ಕಣಿವೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ- ವಲಯ ಮಟ್ಟದ ಪ್ರತಿಭಾ ಕಾರಂಜಿ
ಮಲೆನಾಡಿನ ಭಾಗದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೂ ಆ ಶಾಲೆಗಳನ್ನು ಮುಚ್ಚದೆ ಉಳಿಸಿ ಕೊಳ್ಳಬೇಕು ಎಂದು ಕಣಿವೆ ನಾಗಚಂದ್ರ ಪ್ರತಿಷ್ಠಾನ ಅಧ್ಯಕ್ಷ ಹಾಗೂ ದಾನಿಗಳಾದ ಕಣಿವೆ ವಿನಯ್ ಸಲಹೆ ನೀಡಿದರು.
ಬುಧವಾರ ಕಣಿವೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಹಾಗೂ ಶೆಟ್ಟಿಕೊಪ್ಪ ಕ್ಲಸ್ಠರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಲೆನಾಡು ಭಾಗದ ಸರ್ಕಾರಿ ಶಾಲೆಯಲ್ಲಿ ಒಂದು ಮಗು ಬರುತ್ತಿ ದ್ದರೂ ಅದನ್ನು ಮುಚ್ಚದೆ ಶಾಲೆ ನಡೆಸಬೇಕು. ಈ ಭಾಗದ ಗ್ರಾಮಗಳಲ್ಲಿ ಇರುವ ಮನೆಗಳ ಸಂಖ್ಯೆಯೇ ಕಡಿಮೆ. ಬಯಲು ಸೀಮೆಗೂ, ಮಲೆನಾಡಿಗೂ ಬಹಳ ವ್ಯತ್ಯಾಸವಿದೆ. ಸರ್ಕಾರಿ ಶಾಲೆ ಮುಚ್ಚದೆ ಹಾಗೇ ಉಳಿಸಿಕೊಂಡರೆ ನಂತರದ ವರ್ಷ ಗಳಲ್ಲಿ ಮಕ್ಕಳ ಸಂಖ್ಯೆ ಜಾಸ್ತಿಯಾಗಬಹುದು. ಈ ಸಮಸ್ಯೆ ಬಗ್ಗೆ ಮಲೆನಾಡು ಭಾಗದ ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದರು.ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗಬಾರದು. ಅನೇಕ ಸಂದರ್ಭದಲ್ಲಿ ಮಕ್ಕಳಿಗಿಂತ ಪೋಷಕರಿಗೇ ಇಂಗ್ಲೀಷ್ ಹಾಗೂ ಖಾಸಗಿ ಶಾಲೆ ವ್ಯಾಮೋಹ ಜಾಸ್ತಿಯಾಗಿದೆ. ಖಾಸಗಿ ಶಾಲೆಗಳಲ್ಲಿ ಓದಿದ ಮಕ್ಕಳಿಗಿಂತ ಸರ್ಕಾರಿ ಶಾಲೆಗಳಲ್ಲಿ ಓದಿದ ಮಕ್ಕಳೇ ಹೆಚ್ಚು ಸಂಸ್ಕಾರವಂತರಾಗಿದ್ದಾರೆ. ಖಾಸಗಿ ಶಾಲೆಗಳಲ್ಲಿ ಓದಿ ಲಕ್ಷಾಂತರ ಸಂಪಾದನೆ ಮಾಡುತ್ತಿರುವ ಮಕ್ಕಳೇ ಇಂದು ತಮ್ಮ ತಂದೆ, ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡುತ್ತಿದ್ದಾರೆ. ಖಾಸಗಿ ಶಾಲೆಗಳು ಪಾಶ್ಚಾತ್ಯ ಶಿಕ್ಷಣ ಅನುಕರಣೆ ಮಾಡಿ ಕೇವಲ ಅಂಕ ಗಳಿಸುವತ್ತ ಮಾತ್ರ ಗಮನ ನೀಡಿ ಸಂಸ್ಕಾರ ಕಲಿಸುತ್ತಿಲ್ಲ ಎಂದು ಆರೋಪಿಸಿದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಣದ ಜೊತೆಗೆ ಕಲೆ, ಕ್ರೀಡೆ, ಸಂಗೀತ, ಸಾಹಿತ್ಯ ಎಲ್ಲವೂ ಬೇಕಾಗುತ್ತದೆ. ಮಕ್ಕಳಲ್ಲಿ ಯಾವ ಪ್ರತಿಭೆ ಅಡಗಿದೆ ಎಂದು ಪೋಷಕರು ಗುರುತಿಸಿ ಪ್ರೋತ್ಸಾಹ ನೀಡಬೇಕು. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಬೇಕು ಎಂದು ಸರ್ಕಾರ ಪ್ರತಿಭಾ ಕಾರಂಜಿ ಹಮ್ಮಿಕೊಂಡಿದೆ. ಮಕ್ಕಳು ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುತ್ತಳಿಕೆ ಕೇಶವ ಮತ್ತು ತಂಡದವರಿಂದ ಹಾಸ್ಯ ಸಂಜೆ ನಡೆಯಿತು.