ಕನ್ನಡಪ್ರಭ ವಾರ್ತೆ ಹಲಗೂರು
ವಿದ್ಯಾರ್ಥಿಗಳಿಗೆ ಭಾವಕೋಶ ಕಟ್ಟಿಕೊಡುವ, ಹೆತ್ತವರನ್ನು ಪ್ರೀತಿಸುವ, ಆದರಿಸುವ ಹೃದಯವಂತಿಕೆ ಬೆಳೆಸುವುದೇ ಸರ್ಕಾರಿ ಶಾಲೆಗಳು ಎಂದು ನಿವೃತ್ತ ಪ್ರಾಂಶುಪಾಲ ದೊಡ್ಡ ಅರಸಿನಕೆರೆ ಕೆ. ಮಾಯಪ್ಪ ಅಭಿಪ್ರಾಯಪಟ್ಟರು.ದಳವಾಯಿ ಕೊಡಹಳ್ಳಿ ಸರ್ಕಾರಿ ಪ್ರೌಢಶಾಲೆಯ 40ನೇ ವರ್ಷದ ಬೆಳ್ಳಿಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಗುರು ಶಿಷ್ಯರ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿ, ಶಾಲೆಯಲ್ಲಿ ಪಾಠ ಮಾಡಿದ ಶಿಕ್ಷಕರು, ಓದಿ ವಿವಿಧೆಡೆ ಜೀವನ ರೂಪಿಸಿಕೊಂಡಿರುವ ವಿದ್ಯಾರ್ಥಿಗಳನ್ನು ಪ್ರೀತಿಯಿಂದ ಒಗ್ಗೂಡಿಸುವ ಈ ಅಭೂತಪೂರ್ವ ಕಾರ್ಯಕ್ರಮ ಸಮಾಜಕ್ಕೆ ಉತ್ತಮ ಸಂದೇಶವಾಗಿದೆ ಎಂದರು.
ಆಧುನಿಕ ತೈಲ ಚಾಲಿತ ಮೋಟಾರ್ ಗಾಡಿ ಬದಲು ಗ್ರಾಮೀಣ ಸೊಗಡಿನ ಜನಪದ ಶೈಲಿಯ ಅಲಂಕೃತ ಎತ್ತಿನ ಗಾಡಿಯಲ್ಲಿ ಶಿಕ್ಷಕರನ್ನು ವೇದಿಕೆಗೆ ಕರೆತಂದಿದ್ದು ನಿಮ್ಮಲ್ಲಿರುವ ಸದಾಭಿರುಚಿಯನ್ನು ತೋರಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಹಿಂದೆ ಶಿಕ್ಷಕರಾಗಿದ್ದ ದೇವರಾಜು, ನಂದರಾಜು, ಚಂದ್ರಣ್ಣ ಸೇರಿದಂತೆ ಇತರ ಶಿಕ್ಷಕರು ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿದ್ದ ತಾತ್ಸರ ಭಾವನೆ ಹೊಗಲಾಡಿಸಿ ಶಾಲೆಗಳು ಅಭಿವೃದ್ಧಿ ಹೊಂದಲು ಹಳೆಯ ವಿದ್ಯಾರ್ಥಿಗಳು ಎಲ್ಲರನ್ನೂ ಒಗ್ಗೂಡಿಸಿ ಗುರು ಶಿಷ್ಯರ ಸಮ್ಮಿಲನ ಆಯೋಜಿಸಿ ಇಂದು ಸನ್ಮಾನಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಮಂಡ್ಯ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲ ಎಸ್. ಬಿ. ಶಂಕರೇಗೌಡ ಮಾತನಾಡಿ, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಈಗ ಉನ್ನತ ಹುದ್ದೆಯಲ್ಲಿದ್ದಾರೆ. ಇಂದು ಶಾಲೆ ಹಾಗೂ ವಿದ್ಯೆ ಕಲಿಸಿದ ಗುರುಗಳನ್ನು ನೆನೆದು ಕಾರ್ಯಕ್ರಮವನ್ನು ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂ.ಶಿವಮಾದಪ್ಪ ಮಾತನಾಡಿ, ದೇಶದ ಮಹಾನ್ ವ್ಯಕ್ತಿಗಳೆಲ್ಲ ಹುಟ್ಟಿನಿಂದಲೇ ಶ್ರೀಮಂತರಲ್ಲ. ಎಲ್ಲರೂ ಬಡ ಹಾಗೂ ಸಾಮಾನ್ಯ ಕುಟುಂಬದವರೇ. ಅವರು ತಮ್ಮ ಪರಿಶ್ರಮದಿಂದ ಸಮಾಜದಲ್ಲಿ ಸಾಧಕರಾಗಿ ವಿಶ್ವದಲ್ಲೇ ವಿಶ್ವ ಮಾನವರಾಗಿ ಗುರುತಿಸಲ್ಪಟ್ಟವರು ಎಂದು ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಿಂದ ಎತ್ತಿನಗಾಡಿಗಳನ್ನು ಸಿಂಗರಿಸಿಕೊಂಡು ಶಿಕ್ಷಕರನ್ನು ಮೆರವಣಿಗೆ ಮುಖಾಂತರ ಡೊಳ್ಳು ಕುಣಿತ, ದೇವರ ಕುಣಿತದೊಡನೆ ವಿದ್ಯಾರ್ಥಿಗಳಿಂದ ಕುಂಭಮೇಳದೊಡನೆ ಪುಷ್ಪಾರ್ಚನೆ ಮೂಲಕ ಸರ್ಕಾರಿ ಪ್ರೌಢಶಾಲಾ ಅವರಣಕ್ಕೆ ಕರೆತಲಾಯಿತು.ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಸುಮಾರು 40ಕ್ಕೂ ಹೆಚ್ಚು ಶಿಕ್ಷಕರನ್ನು ಹಳೆಯ ವಿದ್ಯಾರ್ಥಿ ಸಂಘದ ಗುರು ಶಿಷ್ಯರ ಬಳಗದ ವತಿಯಿಂದ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ರವೀಶ, ತಮ್ಮಣ್ಣಗೌಡ, ಶ್ರೀನಿವಾಸ, ಸಿದ್ದಯ್ಯ, ಶಿವರಾಜು, ಸುರೇಂದ್ರ, ಬಸವಲಿಂಗೇಗೌಡ, ಡಿ.ಕೆ. ಮಹೇಶ್ ಸೇರಿದಂತೆ ಇತರರು ಇದ್ದರು.