ಜನರ ಮನೆ ಬಾಗಿಲಿಗೆ ಸರ್ಕಾರಿ ಸೇವೆ: ಶಾಸಕ ಪಿ.ರವಿಕುಮಾರ್‌

KannadaprabhaNewsNetwork | Published : Apr 16, 2025 12:30 AM

ಸಾರಾಂಶ

ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಪೊಲೀಸ್ ಕಚೇರಿ ಮತ್ತು ಶಾಸಕರ ಕಚೇರಿಗಳಿಗೆ ಸಾರ್ವಜನಿಕರು ಅಲೆಯಬಾರದು. ರೈತರ ಸಮಸ್ಯೆಗಳನ್ನು ರೈತರ ಮನೆಯ ಬಾಗಿಲಿಗೆ ಹೋಗಿ ಆಲಿಸಬೇಕು ಎಂಬ ಸದುದ್ದೇಶದಿಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಮಾಡಿ ಅಹವಾಲುಗಳಿಗೆ ಸ್ಪಂದಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸರ್ಕಾರದ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕನಸು ಎಂದು ಶಾಸಕ ಪಿ.ರವಿಕುಮಾರ್‌ ಅಭಿಪ್ರಾಯಪಟ್ಟರು.

ಮಂಗಳವಾರ ಕೆರಗೊಡು ಹೋಬಳಿ ಹೊಡಾಘಟ್ಟ ಗ್ರಾಪಂ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತ ಮತ್ತು ತಾಪಂನಿಂದ ಆಯೋಜಿಸಲಾಗಿದ್ದ ಜನತಾ ದರ್ಶನ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಕಚೇರಿ, ತಾಲೂಕು ಕಚೇರಿ, ಪೊಲೀಸ್ ಕಚೇರಿ ಮತ್ತು ಶಾಸಕರ ಕಚೇರಿಗಳಿಗೆ ಸಾರ್ವಜನಿಕರು ಅಲೆಯಬಾರದು. ರೈತರ ಸಮಸ್ಯೆಗಳನ್ನು ರೈತರ ಮನೆಯ ಬಾಗಿಲಿಗೆ ಹೋಗಿ ಆಲಿಸಬೇಕು ಎಂಬ ಸದುದ್ದೇಶದಿಂದ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಮಾಡಿ ಅಹವಾಲುಗಳಿಗೆ ಸ್ಪಂದಿಸಲಾಗುತ್ತಿದೆ ಎಂದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡಲಾಗುತ್ತಿದೆ ಅಥವಾ 30 ದಿನಗಳೊಳಗೆ ನಿಮ್ಮ ಕುಂದುಕೊರತೆ ನಿವಾರಿಸುವುದಾಗಿ ಭರವಸೆ ನೀಡಿದರು.

ಬಹುದಿನಗಳಿಂದ ಬೇಡಿಕೆ ಇದ್ದ ಡಣಾಯಕನಪುರ ಮತ್ತು ಈಚಗೆರೆ ರಸ್ತೆ ನಿರ್ಮಾಣಕ್ಕೆ 4.5 ಕೋಟಿ ರು. ಅನುದಾನ ನೀಡಲಾಗಿದೆ. ಮುಂದಿನ ವಾರದಲ್ಲಿ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಪ್ರಾರಂಭ ಮಾಡಲಾಗುವುದು. ಹೊನ್ನನಾಯಕಹಳ್ಳಿ ಮತ್ತು ದೊಡ್ಡಬಾಣಸವಾಡಿ ಚಿಕ್ಕಬಾಣಸವಾಡಿ ರಸ್ತೆಗೆ 2 ಕೋಟಿ ರು. ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡುವುದಾಗಿ ಹೇಳಿದರು.

ದೊಡ್ಡಬಾಣಸವಾಡಿ ಬ್ರಿಡ್ಜ್ ಮತ್ತು ಗದ್ದೆ ಬಯಲಿನ ರಸ್ತೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಮಂತ್ರಿ ಚಲುವರಾಯಸ್ವಾಮಿ ಅವರು 5 ಕೋಟಿ ರು. ಅನುದಾನ ಬಿಡುಗಡೆಗೊಳಿಸಿದ್ದಾರೆ. ಶೀಘ್ರವಾಗಿ ಅದರ ಗುದ್ದಲಿ ಪೂಜೆಯನ್ನೂ ನೆರವೇರಿಸಲಾಗುವುದು ಎಂದರು.

ತಹಸೀಲ್ದಾರ್ ಶಿವಕುಮಾರ್ ಬಿರಾದರ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ ನಡೆಸುವ ಗುರಿ ಹೊಂದಿದ್ದೇವೆ. ಈಗಾಗಲೇ 3-4 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ನಡೆಸಿದ್ದೇವೆ. 15 ದಿನಕ್ಕೊಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಹಮ್ಮಿಕೊಳ್ಳಲಾಗುವುದು ಅದ್ದರಿಂದ ಸಾರ್ವಜನಿಕರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಶಾಸಕ ಪಿ.ರವಿಕುಮಾರ್ ಅವರು ಹೊಡಾಘಟ್ಟ ಗ್ರಾಮ ಪಂಚಾಯ್ತಿಯ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಅರ್ಹ ಫಲಾನುಭವಿಗಳಿಗೆ ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಅವರು ಇ-ಸ್ವತ್ತು ಪತ್ರಗಳನ್ನು ವಿತರಣೆ ಮಾಡಿದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಮಾಡಲಾಯಿತು, ಫಲಾನುಭವಿಗಳಿಗೆ ವೇದಿಕೆಯಲ್ಲಿ ಉಚಿತ ಪರೀಕ್ಷಿತ ಕನ್ನಡಕಗಳನ್ನು ವಿತರಿಸಲಾಯಿತು.

ಪಂಚ ಗ್ಯಾರಂಟಿ ಯೋಜನೆ ತಲುಪದಿರುವವರು ಈ ಸಹಾಯ ಕೇಂದ್ರಕ್ಕೆ ಅಗತ್ಯ ದಾಖಲೆಗಳೊಂದಿಗೆ ಬಂದು ತಮ್ಮ ಕುಂದು ಕೊರತೆಗಳನ್ನು ನೀವಾರಿಸಿಕೊಂಡು ಗ್ಯಾರಂಟಿ ಯೋಜನೆಗೆ ಅರ್ಜಿ ಸಲ್ಲಿಸಲು ಗ್ಯಾರಂಟಿ ಸಹಾಯ ಮಳಿಗೆಯನ್ನು ಸ್ಥಾಪಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಿ ವೀಣಾ, ಡಿವೈಎಸ್ಪಿ. ಲಕ್ಷ್ಮಿನಾರಾಯಣ ಪ್ರಸಾದ್, ಹೊಡಾಘಟ್ಟ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಚ್.ಬಿ ಆನಂದ್, ಸದಸ್ಯರಾದ ಗೌರಮ್ಮ, ಗಣೇಶ್, ನಾರಾಯಣಪ್ಪ ಇತರರಿದ್ದರು.

Share this article