ಸಂಡೂರು: ಪಟ್ಟಣದ ಶ್ರೀಮಹರ್ಷಿ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಸ್ಥಳೀಯ ಛತ್ರಪತಿ ಶಿವಾಜಿ ವಿದ್ಯಾಮಂದಿರದ ೧೯೭೫-೭೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚಿನ ವಿದ್ಯಾರ್ಥಿಗಳಿಂದ ಆಯೋಜನೆಗೊಂಡಿದ್ದ ಪುನರ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮ ವಿಶೇಷವಾಗಿತ್ತು. ಇಲ್ಲಿ ಗುರುವಂದನೆ ಸ್ವೀಕರಿಸಿದ ಗುರುಗಳು ಹಾಗೂ ಗುರುವಂದನೆ ಸಲ್ಲಿಸಿದ ಶಿಷ್ಯರು ಹಿರಿಯ ನಾಗರಿಕರಾಗಿದ್ದು ಗಮನಾರ್ಹವಾಗಿತ್ತು.
ಶಂಭುಲಿಂಗಪ್ಪ ಹಗರಿಯವರು ತಮ್ಮ ಹಿತವಚನದೊಂದಿಗೆ ಜಿ.ಪಿ. ರಾಜರತ್ನಂ ಅವರ ಬ್ರಹ್ಮ ನಿಂಗೆ ಜೋಡಿಸ್ತೀನಿ ಎಂಡ ಮುಟ್ಟಿದ್ ಕೈನಾ ಎಂಬ ಹಾಡನ್ನು ಹಾಡಿ, ವಿದ್ಯಾರ್ಥಿಗಳನ್ನು ಖುಷಿಪಡಿಸಿದರು.
ಹಳೆಯ ವಿದ್ಯಾರ್ಥಿ ಎಂ. ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಗುರುಗಳು ವಿದ್ಯೆ, ಜ್ಞಾನ ಹಾಗೂ ಬುದ್ಧಿಯನ್ನು ಧಾರೆ ಎರೆದು ನಮಗೆ ಬದುಕನ್ನು ಕಟ್ಟಿಕೊಟ್ಟರು. ನಾವು ಏನೇ ಸಾಧನೆ ಮಾಡಿದ್ದರೆ, ಅದಕ್ಕೆ ಪಾಲಕರು ಹಾಗೂ ಗುರುಗಳು ನೀಡಿದ ಶಿಕ್ಷಣ ಹಾಗೂ ಸಂಸ್ಕಾರ ಕಾರಣವಾಗಿದೆ ಎಂದು ಸ್ಮರಿಸಿದರು.ಮಯೂರ್‌ನಾಥ್ ಘಂಟಿ, ಸ್ಟೀಫನ್ ಸಿಂಥಿಯಾ ಅವರು ತಮ್ಮ ಶಾಲಾ ದಿನಗಳನ್ನು ಮೆಲುಕು ಹಾಕಿದರು. ಕಾರ್ಯಕ್ರಮದ ಆರಂಭದಲ್ಲಿ ಈ ಹಿಂದೆ ತಮ್ಮ ಶಾಲೆಯಲ್ಲಿ ತಾವುಗಳು ಹಾಡುತ್ತಿದ್ದ ಪ್ರಾರ್ಥನಾ ಗೀತೆಯನ್ನು ಎಲ್ಲಾ ಹಳೆಯ ವಿದ್ಯಾರ್ಥಿಗಳು ಹಾಡಿದರು. ನರಿ ಬಸವರಾಜ ಅವರು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ, ಹಾಡುಗಳಿಗೆ ಹರ‍್ಮೋನಿಯಂ ಸಾಥ್ ನೀಡಿದರು. ಹೆಚ್. ಕುಮಾರಸ್ವಾಮಿ ತಬಲಾ ಸಾಥ್ ನೀಡಿದರು. ಪುಷ್ಪಾ ಜೋಷಿಯವರು ವಂದಿಸಿದರು.
ಹಳೆಯ ವಿದ್ಯಾರ್ಥಿಗಳಾದ ಮಹಾಬಲೇಶ್ವರ್ ಜ್ಯೊತಿ, ವಿ.ಎಂ. ಶರಣಯ್ಯ, ನಾರಾಯಣಾಚಾರ್, ದೇವೇಂದ್ರಪ್ಪ, ಮಹಾರುದ್ರಗೌಡ, ಬಸವರಾಜ್ ಬಂಡ್ರಿ, ನಬಿಸಾಬ್, ಶ್ರೀನಿವಾಸ್, ಮಂಜುನಾಥ್, ವಿಶ್ವಮೂರ್ತಿಸ್ವಾಮಿ ಹಿರೇಮಠ್, ತಿಮ್ಮಾರೆಡ್ಡಿ, ರಾಜಶೇಖರ್, ಮುಕುಂದರಾವ್ ಶಾನುಭೋಗ್, ಜಾವೀದ್, ರಾಮಮೂರ್ತಿ, ಗಿರಿಜಮ್ಮ ಐಕಲ್, ಬಿ. ಸರೋಜಾ, ವಿಜಯಮ್ಮ ಸೇರಿದಂತೆ ಶ್ರೀಛತ್ರಪತಿ ಶಿವಾಜಿ ವಿದ್ಯಾಮಂದಿರದ ೧೯೭೫-೭೬ನೇ ಸಾಲಿನ ಎಸ್‌ಎಸ್‌ಎಲ್‌ಸಿ ಬ್ಯಾಚಿನ ಹಲವು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.