ದಾನಿಗಳು ಹೆಚ್ಚಾದರೆ ಸರ್ಕಾರಿ ಶಾಲೆಗಳು ಅಭಿವೃದ್ಧಿ: ಸಚಿವ ಮಧು ಬಂಗಾರಪ್ಪ

KannadaprabhaNewsNetwork |  
Published : Oct 02, 2024, 01:14 AM IST
ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು | Kannada Prabha

ಸಾರಾಂಶ

ಸಾಗರ ನಗರಸಭೆ ರಂಗಮಂದಿರದಲ್ಲಿ ಮಂಗಳವಾರ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಸಚಿವ ಮಧು ಬಂಗಾರಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸಾಗರ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಸರ್ಕಾರಿ ಶಾಲೆಗಳ ಶ್ರೇಯೋಭಿವೃದ್ದಿಗೆ ಹೊಸಹೊಸ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು ನಮ್ಮ ಶಾಲೆ ನಮ್ಮ ಜವಾಬ್ದಾರಿ ಅತ್ಯಂತ ಪರಿಣಾಮಕಾರಿ ಹೆಜ್ಜೆಯಾಗಿದೆ. ಈ ಯೋಜನೆಯಡಿ ಶಾಲಾಭಿವೃದ್ಧಿಗೆ ೫೦೦ ರುಪಾಯಿಯಿಂದ ೬.೫೦ ಕೋಟಿ ರುಪಾಯಿವರೆಗೆ ದೇಣಿಗೆ ಬಂದಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಇಲ್ಲಿನ ನಗರಸಭೆ ರಂಗಮಂದಿರದಲ್ಲಿ ಮಂಗಳವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಅಕ್ಷರ ದಾಸೋಹ ಮಧ್ಯಾಹ್ನ ಉಪಹಾರ ಯೋಜನೆ ಯಡಿ ಅಜೀಂ ಪ್ರೇಮ್ ಜೀ ಫೌಂಡೇಶನ್‌ನಿಂದ ನೀಡಲಾದ ಅನುದಾನದಲ್ಲಿ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಳೆಯ ವಿದ್ಯಾರ್ಥಿಗಳ ಸಂಘದ ೩೪೮೮೦ ವಾಟ್ಸಪ್ ಗ್ರೂಪ್ ರಚಿಸಿ ತನ್ಮೂಲಕ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಅಜೀಂ ಪ್ರೇಮ್ ಜೀ ಮಕ್ಕಳಿಗೆ ವಾರದ ಆರು ದಿನವೂ ಮೊಟ್ಟೆ ನೀಡಲು ೧೫೯೧ ಕೋಟಿ ರೂ. ಕೊಟ್ಟಿದ್ದಾರೆ. ಇಂತಹ ದಾನಿಗಳ ಸಂಖ್ಯೆ ಹೆಚ್ಚಾದಾಗ ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ರಾಜ್ಯದಲ್ಲಿ ಅತಿದೊಡ್ಡ ಇಲಾಖೆ ಶಿಕ್ಷಣ ಇಲಾಖೆಯಾಗಿದೆ. ಶೇ.೪೦ರಷ್ಟು ಸರ್ಕಾರಿ ನೌಕರರು ನಮ್ಮ ಇಲಾಖೆಯಲ್ಲಿದ್ದಾರೆ. ರಾಜ್ಯದ ೭೪ಸಾವಿರ ಶಾಲೆಗಳಲ್ಲಿ ೫೭ ಲಕ್ಷ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ವರ್ಷಕ್ಕೆ ೩೦ ಕೋಟಿ ಮೊಟ್ಟೆ ಬೇಕಾಗುತ್ತದೆ. ರಾಜ್ಯದಲ್ಲಿ ವಿಪರೀತ ಮಳೆಯಿಂದಾಗಿ ಶಾಲಾ ಕೊಠಡಿಗಳು ಹಾಳಾಗಿದೆ. ಮುಂದಿನ ಒಂದು ವರ್ಷದಲ್ಲಿ ಕೊಠಡಿಗಳನ್ನು ದುರಸ್ತಿ ಮಾಡಲಾಗುತ್ತದೆ. ಪೋಷಕರು ಮಕ್ಕಳನ್ನು ನಿರಂತರ ಶಾಲೆಗ ಕಳಿಸುವ ಮೂಲಕ ಅವರನ್ನು ವಿದ್ಯಾವಂತ ರನ್ನಾಗಿ ಮಾಡಿ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಅಜೀಂ ಪ್ರೇಮ್ ಜೀ ಅವರ ಶೈಕ್ಷಣಿಕ ಸೇವೆ ಎಲ್ಲರಿಗೂ ಪ್ರೇರಣೆಯಾಗಬೇಕು. ಶಿಕ್ಷಣದಲ್ಲಿ ಕ್ರಾಂತಿಯಾಗಬೇಕಾದರೆ ದೇಶದ ದೊಡ್ಡದೊಡ್ಡ ಕಂಪನಿಗಳು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ಅದಾನಿ ಅಂಬಾನಿಯಂತಹ ಶ್ರೀಮಂತರು ಸರ್ಕಾರಿ ಶಾಲೆ ಅಭಿವೃದ್ದಿಗೆ ಕೈಜೋಡಿಸಿ ಎಂದು ಮನವಿ ಮಾಡಿದ ಅವರು, ಶಿಕ್ಷಣದಿಂದ ಮಾತ್ರ ಶಕ್ತಿ ಬರುತ್ತದೆ. ಸರ್ಕಾರಿ ಶಾಲೆಗಳ ಬಗ್ಗೆ ನಿರಾಸಕ್ತಿ ತೋರಿಸದೆ ಇಲ್ಲಿನ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಫಲಿತಾಂಶ ತರಬೇಕು ಎಂದು ಹೇಳಿದರು.

ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೇಮಂತ್ ಎನ್., ಉಪವಿಭಾಗಾಧಿಕಾರಿ ಯತೀಶ್ ಆರ್., ಶಿಕ್ಷಣ ಇಲಾಖೆಯ ಕೆ.ಆರ್.ಬಿಂಬಾ, ಡಿವೈಎಸ್ಪಿ ಗೋಪಾಲಕೃಷ್ಣ ಟಿ. ನಾಯಕ್, ತಾಪಂ ಇಓ ಗುರುಕೃಷ್ಣ ಶೆಣೈ, ಪೌರಾಯುಕ್ತ ಎಚ್.ಕೆ.ನಾಗಪ್ಪ, ಭೂಮೇಶ್ ಇನ್ನಿತರರು ಹಾಜರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಪರಶುರಾಮಪ್ಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನ್ಸರ್ ಆಲಿ ಬೇಗ್ ವಂದಿಸಿದರು. ಡಾ.ಅನ್ನಪೂರ್ಣ ನಿರೂಪಿಸಿದರು.

PREV

Recommended Stories

ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ
ಒತ್ತಡ ಹೇರಿ ಶಾಸಕರಿಂದ ರಸ್ತೆ ಅಗಲೀಕರಣ