ಹಾವೇರಿಯಲ್ಲಿ ಗಾಳಿ ಮಳೆ ಆರ್ಭಟಕ್ಕೆ ಅವಾಂತರ, ಜನಜೀವನ ಅಸ್ತವ್ಯಸ್ತ

KannadaprabhaNewsNetwork |  
Published : Apr 16, 2025, 12:30 AM IST
15ಎಚ್‌ವಿಆರ್‌3 | Kannada Prabha

ಸಾರಾಂಶ

ಹಾವೇರಿ, ಹಾನಗಲ್ಲ, ಬ್ಯಾಡಗಿ, ರಟ್ಟೀಹಳ್ಳಿ ಭಾಗದಲ್ಲಿ ಸಿಡಿಲು ಸಮೇತ ದಿಢೀರ್ ಧಾರಾಕಾರ ಮಳೆ ಸುರಿದಿದೆ. ಬೀಸಿದ ಭಾರೀ ಗಾಳಿಗೆ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿ ಬಿದ್ದಿವೆ. ಮನೆಯ ಮೇಲೆ ಹೊದಿಸಲಾಗಿದ್ದ ತಗಡುಗಳು ಹಾರಿ ಹೋಗಿವೆ.

ಹಾವೇರಿ: ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗದಲ್ಲಿ ಮಂಗಳವಾರ ಸಂಜೆ ಗುಡುಗು, ಮಿಂಚು, ಭಾರಿ ಗಾಳಿಯೊಂದಿಗೆ ಧಾರಾಕಾರವಾಗಿ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಭಾರಿ ಗಾತ್ರದ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವು ವಾಹನಗಳು ಮರಗಳ ಅಡಿಗೆ ಸಿಲುಕಿ ನಜ್ಜುಗುಜ್ಜಾಗಿದ್ದು, ವಿವಿಧೆಡೆ ಅವಾಂತರ ಸೃಷ್ಟಿಸಿತು. ಹಾವೇರಿ, ಹಾನಗಲ್ಲ, ಬ್ಯಾಡಗಿ, ರಟ್ಟೀಹಳ್ಳಿ ಭಾಗದಲ್ಲಿ ಸಿಡಿಲು ಸಮೇತ ದಿಢೀರ್ ಧಾರಾಕಾರ ಮಳೆ ಸುರಿದಿದೆ. ಬೀಸಿದ ಭಾರೀ ಗಾಳಿಗೆ ಅನೇಕ ಕಡೆಗಳಲ್ಲಿ ಮರಗಳು ಧರೆಗುರುಳಿ ಬಿದ್ದಿವೆ. ಮನೆಯ ಮೇಲೆ ಹೊದಿಸಲಾಗಿದ್ದ ತಗಡುಗಳು ಹಾರಿ ಹೋಗಿವೆ. ಸಂಗೂರು ಗ್ರಾಮದ ಸರ್ಕಾರಿ ಶಾಲೆಯ ಚಾವಣಿ ಹಾರಿ ಬಿದ್ದಿದೆ. ಹಾವೇರಿ- ಗುತ್ತಲ ರಸ್ತೆಯಲ್ಲಿ ಯತ್ತಿನಹಳ್ಳಿ ಬಳಿ ಬೃಹತ್ ಬೇವಿನ ಮರ ಬಿದ್ದ ಪರಿಣಾಮ ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ಸಂಚಾರ ಬಂದ್ ಆಗಿತ್ತು.

ಕೆರೆಮತ್ತಿಹಳ್ಳಿ ರಸ್ತೆಯಲ್ಲಿರುವ ಚೌಡೇಶ್ವರಿ ದೇವಸ್ಥಾನದ ಬೃಹತ್‌ ಮರ ಧರೆಗುರುಳಿದ್ದು, ಅದರಡಿ ನಿಲ್ಲಿಸಿಟ್ಟಿದ್ದ ಎರಡು ವಾಹನಗಳು ಜಖಂಗೊಂಡಿವೆ. ಹಾವೇರಿ- ಗುತ್ತಲ ನಡುವೆ ಗಾಧಿಪುರ, ಬಸಾಪುರ, ಅಗಡಿ ಸೇರಿದಂತೆ ವಿವಿಧೆಡೆ ಮರಗಳು ಬಿದ್ದು, ಸಂಚಾರ ಬಂದ್‌ ಆಗಿತ್ತು. ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್ ಆಗಿತ್ತು. ಬಳಿಕ ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಹಾವೇರಿಯ ವಿದ್ಯಾನಗರದಲ್ಲಿ ಮರಗಳು ವಿದ್ಯುತ್ ಕಂಬದ ಮೇಲೆಯೇ ಬಿದ್ದಿವೆ. ಶಿವಾಜಿ ನಗರದಲ್ಲಿ ಗಾಳಿಗೆ ವಿದ್ಯುತ್ ಕಂಬ ಮುರಿದು ಬಿದ್ದಿದೆ. ಪರಿಣಾಮ ನಗರದಲ್ಲಿ ತಡರಾತ್ರಿವರೆಗೂ ವಿದ್ಯುತ್ ವ್ಯತ್ಯಯವಾಯಿತು. ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಖಾಸಗಿ ಕಂಪನಿಯೊಂದು ಮನರಂಜನೆಗಾಗಿ ಅಳವಡಿಸುತ್ತಿದ್ದ ಲಂಡನ್ ಬ್ರಿಡ್ಜ್‌ ಮಾದರಿ ಗಾಳಿಗೆ ಮುರಿದು ಬಿದ್ದಿದೆ. ಕಳ್ಳಿಯಾಳ ಗ್ರಾಮದಲ್ಲಿ ವಿದ್ಯುತ್ ಕಂಬದ ಮೇಲೆ ಕಬ್ಬಿಣದ ತಗಡುಗಳು ಹಾರಿ ಬಿದ್ದಿವೆ. ಹಾವೇರಿ ನಗರದ ಹಳೆ ಪಿಬಿ ರಸ್ತೆಯ ಮೇಲೆಯೇ ಕೆರೆಯಂತೆ ನೀರು ಹರಿದಿದೆ. ಮಳೆ, ಚರಂಡಿ ನೀರು ಸರಾಗವಾಗಿ ಹರಿದು ಹೋಗಲು ನಗರಸಭೆಯವರು ಇತ್ತೀಚೆಗೆ ಎರಡೂ ಬದಿ ಕಾಲುವೆಗಳನ್ನು ಸ್ವಚ್ಛಗೊಳಿಸಿದ್ದರು. ಆದರೂ ಮೊದಲಿನಂತೆಯೇ ರಸ್ತೆಯ ಮೇಲೆ ನೀರು ಹರಿದಿದೆ. ಬಸ್ ನಿಲ್ದಾಣದ ಬಳಿ ಇರುವ ಗೂಗಿಕಟ್ಟಿ ಮಾರುಕಟ್ಟೆಗೂ ನೀರು ನುಗ್ಗಿದೆ. ಮಾರುಕಟ್ಟೆಯ ತಗ್ಗು ಪ್ರದೇಶದಲ್ಲಿರುವ ಅಂಗಡಿಗಳಿಗೆ ನುಗ್ಗಿದೆ.

ಇಲ್ಲಿಯ ಶಿವಾಜಿ ಸರ್ಕಲ್‌ ಬಳಿ ವಿದ್ಯುತ್‌ ಕಂಬ ಉರುಳಿ ಎರಡು ಬೈಕ್‌ಗಳು ಜಖಂಗೊಂಡಿವೆ. ಮೈಲಾರ ಮಹದೇವಪ್ಪ ವೃತ್ತದ ಬಳಿ ಮರ ಬಿದ್ದು ಕಾರು ನಜ್ಜುಗುಜ್ಜಾಗಿದೆ. ಮಳೆಯಿಂದ ನಗರ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಅವಾಂತರವಾಗಿದೆ. ಗಾಳಿಯಿಂದಾಗಿ ವಿದ್ಯುತ್ ವೈರ್‌ಗಳು ಹರಿದು ಬಿದ್ದ ಪರಿಣಾಮ ಜಿಲ್ಲೆಯ ವಿವಿಧಡೆ ವಿದ್ಯುತ್ ವ್ಯತ್ಯಯ ಉಂಟಾಯಿತು. ಹಲವು ಕಡೆ ರಸ್ತೆ ಪಕ್ಕದಲ್ಲಿ ಒಣಗಲು ಹಾಕಿದ್ದ ಮೆಕ್ಕೆಜೋಳ ನೀರುಪಾಲಾಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ