ಕುಮಟಾ: ಇಂದಿನ ಕಾಲಘಟ್ಟದಲ್ಲಿ ಸರ್ಕಾರಿ ಶಾಲೆಗಳು ಯಾವುದೇ ಖಾಸಗಿ ಶಾಲೆಗಳಿಗೂ ಕಡಿಮೆ ಇಲ್ಲದಂತೆ ನಡೆಯುತ್ತಿರುವುದು ಸಂತೋಷದ ವಿಚಾರ. ಸರ್ಕಾರಿ ಶಾಲೆಗಳಿಗೆ ಎಲ್ಲ ವ್ಯವಸ್ಥೆಯನ್ನು ಸರ್ಕಾರ ಮಾಡುತ್ತಿದೆ ಎಂದು ಸಚಿವ ಮಂಕಾಳು ವೈದ್ಯ ಹೇಳಿದರು.
ಈ ಶಾಲೆಗೆ ಆಂಗ್ಲ ಮಾಧ್ಯಮ ಪ್ರಾರಂಭಕ್ಕೆ ಪ್ರಸ್ತಾವನೆ ಬಂದಿದ್ದು ಕ್ರಮ ಕೈಗೊಳ್ಳುತ್ತೇವೆ. ಶಿಕ್ಷಣದ ಜತೆಗೆ ಮಕ್ಕಳಲ್ಲಿ ಮಾನವೀಯ ಗುಣಗಳನ್ನು ಕಲಿಸುವ ಕಾರ್ಯ ಮಾಡಬೇಕಾಗಿರುವುದು ಶಿಕ್ಷಕರ ಹಾಗೂ ಪಾಲಕರ ಕರ್ತವ್ಯ. ಮೌಲ್ಯವಿಲ್ಲದ ಮನುಷ್ಯ ಮೃಗಕ್ಕೆ ಸಮ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ೧೫೦ಕ್ಕೂ ಹೆಚ್ಚು ವರ್ಷ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸೇವೆಗೈದ ಕಾಗಾಲ ಮಾದರಿ ಶಾಲೆಯ ಈ ಕಾರ್ಯಕ್ರಮ ಅತ್ಯಂತ ವಿಶೇಷ. ನಮ್ಮ ಕ್ಷೇತ್ರದಲ್ಲಿ ಶಾಲೆಗಳ ಅವಶ್ಯಕತೆಗೆ ತಕ್ಕಂತೆ ಕೆಲಸ ಮಾಡಿಕೊಟ್ಟಿದ್ದೇನೆ. ಕಾಗಾಲದಲ್ಲಿಯೂ ಶಾಲೆಯ ಕಟ್ಟಡ, ರಸ್ತೆ ಹಾಗೂ ಇನ್ನಿತರ ಅಗತ್ಯ ವ್ಯವಸ್ಥೆ ಮಾಡಿಕೊಟ್ಟಿದ್ದೇನೆ. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಉಸ್ತುವಾರಿ ಸಚಿವ ಮಂಕಾಳು ವೈದ್ಯರ ಸಹಕಾರದ ಕೊಡುಗೆ ಹೆಚ್ಚು ಬೇಕು ಎಂದರು.ಜಿಪಂ ಮಾಜಿ ಸದಸ್ಯ ರತ್ನಾಕರ ನಾಯ್ಕ ಮಾತನಾಡಿ, ನಮ್ಮ ಪೂರ್ವಜರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕು. ಮುಂದಿನ ಸಾವಿರ ವರ್ಷಕ್ಕೆ ಒಳಿತಿನೆಡೆ ಸಾಗುವುದಕ್ಕೆ ಈ ಕಾರ್ಯಕ್ರಮ ಬುನಾದಿಯಾಗಲಿ. ಇಂದಿನ ದಿನಮಾನಕ್ಕೆ ಇಂಗ್ಲೀಷ್ ಶಿಕ್ಷಣದ ಅವಶ್ಯಕತೆ ಇದ್ದು, ಎಲ್ಲ ಸರ್ಕಾರಿ ಶಾಲೆಗಳಲ್ಲಿ ಅಂಗ್ಲಮಾಧ್ಯಮ ಅಳವಡಿಕೆಯಾಗಲಿ ಎಂದರು.
ಬಿಇಒ ರಾಜೇಂದ್ರ ಭಟ್ಟ, ಗ್ರೇಡ್ ೨ ತಹಶೀಲ್ದಾರ ಸತೀಶ ಗೌಡ, ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಪಟಗಾರ, ಜಿಪಂ ಮಾಜಿ ಉಪಾಧ್ಯಕ್ಷೆ ಲಲಿತಾ ಪಟಗಾರ, ವಿ.ಎಲ್. ನಾಯ್ಕ, ನಾರಾಯಣ ಶಾನಭಾಗ, ಜಿ.ಕೆ. ಪಟಗಾರ, ಶಿವರಾಮ ಪಟಗಾರ, ಪಿಡಿಒ ನವೀನ ನಾಯ್ಕ, ಮುಖ್ಯಶಿಕ್ಷಕಿ ಜಾಹ್ನವಿ ಹೆಗಡೆ ಇದ್ದರು.