ನೀಡಿದ ದಾನ ಸದ್ವಿನಿಯೋಗವಾದಾಗ ಮಾತ್ರ ದಾನಿಗಳ ಮನಸ್ಸಿಗೆ ನೆಮ್ಮದಿ ತರುವಂತಾಗುತ್ತದೆ, ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ಮಹತ್ವದ್ದಾಗಿದೆ.
ಲಕ್ಷ್ಮೇಶ್ವರ: ತಾಂತ್ರಿಕವಾಗಿ ಶಿಕ್ಷಣ ಕ್ಷೇತ್ರ ಸಾಕಷ್ಟು ಪ್ರಗತಿ ಸಾಧಿಸುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿಯೂ ಆಧುನಿಕತೆಯ ಶಿಕ್ಷಣದ ಜತೆ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿವೆ ಎಂದು ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಜ ಸೀಮಿಕೇರಿ ತಿಳಿಸಿದರು.
ಗುರುವಾರ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ನಂ. ೧ ಶಾಲೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಶಾಲೆಯ ಹಳೆಯ ವಿದ್ಯಾರ್ಥಿಯೂ ಆಗಿರುವ ಹಿರಿಯರಾದ ರಾಜಕುಮಾರ ಅಗಡಿ ಅವರು ನೀಡಿದ ಪ್ರೊಜೆಕ್ಟರ್‌ಗೆ ಚಾಲನೆ ನೀಡಿ ಮಾತನಾಡಿದರು.ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಬದಲಾವಣೆಯಾಗುತ್ತಿದೆ. ಹೊಸ ತಂತ್ರಜ್ಞಾನಗಳ ಬಳಕೆ ಮೂಲಕ ವಿದ್ಯಾರ್ಥಿಗಳಿಗೆ ಇನ್ನೂ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎನ್ನುವ ಉದ್ದೇಶವನ್ನು ಅಗಡಿ ಕುಟುಂಬದವರು ಹೊಂದಿದ್ದು, ಈಗಾಗಲೇ ಪಟ್ಟಣದ ಶಿಕ್ಷಣದ ಬೆಳವಣಿಗೆಯಲ್ಲಿ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅಲ್ಲದೆ ಅನೇಕ ಶಾಲೆಗಳಿಗೆ ವಿಶೇಷವಾಗಿ ದಾನ ನೀಡುವ ವಿಶಿಷ್ಟ ಕುಟುಂಬ ಇವರದ್ದಾಗಿದೆ. ದಾನಿಗಳು ಸಾಕಷ್ಟು ಜನರಿದ್ದಾರೆ. ಆದರೆ ಅವರು ನೀಡಿದ ದಾನ ಸದ್ವಿನಿಯೋಗವಾದಾಗ ಮಾತ್ರ ದಾನಿಗಳ ಮನಸ್ಸಿಗೆ ನೆಮ್ಮದಿ ತರುವಂತಾಗುತ್ತದೆ, ಸರ್ಕಾರಿ ಶಾಲೆಗಳ ಬೆಳವಣಿಗೆಯಲ್ಲಿ ದಾನಿಗಳ ಪಾತ್ರ ಮಹತ್ವದ್ದಾಗಿದೆ ಎಂದರು.ಸುಮಾರು ₹೮೦ ಸಾವಿರಕ್ಕೂ ಅಧಿಕ ಬೆಲೆಯ ಪ್ರೊಜೆಕ್ಟರ್ ನೀಡಿದ ದಾನಿಗಳಾದ ಗಿರೀಶ ಅಗಡಿ ಮಾತನಾಡಿ, ಇಂದು ಉನ್ನತ ಹುದ್ದೆಯಲ್ಲಿರುವ ಬಹುತೇಕರು ಸರ್ಕಾರಿ ಶಾಲೆಗಳಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದಾರೆ. ಅಂದಿಗೂ ಇಂದಿಗೂ ಸಾಕಷ್ಟು ವ್ಯತ್ಯಾಸವಾಗಿದ್ದು, ಇದೀಗ ಸರ್ಕಾರಿ ಶಾಲೆಗಳಲ್ಲಿ ಸಾಕಷ್ಟು ಯೋಜನೆಗಳು ಮಕ್ಕಳಿಗೆ ದೊರಕುತ್ತಿವೆ. ಅವುಗಳ ಸದುಪಯೋಗ ಮಾಡಿಕೊಳ್ಳುವುದು ಅವಶ್ಯವಾಗಿದೆ ಎಂದು ಸಲಹೆ ನೀಡಿದರು.
ದೈಹಿಕ ಶಿಕ್ಷಣಾಧಿಕಾರಿ ಎಲ್.ಟಿ. ಪಾಟೀಲ, ಶಿಕ್ಷಣ ಸಂಯೋಜಕ ಆರ್.ಬಿ. ಜೋಶಿ, ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಶಿರಬಡಗಿ, ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ, ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್. ಪಾಟೀಲ, ಬಿ.ಎಂ. ಕುಂಬಾರ, ಎಫ್.ಎಸ್. ನದಾಫ, ಶಂಕರ ಬ್ಯಾಡಗಿ, ದ್ಯಾಮಣ್ಣ ಕಮತದ, ದಿಗಂಬರ ಪೂಜಾರ, ಶಿವಲಿಂಗಯ್ಯ ಹೊತಗಿಮಠ, ಕಲ್ಯಾಣಿ ತಟ್ಟಿ, ಉಮೇಶ ನೇಕಾರ, ಶ್ರೀನಿವಾಸ ಮತ್ತೂರ, ಶಿಕ್ಷಕ ಎಸ್.ಎಸ್. ಮಹಾಲಿಂಗಶೆಟ್ಟರ, ಎಸ್.ಬಿ. ಲಮಾಣಿ, ಸವಿತಾ ಬೋಮಲೆ, ಈ.ಎಚ್. ಪೀಟರ್, ಆಯಿಷಾ ನದಾಫ, ಪ್ರಿಯಾ ಬನ್ನಿಕೊಪ್ಪ, ಭಾರತಿ ಮುಂತಾದವರಿದ್ದರು. ಮುಖ್ಯೋಪಾಧ್ಯಾಯ ಡಿ.ಎನ್. ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್.ಬಿ. ಆಡರಕಟ್ಟಿ ನಿರೂಪಿಸಿದರು. ಎಸ್.ಎಂ. ಬೋಮಲೆ ಸ್ವಾಗತಿಸಿದರು. ಎಸ್.ಬಿ. ಲಮಾಣಿ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.