ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಆಂಜನೇಯ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ ಬಿಎಸ್‌ಪಿ ಪಕ್ಷದ ಜನ ಕಲ್ಯಾಣ ಸಮಾವೇಶದಲ್ಲಿ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರವು ಖಾಸಗಿ ವಲಯದಲ್ಲೂ ಮೀಸಲಾತಿಯನ್ನು ನೀಡಬೇಕು ಎಂದು ಆಗ್ರಹಿಸಿದರು. ಕರ್ನಾಟಕ ರಾಜ್ಯದಲ್ಲಿ ಅಹಿಂದ ವರ್ಗದ ಮುಖ್ಯಮಂತ್ರಿಗಳು ಇದ್ದಾರೆ, ಅದೇ ರೀತಿ ದಲಿತ ವರ್ಗದ ಗೃಹ ಮಂತ್ರಿ ಇದ್ದಾರೆ, ಎಐಸಿಸಿ ಅಧ್ಯಕ್ಷರು ಸಹ ದಲಿತ ವರ್ಗದ ವ್ಯಕ್ತಿ ಹಾಗಿದ್ದರೂ ಸಹ ಸಾಮಾಜಿಕ ಜಾಲತಾಣದಲ್ಲಿ ಅಂಬೇಡ್ಕರ್‌ಗೆ ಅಪಮಾನ ವ್ಯಕ್ತಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಂತಹ ಅಂಬೇಡ್ಕರ್ ವಿರೋಧಿ ಸರ್ಕಾರವನ್ನು ಕಿತ್ತೊಗೆಯುವ ಕೆಲಸವನ್ನು ಮಾಡಬೇಕು. ಬಾಬಾ ಸಾಹೇಬರ ಹೆಸರಿಗೆ ಕಳಂಕ ತರುವಂತೆ ಸಾಮಾಜಿಕ ಅಂತರ್ಜಾಲದಲ್ಲಿ ನಕಲಿ ಅಕೌಂಟ್ ಸೃಷ್ಟಿಸಿಕೊಂಡು ಅಂಬೇಡ್ಕರ್ ಅವರಿಗೆ ಅವಮಾನ ಆಗುವ ರೀತಿ ಸಂದೇಶಗಳನ್ನು ರವಾನೆ ಮಾಡುತ್ತಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿ ಮಾಡಬೇಕು ಎಂದು ಒತ್ತಾಯಿಸಿದರು.ಉತ್ತರಪ್ರದೇಶದಲ್ಲಿ ಬಿಎಸ್ಪಿ ಪಕ್ಷ ಸಂಘಟನೆಯ ಹಿನ್ನೆಲೆಯಲ್ಲಿ ಪ್ರತಿಬೂತ್‌ನ ಮತದಾರರಿಂದ ಒಂದು ಲಕ್ಷ ರು. ಸಂಗ್ರಹ ಮಾಡಲಾಗಿದೆ. ಇದೇ ಪ್ರಯತ್ನ ರಾಜ್ಯದಲ್ಲೂ ಆಗುತ್ತಿದೆ. ಬಿ ಎಸ್ ಪಿ ವಿರೋಧಿಗಳ ಅಪಪ್ರಚಾರಕ್ಕೆ ಕಿವಿಗೊಡದೆ ಬಿಎಸ್ಪಿ ಪಕ್ಷದ ಸಂಘಟನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.ಬಿಎಸ್‌ಪಿ ರಾಜ್ಯ ಸಂಚಾಲಕ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ನಾಯಕರಾದ ಗಂಗಾಧರ್ ಬಹುಜನ್ ಮಾತನಾಡಿ ರಾಷ್ಟ್ರೀಯ ಪಕ್ಷವಾದ ಬಿಎಸ್‌ಪಿ ಭವಿಷ್ಯದಲ್ಲಿ ದೇಶದಲ್ಲಿ ಅಧಿಕಾರಕ್ಕೆ ಬಂದೇ ಬರುತ್ತದೆ. ಬಹುಜನರ ಆಶಯವನ್ನು ಈಡೇರಿಸುವ ದೃಷ್ಟಿಯಿಂದ ೧೯೮೪ರಲ್ಲಿ ಕಾನ್ಶಿರಾಂ ಬಿಎಸ್‌ಪಿಯನ್ನು ಆರಂಭಿಸಿದರು. ಬಹುಸಂಖ್ಯಾತರಾಗಿರುವ ನಾವುಗಳು ಬಿಎಸ್‌ಪಿಗೆ ಮತ ಹಾಕಿದಾಗ ಮಾತ್ರ ಮುಖ್ಯಮಂತ್ರಿ ಮಾಡುವುದು ಸುಲಭವಾಗುತ್ತದೆ ಎಂದು ಹೇಳಿದರು.ಪಟ್ಟಣದಾದ್ಯಂತ ಬಿಎಸ್‌ಪಿ ಸಮಾವೇಶದ ಅಂಗವಾಗಿ ಬಂಟಿಂಗ್ ಅಳವಡಿಸಲು ಪುರಸಭೆಯಿಂದ ಅನುಮತಿ ಪಡೆದಿದ್ದರೂ ಬಿಎಸ್‌ಪಿ ಪಕ್ಷದ ಬಂಟಿಂಗ್ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಲಾಗಿದೆ. ಮನುವಾದಿ ರಾಜಕೀಯ ಪಕ್ಷಗಳ ಏಜೆಂಟ್‌ಗಳ ರೀತಿ ನಡೆದುಕೊಳ್ಳುವ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ. ಸಂವಿಧಾನಬದ್ಧವಾಗಿ ಹಾಗೂ ಕಾನೂನುಬದ್ಧವಾಗಿ ಅಧಿಕಾರಿಗಳು ನಡೆದುಕೊಳ್ಳಬೇಕು. ಯಾವುದೇ ರಾಜಕೀಯ ನಾಯಕರ ಕೈ ಗೊಂಬೆಯಾಗಿ ಕಾರ್ಯನಿರ್ವಹಿಸಬಾರದು ಇದೇ ನಡವಳಿಕೆ ಮುಂದುವರಿದರೆ ಮುಂದೊಂದು ದಿನ ಕಾನೂನು ಮೂಲಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ಸಂದರ್ಭದಲ್ಲಿ ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷರಾದ ಕೃಷ್ಣಮೂರ್ತಿ ಎಂ ಮಂಡ್ಯ, ಸಂಚಾಲಕರು ಹಾಗೂ ಹಾಸನ ವಲಯ ಉಸ್ತುವಾರಿಗಳಾದ ಗಂಗಾಧರ್ ಬಹುಜನ್, ರಾಜ್ಯ ಉಪಾಧ್ಯಕ್ಷರಾದ ಜಾಕೀರ್ ಹುಸೇನ್, ರಾಜ್ಯ ಸಂಯೋಜಕರಾದ ಕೆ ಟಿ ರಾಧಾಕೃಷ್ಣ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕಾಂತಪ್ಪ, ರಾಜ್ಯ ಕಾರ್ಯದರ್ಶಿಗಳಾದ ಅತ್ನಿ ಹರೀಶ್, ಸುಧಾ, ಗೋಪಾಲ್, ಜಿಲ್ಲಾಧ್ಯಕ್ಷರಾದ ಲಕ್ಷ್ಮಣ ಕೀರ್ತಿ, ಜಿಲ್ಲಾ ಉಸ್ತುವಾರಿಗಳಾದ ಮಲ್ಲಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸಿಜಿ ಸೋಮಶೇಖರ್, ಕಚೇರಿ ಕಾರ್ಯದರ್ಶಿ ಕಿರಣ್, ತಾಲೂಕು ಅಧ್ಯಕ್ಷರಾದ ರಾಜು ಕುಂದೂರು, ತಾಲೂಕು ಉಸ್ತುವಾರಿಗಳಾದ ಸಿದ್ದಲಿಂಗಯ್ಯ ಬಹುಜನ್, ಪ್ರಧಾನ ಕಾರ್ಯದರ್ಶಿ ಬಸವರಾಜ್, ಹೊಳೆನರಸೀಪುರ ತಾಲೂಕು ಅಧ್ಯಕ್ಷರಾದ ತಾರೇಶ್, ಸೇರಿದಂತೆ ಇತರರು ಹಾಜರಿದ್ದರು.