ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನಾರಂಭ

KannadaprabhaNewsNetwork |  
Published : May 30, 2025, 12:11 AM ISTUpdated : May 30, 2025, 10:49 AM IST
ಶಾಲೆ | Kannada Prabha

ಸಾರಾಂಶ

ಒಂದೂವರೆ ತಿಂಗಳ ಬೇಸಿಗೆ ರಜೆ ಬಳಿಕ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನಾರಂಭಗೊಂಡಿದ್ದು, ಗುರುವಾರ ಸಡಗರ ಸಂಭ್ರಮಗಳಿಂದ ಚಿಣ್ಣರು ಶಾಲೆಗಳತ್ತ ಹೆಜ್ಜೆ ಹಾಕಿದರು.

 ಬೆಂಗಳೂರು : ಒಂದೂವರೆ ತಿಂಗಳ ಬೇಸಿಗೆ ರಜೆ ಬಳಿಕ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನಾರಂಭಗೊಂಡಿದ್ದು, ಗುರುವಾರ ಸಡಗರ ಸಂಭ್ರಮಗಳಿಂದ ಚಿಣ್ಣರು ಶಾಲೆಗಳತ್ತ ಹೆಜ್ಜೆ ಹಾಕಿದರು. ಮಕ್ಕಳನ್ನು ಪ್ರೀತಿಯಿಂದ ಸ್ವಾಗತಿಸಿದ ಶಿಕ್ಷಕರು, ಅವರಿಗೆ ಸಿಹಿ, ಗುಲಾಬಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ, ಕೊರೋನಾ ಭೀತಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ತಿಳಿ ಹೇಳಿದರು.

ಚಾಮರಾಜನಗರದ ಸೇವಾಭಾರತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡಿ, ಸ್ವಾಗತ ಕೋರಲಾಯಿತು. ತುಮಕೂರು ಜಿಲ್ಲೆ ಪಾವಗಡದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ ಹಾಗೂ ಆದರ್ಶ ವಿದ್ಯಾಲಯ ಎಸ್‌ಡಿಎಂಸಿ ಅಧ್ಯಕ್ಷ ಪ್ರಕಾಶ್‌ ಅವರು ‘ಬನ್ನಿ ಮಕ್ಕಳೇ ಸರ್ಕಾರಿ ಶಾಲೆಗೆ ಬನ್ನಿ’ ಎಂಬ ವಿನೂತನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಮಧ್ಯೆ, ಹಾವೇರಿ ತಾಲೂಕಿನ ಶಾಲೆಗಳಲ್ಲಿ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಸ್ವಚ್ಛತಾ ಆಂದೋಲನ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಬಳ್ಳಾರಿ ಜಿಲ್ಲೆ ಸಂಡೂರಿನಲ್ಲಿ ಶಾಲೆಗಳ ಪ್ರವೇಶದ್ವಾರವನ್ನು ತೆಂಗಿನಗರಿ, ಬಣ್ಣದ ಹಾಳೆಗಳು ಹಾಗೂ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕಂಪ್ಲಿ ತಾಲೂಕಿನ ಕೆಲವೆಡೆ ಮಕ್ಕಳಿಗೆ ಆರತಿ ಎತ್ತಿ, ಹಣ್ಣು, ಪುಸ್ತಕ, ಸಿಹಿ ತಿಂಡಿ ನೀಡಿ ಸ್ವಾಗತಿಸುವ ಮೂಲಕ ತರಗತಿ ಪ್ರಾರಂಭಿಸಲಾಯಿತು. ವಿಜಯನಗರ ಜಿಲ್ಲೆ ಕೂಡ್ಲಿಗಿಯ ಕೆಲವು ಶಾಲೆಗಳಲ್ಲಿ ಮಕ್ಕಳ ಮೇಲೆ ಹೂವನ್ನು ಸುರಿಸಿ, ಸ್ವಾಗತ ಕೋರಲಾಯಿತು.

 ಹೊಸಪೇಟೆ ತಾಲೂಕಿನ ಕೆಲವೆಡೆ ಶಾಲಾ ಪ್ರಾರಂಭೋತ್ಸವದ ಹಿನ್ನೆಲೆಯಲ್ಲಿ ನಗರ, ಪಟ್ಟಣ, ಹಳ್ಳಿ, ತಾಂಡಾಗಳಲ್ಲಿ ಶಿಕ್ಷಕರು, ಮಕ್ಕಳು ಸೇರಿ ಪ್ರಭಾತ್‌ ಪೇರಿ ನಡೆಸಿದರು.

ಬಾಗಲಕೋಟೆಯ ಬಿ.ವಿ.ವಿ.ಸಂಘದ ಬಸವೇಶ್ವರ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ನ್ಯೂ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡಿ, ಸಿಹಿ ಹಂಚಿ, ಅಕ್ಷರಾಭ್ಯಾಸ ಮಾಡಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಶಾಲೆಯಲ್ಲಿ ಸರಸ್ವತಿ ಹಾಗೂ ಗಣಪತಿ ಪೂಜೆ ಮಾಡಿ ಮಕ್ಕಳಿಗೆ ಆರತಿ ಬೆಳಗುವ ಮೂಲಕ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.

ಉಡುಪಿಯ ಪಾಡಿಗಾರುನಲ್ಲಿರುವ ಪುತ್ತಿಗೆ ಮಠದ ಸುಗುಣಾ ಲೌಕಿಕ ವೈದಿಕ ಸ್ಕೂಲ್‌ನಲ್ಲಿ ಮಕ್ಕಳಿಗೆ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದ ಸರ್ವಜ್ಞ ಪೀಠದಲ್ಲಿ ಮೊದಲನೇ ದಿನದ ಶಾಂತಿ ಪಾಠ ಮಾಡುವ ಮೂಲಕ ಶಾಲೆಯ ಪುನರಾರಂಭಕ್ಕೆ ಚಾಲನೆ ನೀಡಿದರು. ಕೆಲವು ಸಣ್ಣ ಮಕ್ಕಳಿಗೆ ಅಕ್ಷರಾಭ್ಯಾಸವನ್ನೂ ನೆರವೇರಿಸಿದರು.

PREV
Read more Articles on

Recommended Stories

ದರ್ಶನ್‌ ಅಶ್ಲೀಲ ಫ್ಯಾನ್ಸ್‌ ವಿರುದ್ಧ ರಮ್ಯ ಸಮರ
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ನಾಲ್ವರು ಐಪಿಎಸ್‌ ಸಸ್ಪೆಂಡ್‌ ವಾಪಸ್‌