ಅರಹತೊಳಲು ಕೆ.ರಂಗನಾಥ
ಶಾಲೆ ಒಂದು ದೇವಾಲಯ. ಇಂತಹ ಶಾಲೆಗಳ ಅಭಿವೃದ್ದಿಗಾಗಿ ಸರ್ಕಾರ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರನ್ನು ಸೇರಿಸಿ ಶಾಲಾಭಿವೃದ್ದಿ ಸಮಿತಿಯನ್ನು (ಎಸ್‌ಡಿಎಂಸಿ) ರಚಿಸಲು ಪ್ರತಿ ಸರ್ಕಾರಿ ಶಾಲೆಗೆ ಅವಕಾಶ ಕಲ್ಪಿಸಿದೆ. ಹೀಗೆ ರಚನೆಯಾದ ಸಮಿತಿಯು ಒಬ್ಬ ಯೋಗ್ಯ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡುತ್ತದೆ. ಈ ರೀತಿ ಆಯ್ಕೆಯಾದ ಅಧ್ಯಕ್ಷರೊಬ್ಬರು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.
ಶಿಕ್ಷಣ ಸಚಿವರ ತವರು ಜಿಲ್ಲೆಯ ಭದ್ರಾವತಿ ತಾಲೂಕಿನ ತಟ್ಟೆಹಳ್ಳಿ ಕ್ಯಾಂಪ್ ಸರ್ಕಾರಿ ಪ್ರಾಥಾಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ್ ತನ್ನ ಮಕ್ಕಳು ಓದುತ್ತಿರುವ ಶಾಲೆಗೆ ಏನಾದರೂ ಸೇವೆ ಸಲ್ಲಿಸಬೇಕು ಎಂದು ಪಣತೊಟ್ಟು ಅವಿರತ ಶ್ರಮಿಸುತ್ತಿದ್ದಾರೆ.ಕಳೆದ ವರ್ಷ ಜೂನ್ ತಿಂಗಳಲ್ಲಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡು ಇಲ್ಲಿಯವೆಗೂ ಶಾಲೆಯೇ ನನ್ನ ದೇವಾಲಯ ಎಂದು ತಿಳಿದು ವಿವಿಧ ಕೆಲಸ ಕಾರ್ಯಗಳನ್ನು ಕೈಗೊಂಡು ಯಶಸ್ವಿಯೂ ಆಗಿದ್ದಾರೆ. ತಾನು ಕೂಲಿ ಮಾಡಿ ಜೀವನ ನಡೆಸುತ್ತಿದ್ದರೂ ಬಿಡುವಿನ ಸಮಯದಲ್ಲಿ ಶಾಲೆಯ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ.
ಶಾಲೆಯ ಕೈತೋಟ ನಿರ್ಮಾಣ:ಶಾಲೆಯ ಸುತ್ತಮುತ್ತಲಿನ ಸೌಂದರ್ಯವನ್ನು ಹೆಚ್ಚಿಸಲು ಕಾಂಪೌಂಡ್ ಪಕ್ಕದಲ್ಲಿ ಅಡಕೆ ಸಸಿಗಳನ್ನು ನೆಟ್ಟು ಅವುಗಳ ರಕ್ಷಣೆಗಾಗಿ ಸುತ್ತ ಸಿಮೆಂಟ್ ಇಟ್ಟಿಗೆಯಿಂದ ಪಾತಿ ನಿರ್ಮಾಣ ಮಾಡಿದ್ದಾರೆ. ಅಡಿಕೆ ಸಸಿಗಳಿಗೆ ನೀರುಣಿಸಲು ಡ್ರಿಪ್ ವ್ಯವಸ್ಥೆಯನ್ನು ಮಾಡಿದ್ದಾರೆ. ಪಾಚಿ ಕಟ್ಟಿರುವ ಇಟ್ಟಿಗೆಗಳಿಗೆ ಬಣ್ಣವನ್ನು ಬಳಿಯಲಾಗಿದೆ.
ಬೋಜನಾಲಯ ನಿರ್ಮಾಣ:ಶಾಲೆಯಲ್ಲಿ 52 ಮಕ್ಕಳು ಓದುತ್ತಿದ್ದು ಮದ್ಯಾಹ್ನನ ಬಿಸಿಯೂಟ ಮಾಡಲು ಶಾಲೆಯ ಕಟ್ಟೆಯ ಮೇಲೆ ಕೂತು ಊಟ ಮಾಡುತ್ತಿದ್ದರು. ಇದನ್ನು ತಪ್ಪಿಸಲು ಶಾಲೆಯ ಹಳೆಯ ವಿದ್ಯಾರ್ಥಿಗಳನ್ನು, ಊರಿನ ದಾನಿಗಳನ್ನು ಮತ್ತು ಸ್ಥಳೀಯ ಸಂಘ ಸಂಸ್ಥೆಗಳನ್ನು ಭೇಟಿ ಮಾಡಿ ಅವರೆಲ್ಲರ ಸಹಾಯ ಪಡೆದುಕೊಂಡು ಶಾಲೆಗೆ ನೂತನ ಬೋಜನಾಲಯ ನಿರ್ಮಾಣ ಮಾಡಿದ್ದಾರೆ.
ಸ್ವತಃ ಕಟ್ಟಡ ಕೆಲಸ:ಎಸ್‌ಡಿಎಂಸಿ ಅಧ್ಯಕ್ಷ ಪರಮೇಶ್ವರ ವೃತ್ತಿಯಲ್ಲಿ ಗಾರೆ ಕೆಲಸ ಮಾಡುತ್ತಾರೆ. ಪ್ರತೀ ದಿನ ಮಧ್ಯಾಹ್ನದವರೆಗೆ ಕೂಲಿ ಕೆಲಸ ಮಾಡಿಕೊಂಡು ಬಂದು ಮಧ್ಯಾಹ್ನದ ನಂತರ ಸ್ವತಃ ತಾವೇ ಸಿಮೆಂಟ್, ಮರಳನ್ನು ಮಿಶ್ರಣ ಮಾಡಿಕೊಂಡು ಕೆಲಸ ಮಾಡಿದ್ದಾರೆ.
ಉತ್ತಮ ಶಾಲಾಭಿವೃದ್ದಿ ಸಮಿತಿ ಇದೆ. ಶಿಕ್ಷಕರ ಯೋಜನೆಗಳಿಗೆ ಸಕಾರಾತ್ಮಕವಾಗಿ ಸ್ಪಂದನೆ ಇದೆ. ಸರ್ಕಾರದ ಯೋಜನೆಗಳು ಮತ್ತು ಸ್ಥಳೀಯ ಸಂಪನ್ಮೂಲಗಳ ಸರಿಯಾದ ಬಳಕೆ ಮಾಡಿಕೊಂಡು ಶಾಲೆಯ ಅಭಿವೃದ್ದಿಗೆ ಸಹಕಾರಿಯಾಗಿ ನಿಂತಿದೆ.ಎಸ್.ರಾಜಶೇಖರ್ ಮುಖ್ಯ ಶಿಕ್ಷಕ.
ನಮ್ಮ ಗ್ರಾಮದಲ್ಲಿ ಸರ್ಕಾರಿ ಶಾಲೆ ಉಳಿಯಬೇಕು. ನಮ್ಮ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಒಳ್ಳೆಯ ಶಿಕ್ಷಣ ದೊರೆಯಬೇಕು. ಗ್ರಾಮದ ಪ್ರತಿಯೊಬ್ಬರೂ ಶಾಲೆಯ ಉಳಿವಿಗೆ ಪ್ರಯತ್ನಿಸಬೇಕು.ಪರಮೇಶ್ವರ ಎಸ್‌ಡಿಎಂಸಿ ಅಧ್ಯಕ್ಷ.
ತಟ್ಟೆಹಳ್ಳಿ ಕ್ಯಾಂಪ್ ನ ಸರ್ಕಾರಿ ಶಾಲೆಯ ಶಾಲಾಭಿವೃದ್ದಿ ಸಮಿತಿ ಯಾವಾಗಲೂ ತುಂಬಾ ಉತ್ಸಾಹಭರಿತವಾಗಿರುತ್ತದೆ. ಇಲ್ಲಿ ಯಾರೇ ಅಧ್ಯಕ್ಷರಾದರೂ ತಮ್ಮ ಅವಧಿಯನ್ನು ಅರ್ಥಪೂರಣವಾಗಿ ಮುಸಿದ್ದಾರೆ. ಆದ್ದರಿಂದಲೇ ಕಿರಿಯ ಪ್ರಾಥಾಮಿಕ ಶಾಲೆಯಾದರೂ ಉತ್ತಮ ದಾಖಲಾತಿಯನ್ನು ಹೊಂದಿದೆ.ಎ.ಕೆ.ನಾಗೇಂದ್ರಪ್ಪ ಭದ್ರಾವತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ.