ಭತ್ತದ ಬೇಸಾಯ ಉಳಿವಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು: ಬಿ.ಕೆ. ದೇವರಾವ್‌

KannadaprabhaNewsNetwork |  
Published : Aug 01, 2025, 12:30 AM IST
ಭತ್ತದ ತಳಿ ಸಂರಕ್ಷಕ ಬಿ.ಕೆ.ದೇವರಾವ್‌ ಹಾಗೂ ಪುತ್ರ ಬಿ.ಕೆ.ಪರಮೇಶ್ವರ ರಾವ್‌ ತಮ್ಮ ಅಪರೂಪದ ಭತ್ತದ ತಳಿಗಳ ಜೊತೆ | Kannada Prabha

ಸಾರಾಂಶ

ಮಂಗಳೂರು ಪ್ರೆಸ್‌ ಕ್ಲಬ್‌ ಪತ್ರಿಕಾ ಭವನದಲ್ಲಿ ಗುರುವಾರ ಏರ್ಪಡಿಸಿದ ಮಂಗಳೂರು ಪ್ರೆಸ್‌ಕ್ಲಬ್‌ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭತ್ತ ತಳಿ ಸಂರಕ್ಷಕ ಬಿ.ಕೆ. ದೇವರಾವ್‌ ಭತ್ತ ತಳಿ ಸಂರಕ್ಷಣೆ ಕುರಿತು ಅನೇಕ ಮಾಹಿತಿ ಹಂಚಿಕೊಂಡರು.

ಮಂಗಳೂರು ಪ್ರೆಸ್‌ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭತ್ತ ತಳಿ ಸಂರಕ್ಷಕಗೆ ಗೌರವ

ಕನ್ನಡಪ್ರಭ ವಾರ್ತೆ ಮಂಗಳೂರು

ಭತ್ತದ ಬೇಸಾಯ ಉಳಿವಿಗೆ ಸರ್ಕಾರ ಪ್ರೋತ್ಸಾಹ ನೀಡಬೇಕು. ಮಾತ್ರವಲ್ಲ ಭತ್ತದ ಬೇಸಾಯದ ಬಗ್ಗೆ ಸಮಾಜ ಕೈಜೋಡಿಸಿ, ಕನಿಷ್ಟ ಭತ್ತ ಬೆಳೆಯನ್ನು ಉಪ ಕಸುಬು ಆಗಿಯೂ ಬೆಳೆಸಿ ಉಳಿಸಬೇಕು ಎಂದು ಭತ್ತ ತಳಿ ಸಂರಕ್ಷಕ ಬಿ.ಕೆ. ದೇವರಾವ್‌ ಹೇಳಿದ್ದಾರೆ.

ಮಂಗಳೂರು ಪ್ರೆಸ್‌ ಕ್ಲಬ್‌ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಮಂಗಳೂರು ಪ್ರೆಸ್‌ಕ್ಲಬ್‌ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭತ್ತದಲ್ಲಿ ಹಳೆ ತಳಿಗಳಷ್ಟು ಪೌಷ್ಟಿಕಾಂಶದ ತಳಿಗಳು ಬೇರೆ ಇಲ್ಲ. ಅವುಗಳಲ್ಲಿ ರೋಗನಿರೋಧಕತೆ ಹೆಚ್ಚು ಇದೆ. ದೇಶದಲ್ಲಿ ಹಿಂದೆ 2 ಲಕ್ಷ ವಿವಿಧ ಭತ್ತದ ತಳಿಗಳಿದ್ದು, ಈಗ 25 ಸಾವಿರಕ್ಕೆ ಇಳಿಕೆಯಾಗಿದೆ. ವೈಜ್ಞಾನಿಕವಾಗಿ ಭತ್ತದ ತಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ ರೈತರು ಪ್ರತಿ ವರ್ಷ ಮೊಳಕೆ ಭರಿಸಿ ಬಿತ್ತನೆ ನಡೆಸಿ ಬೆಳೆ ತೆಗೆದರೆ ಮಾತ್ರ ಅಪರೂಪದ ತಳಿಗಳನ್ನು ಉಳಿಸಿಕೊಳ್ಳಲು ಸಾಧ್ಯವಿದೆ. ಇಲ್ಲದಿದ್ದರೆ ವೈವಿಧ್ಯಮಯ ಭತ್ತದ ತಳಿಗಳು ಪ್ರಪಂಚದಿಂದಲೇ ನಾಶವಾಗುವ ಭೀತಿ ಇದೆ. ಈ ನಿಟ್ಟಿನಲ್ಲಿ ಭತ್ತದ ತಳಿಗಳನ್ನು ಉಳಿಸಿ ಬೆಳೆಸುವ ಬಗ್ಗೆ ಸರ್ಕಾರದ ಪ್ರೋತ್ಸಾಹ ಅತ್ಯಗತ್ಯ ಎಂದರು.

ಪ್ರಸಕ್ತ ಭತ್ತದ ಗದ್ದೆಗಳು ಕಡಿಮೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಅವರು, ನಗರ ಪ್ರದೇಶಗಳು ಕಾಂಕ್ರಿಟ್‌ ಕಾಡುಗಳಾಗುತ್ತಿವೆ. ಕೇವಲ ಹಳ್ಳಿ ಪ್ರದೇಶಗಳಲ್ಲಿ ಮಾತ್ರ ಭತ್ತದ ಬೇಸಾಯ ಉಳಿದುಕೊಂಡಿದೆ. ಹಿಂದೆ ಭತ್ತವೇ ಆರ್ಥಿಕತೆ ಆಗಿತ್ತು. ಈಗ ಆರ್ಥಿಕ ಬೆಳೆಯಾಗಿ ಭತ್ತ ಇಲ್ಲ. ಭತ್ತದ ಬೇಸಾಯ ಪ್ರಕೃತಿಯನ್ನು ಹೊಂದಿಕೊಂಡು ಇದೆ. ಆರೋಗ್ಯವಂತ ಜೀವನಕ್ಕೆ ಭತ್ತದ ಬೇಸಾಯ ಪೂರಕ ಎಂದರು.

ಇಬ್ಬನಿ ಇಂಗಿಸುವ ಶಕ್ತಿ:

ಭತ್ತದ ಬೇಸಾಯ ಎಂದರೆ, ಬರೇ ಕೃಷಿ ಅಲ್ಲ, ಅದು ನೀರು ಇಂಗಿಸುವ ಶಕ್ತಿಯೂ ಹೌದು. ಇಬ್ಬನಿ ನೀರನ್ನು ಇಂಗಿಸುವುದು ಭತ್ತ ಕೃಷಿ ಮಾತ್ರ. ಶೋಲಾ ಕಾಡು ಹೊರತುಪಡಿಸಿದರೆ ನೀರು ಸದಾ ಹರಿಯುತ್ತಿರುವುದು ಭತ್ತದ ಗದ್ದೆಗಳು ಇರುವಲ್ಲಿ ಮಾತ್ರ. ಇದರಿಂದಾಗಿ ಅಂತರ್ಜಲವೂ ಹೇರಳವಾಗಿ ಇರುತ್ತದೆ. ಹಿಂದೆ ಎರಡು ತಿಂಗಳ ವರೆಗೆ ನಡೆಯುತ್ತಿದ್ದ ಭತ್ತದ ಕೃಷಿ, ಈಗ ಎಂಟು ದಿನಕ್ಕೆ ಇಳಿಕೆಯಾಗಿದೆ. 200 ಎಕರೆ ಗದ್ದೆಗಳು ಈಗ 10 ಎಕರೆಗೆ ಇಳಿದಿದೆ. ಇದನ್ನು ವಾಣಿಜ್ಯ ಬೆಳೆಗಳು ಆಕ್ರಮಿಸಿಕೊಂಡಿವೆ. ಹಾಗಾಗಿ ಭತ್ತದ ಬೇಸಾಯ ಕೈಬಿಡದೆ, ಉಪ ಬೆಳೆಯನ್ನಾಗಿಯೂ ಮುಂದುವರಿಸಲು ಮನಸ್ಸು ಮಾಡಬೇಕು ಎಂದರು.

ರೋಗನಿರೋಧಕ ತಳಿಗಳು:

ಭತ್ತದಲ್ಲಿ ಅನೇಕ ವಿಧಗಳಿದ್ದು, ಕ್ಯಾನ್ಸರ್‌ ನಿರೋಧಕ ತಳಿಗಳೂ ಇವೆ. ಅತಿಕ್ರಯ ಭತ್ತದ ತಳಿ ಕ್ಯಾನ್ಸರ್‌ನ್ನು ದೂರ ಮಾಡಬಲ್ಲದು. ಮುಂದಿನ ಜನಾಂಗಕ್ಕೆ ಔಷಧೀಯ ಗುಣದ, ವಿಷ ರಹಿತ ಭತ್ತದ ತಳಿಗಳನ್ನು ವರ್ಗಾಯಿಸಬೇಕಾಗಿದೆ. ಅದಕ್ಕಾಗಿ ಸರ್ಕಾರದ ಪ್ರೋತ್ಸಾಹ ಸಿಗದಿದ್ದರೂ ನಾನು ಭತ್ತದ ತಳಿಗಳನ್ನು ಬೇಸಾಯ ಮಾಡುವ ಮೂಲಕ ಉಳಿಸುವ ಕಾರ್ಯ ಮಾಡುತ್ತಿದ್ದೇನೆ. ನನಗೆ ಗೌರವ ನೀಡುವುದಕ್ಕಿಂತ ಭತ್ತವನ್ನು ಗೌರವಿಸಿ, ಇದು ಮುಂದಿನ ಜನಾಂಗದ ಉಳಿವಿಗೆ ಅತ್ಯವಶ್ಯಕ ಎಂದರು.

ಯೂರಿಯಾ ಆತಂಕ ಇಲ್ಲ:

ಭತ್ತದ ಬೇಸಾಯವನ್ನು ರಾಸಾಯನಿಕ ರಹಿತ ಮಾಡಬೇಕು. ಆಗ ಯೂರಿಯಾ ಮತ್ತಿತರ ರಾಸಾಯನಿಕ ಗೊಬ್ಬರಗಳ ಕೊರತೆಯ ಗೊಡವೆ ಇರುವುದಿಲ್ಲ. ರಾಸಾಯನಿಕ ಬಳಕೆ ಆರೋಗ್ಯಕ್ಕೆ ಅತೀವ ತೊಂದರೆ ತರುತ್ತದೆ. ಸೆಗಣಿ, ಹಟ್ಟಿ ಗೊಬ್ಬರವನ್ನು ಬಳಸಿ ಭತ್ತದ ಕೃಷಿಯನ್ನು ಸಾವಯವ ಮಾದರಿಯಲ್ಲಿ ಮಾಡಬೇಕು ಎಂದು ಅವರು ಹೇಳಿದರು.

ಬಳಿಕ ಸಂವಾದದಲ್ಲಿ ಮಾತನಾಡಿದ ದೇವರಾವ್‌ ಅವರ ಪುತ್ರ ಬಿ.ಕೆ.ಪರಮೇಶ್ವರ ರಾವ್‌, ಒಂದು ಎಕರೆ ಭತ್ತದ ಬೇಸಾಯ ಮಾಡಿದರೆ, ಅದನ್ನು ವೃದ್ಧಿಸಿಕೊಂಡು ಒಂದು ಕೋಟಿ ವರೆಗೂ ಭತ್ತದ ಫಸಲು ತೆಗೆಯಲು ಸಾಧ್ಯವಿದೆ. ಅಡಕೆಗೆ ಕಿಲೋಗೆ 500 ರು. ಧಾರಣೆ ಇದ್ದರೆ ಭತ್ತಕ್ಕೆ ಕೇಜಿಗೆ ಕೇವಲ 30 ರು. ದರ ಇದೆ. ಸಾವಯವ ಭತ್ತಕ್ಕೆ ಕಿಲೋಗೆ 90 ರು. ವರೆಗೆ ಇದೆ. ಇಂತಹ ಶ್ರೇಷ್ಟ ಆಹಾರ ಬೆಳೆಗೆ ಬೆಲೆಯಲ್ಲೂ ತಾರತಮ್ಯ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಸ್ವಸ್ತಿಕ್‌ ನ್ಯಾಷನಲ್‌ ಬಿಸಿನೆಸ್ ಸ್ಕೂಲ್‌ ಚೇರ್‌ಮೆನ್‌ ಡಾ.ರಾಘವೇಂದ್ರ ಹೊಳ್ಳ ಕಾರ್ಯಕ್ರಮ ಉದ್ಘಾಟಿಸಿ, ಕೃತಕಬುದ್ಧಿ ಮತ್ತೆಯ ಯುಗದಲ್ಲಿ ಮಾಧ್ಯಮಗಳು ಅದಕ್ಕೆ ಹೆಚ್ಚಿನ ಒತ್ತು ನೀಡದೆ ನಮ್ಮತನವನ್ನು ಬೆಳೆಸಿಕೊಳ್ಳಬೇಕು. ಅಪರೂಪದ ಭತ್ತದ ತಳಿಗಳನ್ನು ಸಂಗ್ರಹಿಸಿ ಪೋಷಿಸುವ ಇಂತಹ ವ್ಯಕ್ತಿಗಳಿಗೆ ಸಮಾಜ ಬೆಂಬಲ ನೀಡಬೇಕು. ಕೃಷಿ ಶಿಕ್ಷಣದ ಕಡೆಗೂ ಶಿಕ್ಷಣ ಸಂಸ್ಥೆಗಳು ಒತ್ತು ನೀಡಬೇಕು ಎಂದರು.

ಈ ಸಂದರ್ಭ ಬಿ.ಕೆ.ದೇವರಾವ್‌ ಅವರಿಗೆ ಮಂಗಳೂರು ಪ್ರೆಸ್‌ಕ್ಲಬ್‌ ಗೌರವ ಅತಿಥಿ ಸನ್ಮಾನ ನೆರವೇರಿಸಲಾಯಿತು.

ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್‌ ಇಂದಾಜೆ ಇದ್ದರು.

ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ ವಂದಿಸಿದರು. ವಿಜಯ ಕೋಟ್ಯಾನ್‌ ಪಡು ಕಾರ್ಯಕ್ರಮ ಸಂಯೋಜಿಸಿದರು. ಪ್ರೆಸ್‌ಕ್ಲಬ್‌ನಲ್ಲಿ ಬಿ.ಕೆ.ದೇವರಾವ್‌ ಸಂರಕ್ಷಿಸಿದ ಭತ್ತದ ತಳಿಗಳ ಪ್ರದರ್ಶನ ಏರ್ಪಟ್ಟಿತು.

ಭತ್ತ ಬೆಳೆಸಿ, ತಳಿ ಉಳಿಸಿ

ಭತ್ತದ ತಳಿ ಸಂರಕ್ಷಕ ಬಿ.ಕೆ. ದೇವರಾವ್‌ ಅವರ ಬಳಿ 200ರಷ್ಟು ವಿಧದ ಭತ್ತದ ತಳಿಗಳು ಇವೆ. ಕೇವಲ ಭತ್ತದ ಬೇಸಾಯ ಮಾತ್ರವಲ್ಲ ಮಾವು. ಹಲಸು ಕೂಡ ಬೆಳೆಯುತ್ತಾರೆ.

ಎಲ್ಲ ವಿಧದ ಭತ್ತಗಳನ್ನೂ ಪ್ರತಿ ವರ್ಷ ಬೆಳೆಸಿ ತಳಿಯನ್ನು ಉ‍‍ಳಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಗದ್ದೆಯಲ್ಲಿ ಕನಿಷ್ಠ 75 ವಿಧಧ ಭತ್ತ ಬೆಳೆಯುತ್ತಾರೆ. ಅಕ್ಟೋಬರ್‌ ವೇಳೆಗೆ ವೈವಿಧ್ಯಮಯ ಭತ್ತದ ತಳಿಗಳನ್ನು ವೀಕ್ಷಿಸಲು ಸಾಧ್ಯವಿದೆ. ಆಸಕ್ತರಿಗೆ ಒಂದು ಮುಷ್ಠಿಯಷ್ಟು ಭತ್ತದ ಬೀಜಗಳನ್ನು ಕೊಡುತ್ತಾರೆ. ಬಳಿಕ ಅದರ ಫಸಲು ತೆಗೆದು ವೃದ್ಧಿಸಿಕೊಳ್ಳಬೇಕು. ಕಾಡು ಪ್ರಾಣಿಗಳಿಗೆ ಬೇಕಾದ ಆಹಾರ ಕಾಡಲ್ಲೇ ಬೆಳೆಸಿ

ಕೃಷಿಗೆ ಕಾಡುಪ್ರಾಣಿಗಳ ಕಾಟ ವಿಪರೀತವಾಗುತ್ತಿದೆ. ಇದನ್ನು ತಡೆಗಟ್ಟಲು ಕಾಡುಪ್ರಾಣಿಗಳಿಗೆ ಬೇಕಾದ ಆಹಾರಗಳನ್ನು ಕಾಡುಗಳಲ್ಲೇ ಬೆಳೆಸಲು ಅರಣ್ಯ ಇಲಾಖೆ ಮುಂದಾಗಬೇಕು ಎನ್ನುತ್ತಾರೆ ಬಿ.ಕೆ.ಪರಮೇಶ್ವರ್‌.

ನಮ್ಮ ಕೃಷಿ ಭೂಮಿಯಲ್ಲಿ 50 ವಿಧದ ಹಲಸು, 80 ವಿಧದ ಮಾವು, ದೀವಿ ಹಲಸು, ಪೇರಳೆ, ಲಿಂಬೆ, ಔಷಧ ಗಿಡಗಳು, ತರಹೇವಾರಿ ತರಕಾರಿಗಳು ಇವೆ. ಮಂಗ, ಕಾಡಾನೆಗಳ ಕಾಟವೂ ಇದೆ. ಇದರಿಂದಾಗಿ ಕೃಷಿಕರಿಗೆ ಸರಿಯಾಗಿ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಕಾಡುಗಳಲ್ಲಿ ನಿರ್ದಿಷ್ಟ ಜಾಗವನ್ನು ನಿಗದಿಪಡಿಸಿ ಅಲ್ಲಿ ಒಂದೆರಡು ವರ್ಷಗಳ ಕಾಲ ಹಣ್ಣು ಹಂಪಲು ಬೆಳೆಸಿ ಬಳಿಕ ಪ್ರಾಣಿಗಳ ಆಹಾರಕ್ಕಾಗಿ ಬಿಟ್ಟು ಬರಬೇಕು. ಇದರಿಂದ ಪ್ರಾಣಿ-ಮಾನವ ನಡುವಿನ ಸಂಘರ್ಷ ತಪ್ಪಿಸಬಹುದು ಎಂದು ಬಿ.ಕೆ.ಪರಮೇಶ್ವರ್ ಸಲಹೆ ನೀಡಿದರು. ನಮಗೆ ಹೊಟ್ಟೆ ತುಂಬಿಸಲು ಭತ್ತದ ಕೃಷಿ ಬೇಕು. ರೋಗ ರಹಿತ ಜೀವನಕ್ಕೆ ಭತ್ತದ ಕೃಷಿ ಅತ್ಯವಶ್ಯಕ. ಈ ಇಳಿವಯಸ್ಸಿನಲ್ಲೂ ಆರೋಗ್ಯವಂತನಾಗಿದ್ದು, ಕರ್ತವ್ಯ ನಿಷ್ಠೆಯಿಂದ ಭತ್ತದ ಕೃಷಿ ನಡೆಸುತ್ತಿದ್ದೇನೆ.

-ಬಿ.ಕೆ.ದೇವರಾವ್‌, ಭತ್ತದ ತಳಿ ಸಂರಕ್ಷಕ, ಬೆಳ್ತಂಗಡಿ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ