂಯೋಜಕ ನಾಗಭೂಷಣ್, ಮುಖ್ಯೋಪಾಧ್ಯಾಯ ಹನುಮಂತರಾಯಪ್ಪ, ಗುತ್ತಿಗೆದಾರ ರಮೇಶ್, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಶಿವಕುಮಾರ್, ತರೂರು ಬಸವರಾಜು, ಗಂಜಲಗುಂಟೆ ಮುನಿರಾಜು, ಬಾಂಬೆ ನಾಗಣ್ಣ, ಗ್ರಾಪಂ ಸದಸ್ಯ ಎಂ ಶಿವಲಿಂಗಯ್ಯ, ಮದಕನಹಳ್ಳಿ ಗೊಲ್ಲರಹಟ್ಟಿ ಗೌಡಪ್ಪ, ತಾವರೆಕೆರೆ ಗ್ರಾ ಪಂ ಸದಸ್ಯ ಸ್ನೇಹ ಪ್ರಿಯ ಶಿವು, ನಾಗರಾಜು, ನಾಗರತ್ನಮ್ಮ, ಪ್ರಧಾನ ಕಾರ್ಯದರ್ಶಿ ಕೊಟ್ಟ ರಂಗನಾಥ್, ಬಾಬಣ್ಣ, ಸತೀಶ್, ಬಾಲಬಸವನಹಳ್ಳಿ ರಾಮೇಗೌಡ, ಎಲ್ಐಸಿ ರಮೇಶ್, ಮಾಜಿ ತಾ ಪಂ ಸದಸ್ಯ ಉದಯ ಶಂಕರ್, ಮಾಜಿ ಅಧ್ಯಕ್ಷ ಲೋಕೇಶ್, ಮಾಜಿ ಸದಸ್ಯ ದೇವರಾಜ್, ಮುಖಂಡ ರೇಣುಕಾ ಪ್ರಸಾದ್, ವಿಎಸ್ಎಸ್ಎನ್ ಚಿಕ್ಕಣ್ಣ, ತಿಪ್ಪಣ್ಣ ಸೇರಿದಂತೆ ಹಲವರು ಹಾಜರಿದ್ದರು.