ಸಹಕಾರ ತತ್ವದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ ಎಂದು ಕುಂದಗೋಳದ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಸಿ. ಶ್ಯಾನವಾಡ ಹೇಳಿದರು.
ಧಾರವಾಡ: ಸಹಕಾರದ ಮೂಲ ತತ್ವವೇ ಎಲ್ಲರಿಗಾಗಿ, ಎಲ್ಲರೂ ತನಗಾಗಿ. ‘ವ್ಯಕ್ತಿಗಾಗಿ ಸಮಾಜ- ಸಮಾಜಕ್ಕಾಗಿ ವ್ಯಕ್ತಿ’ ಎಂಬ ಉದ್ದೇಶ ಹೊಂದಿದೆ. ಸಹಕಾರ ತತ್ವದಲ್ಲಿ ಲಾಭಕ್ಕಿಂತ ಸೇವೆ ಮುಖ್ಯ ಎಂದು ಕುಂದಗೋಳದ ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಸಿ. ಶ್ಯಾನವಾಡ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘ ದಿ. ಮರಿಗೌಡ ಫಕ್ಕೀರಗೌಡ ಪಾಟೀಲ ದತ್ತಿ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಮತ್ತು ‘ಸಹಕಾರ ರತ್ನ’ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.ಆಗಿನ ಮುಂಬೈ ಸರ್ಕಾರದಲ್ಲಿ 1904ರಲ್ಲಿ ಜಾರಿಗೆ ತರಲಾದ ಸಹಕಾರಿ ಸಂಘಗಳ ಕಾನೂನು ಪ್ರೇರಣೆಯಿಂದ ಇಡೀ ಏಷ್ಯಾ ಖಂಡದಲ್ಲಿ ಮೊಟ್ಟ ಮೊದಲ ಬಾರಿಗೆ ಸಹಕಾರಿ ಸಂಘ ಒಂದು ಅವಿಭಜಿತ ಧಾರವಾಡ ಜಿಲ್ಲೆಯ ಗದಗ ತಾಲೂಕಿನ ಕಣಗಿನಹಾಳ ಗ್ರಾಮದಲ್ಲಿ 1905 ರಲ್ಲಿ ಪ್ರಾರಂಭವಾಯಿತು. ಹೀಗಾಗಿ, ಅವಿಭಜಿತ ಧಾರವಾಡ ಜಿಲ್ಲೆಯನ್ನು “ಭಾರತದ ಸಹಕಾರಿ ಸಂಘಗಳ ತೊಟ್ಟಿಲು” ಎಂದು ಕರೆಯಲಾಗಿದೆ ಎಂದರು. ಸಹಕಾರಿ ಪದ್ಧತಿ ನಾಗರೀಕತೆಯ ಪ್ರಾರಂಭದಲ್ಲಿ ವಸ್ತು ವಿನಿಮಯದ ಮೂಲಕ ಜರುಗುತ್ತಿತ್ತು. ವಸ್ತು ವಿನಿಮಯ ಪದ್ಧತಿಯೇ ಸಹಕಾರದ ಮೂಲ ಬುನಾದಿ. ಈ ತತ್ವ ಎಲ್ಲ ಜನರು ಸುಖಜೀವನ ಸಾಗಿಸಲಿ ಎಂಬ ಮೂಲ ಉದ್ದೇಶ ಹೊಂದಲಾಗಿದೆ. ಸಹಕಾರಿ ಸಂಘಗಳಲ್ಲಿ ವಿವಿಧ ಪ್ರಕಾರಗಳಿದ್ದು, ಕೆಲವೆಡೆ ದೋಷಗಳೂ ಇವೆ. ಹೀಗಾಗಿ ಸಹಕಾರ ಬೆಳವಣಿಗೆಯಾಗಬೇಕಾದರೆ ನೈತಿಕತೆ, ಪ್ರಾಮಾಣಿಕತೆ, ಭ್ರಷ್ಟಾಚಾರ ರಹಿತವಾಗಿರಬೇಕು. ಇಂದು ಭಾರತದಲ್ಲಿ ಸುಮಾರು 50 ಲಕ್ಷ ಸಹಕಾರಿ ಸಂಘಗಳಿವೆ ಎಂದರು.
ಕುಂದಗೋಳ ಹರಭಟ್ಟ ಶಿಕ್ಷಣ ಸಂಸ್ಥೆ ಅಧ್ಯಕ್ಷ ಅರವಿಂದ ಕಟಗಿ ಮಾತನಾಡಿ, ದಿ.ಎಂ.ಎಫ್. ಪಾಟೀಲರು ಸಹಕಾರಿ ಕ್ಷೇತ್ರದ ಮಹಾನ್ ಸಾಧಕರು. ಹೀಗಾಗಿ ಕುಂದಗೋಳದ ಟಿ.ಎ.ಪಿ.ಸಿ. ಎಂ.ಎಸ್. ಅಧ್ಯಕ್ಷರಾಗಿ, ಕೆ.ಸಿ.ಸಿ. ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಕಾರಣವಾಯಿತೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಗ್ರಾಹಕರ ಸಹಕಾರ ಮಹಾಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ ಮಾತನಾಡಿ, ಸಹಕಾರಿ ಸಂಘದಲ್ಲಿ ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ಬಹಳ ಮುಖ್ಯ ಎಂದರು.
ಸಹಕಾರ ರತ್ನ ಪುರಸ್ಕೃತರಾದ ಬಿ.ಎಲ್. ಶಿವಳ್ಳಿ, ಸಿ.ಕೆ. ಮಾಳಶೆಟ್ಟಿ, ನಿಂಗನೌಡ ಮರಿಗೌಡ್ರ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ನಿಂಗನಗೌಡರ ಮರಿಗೌಡ್ರ, ದತ್ತಿದಾನಿ ಸುರೇಖಾ ಬೊಮ್ಮನಾಯ್ಕ ಪಾಟೀಲ ಹಾಗೂ ಎಸ್.ಎಂ. ಪಾಟೀಲ ಇದ್ದರು. ರಾಜೂಗೌಡ ಪಾಟೀಲ ದತ್ತಿ ಆಶಯ ಕುರಿತು ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.