- ಬೆಳ್ಳೂರಿನಲ್ಲಿ ಜನ ಜಾಗೃತಿ ಯಾತ್ರೆ ಸ್ವಾಗತ ಕಾರ್ಯಕ್ರಮ। ರೈತರ ಸಂಕಷ್ಟಗಳ ಬಗ್ಗೆ ವೀಡಿಯೋ ಪ್ರದರ್ಶನ
ಮಲೆನಾಡ ರೈತರಿಗೆ ಸಂಕಷ್ಟಗಳು ಎದುರಾಗಿರುವ ಈ ಸಂದರ್ಭದಲ್ಲಿ ಮಲೆನಾಡಿನ ಎಲ್ಲಾ ನಾಗರಿಕರು ರೈತರಿಗೆ ಸಹಕಾರ ನೀಡಬೇಕು ಎಂದು ತಾಲೂಕು ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಎಂ.ಎನ್.ನಾಗೇಶ್ ಮನವಿ ಮಾಡಿದರು.
ಶನಿವಾರ ಸೀತೂರು ಗ್ರಾಪಂ ವ್ಯಾಪ್ತಿಯ ಬೆಳ್ಳೂರು ಗ್ರಾಮಕ್ಕೆ ಆಗಮಿಸಿದ ಜನ ಜಾಗೃತಿ ಯಾತ್ರೆಯನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನವರಿ 14 ರಂದು ಶೃಂಗೇರಿ ಶಾರದಾ ಪೀಠದ ಶ್ರೀಗಳು ಜನ ಜಾಗೃತಿ ಯಾತ್ರೆಗೆ ಚಾಲನೆ ನೀಡಿದ್ದರು. ಜನವರಿ 15 ರಂದು ಶೃಂಗೇರಿಯಿಂದ ಪ್ರಾರಂಭವಾಗಿ ಶೃಂಗೇರಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿ ಗಳಿಗೂ ಯಾತ್ರೆ ತೆರಳಿ ಜನರಲ್ಲಿ ರೈತರ ಕಷ್ಟಗಳ ಬಗ್ಗೆ ಅರಿವು ಮೂಡಿಸುತ್ತಿದೆ.ಪ್ರತಿ ಗ್ರಾಮ ಪಂಚಾಯಿತಿ ಗಳಲ್ಲೂ ರೈತರ ಕಷ್ಟಗಳ ಬಗ್ಗೆ ವೀಡಿಯೋ ಪ್ರದರ್ಶನ ಮಾಡುತ್ತಿದ್ದೇವೆ. ಜನವರಿ 15 ರಿಂದ ಜನವರಿ 25 ರ ವರೆಗೆ ಜನ ಜಾಗೃತಿ ಯಾತ್ರೆ ನಡೆಯಲಿದೆ. ಜನವರಿ 26 ರಂದು ಹರಿಹರಪುರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು ಎಲ್ಲಾ ರೈತರು ಭಾಗವಹಿಸಬೇಕು ಎಂದು ಮನವಿ ಮಾಡಿದರು.ತಾಲೂಕು ರೈತ ಹಿತ ರಕ್ಷಣಾ ಸಮಿತಿ ಉಪಾಧ್ಯಕ್ಷ ದೇವಂತ್ ಗೌಡ ಮಾತನಾಡಿ, ರೈತರಿಗೆ ಸಮಸ್ಯೆ ಉಂಟಾದಾಗ ಎಲ್ಲಾ ರೈತರು ಸ್ಪಂದಿಸಿ ಸಹಾಯಕ್ಕೆ ಬರಬೇಕು. ಅರಣ್ಯ ಇಲಾಖೆ ಕಾನೂನುಗಳು ರೈತರಿಗೆ ಮಾರಕವಾಗಿದೆ. ಇನ್ನಷ್ಟು ಕಾನೂನುಗಳು ಸಹ ಬರಬಹುದು ಎಂಬ ಭೀತಿ ಎದುರಾಗಿದೆ. ರೈತರು ಒಗ್ಗಟ್ಟು ಪ್ರದರ್ಶನ ಮಾಡಬೇಕು. ಈಗಾಗಲೇ ಕಾಡಾನೆ ದಾಳಿಯಿಂದ ಶೃಂಗೇರಿ ಕ್ಷೇತ್ರದಲ್ಲಿ 8 ರೈತರು ಮೃತಪಟ್ಟಿದ್ದಾರೆ. ಮಲೆನಾಡು ನಾಗರಿಕ ರೈತ ಹಿತ ರಕ್ಷಣಾ ಸಮಿತಿ ಪ್ರಾರಂಭವಾಗಿ 5 ವರ್ಷ ಮುಗಿದಿದ್ದು ರೈತರ ಸಂಕಷ್ಟಗಳಿಗೆ ಸಮಿತಿ ಸಹಾಯ ಮಾಡುತ್ತಿದೆ ಎಂದರು.
ಬೆಳ್ಳೂರಿನ ಪ್ರಗತಿಪರ ಕೃಷಿಕ ಆರ್. ವೆಂಕಟರಮಣಯ್ಯ ನೇಗಿಲಿಗೆ ಪುಷ್ಚಾರ್ಚನೆ ಮಾಡುವ ಮೂಲಕ ಜನ ಜಾಗೃತಿ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ಮಲೆನಾಡು ರೈತ ಹಿತ ರಕ್ಷಣಾ ಸಮಿತಿಯ ಸದಸ್ಯ ಕಟ್ಟಿನಮನೆ ನವೀನ್, ತಾಲೂಕು ಸಮಿತಿ ಸದಸ್ಯ ಪುರುಶೋತ್ತಮ್, ಹಾತೂರು ಪ್ರಸನ್ನ, ಹಾತೂರು ರಾಮಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಎನ್.ಪಿ.ರಮೇಶ್, ಎಚ್.ಇ.ದಿವಾಕರ, ಎಸ್ ಉಪೇಂದ್ರ, ಸೀತೂರು ಹರಿದ್ವರ್ಣ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಎನ್.ಪಿ.ರವಿ ಮತ್ತಿತರರು ಇದ್ದರು.ನಂತರ ಜನಜಾಗೃತಿ ಯಾತ್ರೆಯು ಮುತ್ತಿನಕೊಪ್ಪ,ಶೆಟ್ಟಿಕೊಪ್ಪ, ನರಸಿಂಹರಾಜಪುರ ಪಟ್ಟಣ, ಬಿ.ಎಚ್.ಕೈಮರ, ಹೊನ್ನೇಕೊಡಿಗೆ ತಲುಪಿತು. ಭಾನುವಾರ ಬೆಳಿಗ್ಗೆ 9 ಗಂಟೆಗೆ ಮೂಡಬಾಗಿಲು ಸರ್ಕಲ್, 10.30ಕ್ಕೆ ಕುದುರೆಗುಂಡಿ, 12.30 ಕ್ಕೆ ಕಾನೂರು, ಮದ್ಯಾಹ್ನ 3ಕ್ಕೆ ಗಡಿಗೇಶ್ವರ, 4.30ಕ್ಕೆ ಬಾಳೆಹೊನ್ನೂರು, ಸಂಜೆ 6ಕ್ಕೆ ಹಿರೇಗದ್ದೆ ಗ್ರಾಮಕ್ಕೆ ತಲುಪಲಿದೆ.