ಕುವೆಂಪು ಪಂಚಶೀಲ ತತ್ವ ಸಾರ್ವಕಾಲಿಕ: ಕೆ.ಪಿ. ಮೃತ್ಯುಂಜಯ

KannadaprabhaNewsNetwork |  
Published : Jan 19, 2026, 12:45 AM IST
16ಕೆಎಂಎನ್‌ಡಿ-4ಮಂಡ್ಯದ ಎಂ.ಆರ್.ಎಂ. ಪ್ರಕಾಶನದ ವತಿಯಿಂದ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ ಸಮಾರಂಭದಲ್ಲಿ ಎಂಆರ್‌ಎಂ ಸಾಹಿತ್ಯ ಪ್ರಶಸ್ತಿಯನ್ನು ಕವಿ ಕೆ.ಪಿ.ಮೃತ್ಯುಂಜಯ, ಪ್ರಕಾಶನ ಪ್ರಶಸ್ತಿಯನ್ನು ಗಣೇಶ್‌ ಅಮೀನಗಡ ಅವರಿಗೆ ನೀಡಿ ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಕುವೆಂಪು ಹಾಗೂ ಡಾ. ರಾಜ್‌ಕುಮಾರ್‌ ನಾಡು ಕಂಡ ಶೇಷ್ಠ ಸಾಂಸ್ಕೃತಿಕ ನಾಯಕರು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ, ಜಾತೀಯತೆ ಹಾಗೂ ಬಡತನವನ್ನು ಆಮೂಲಾಗ್ರವಾಗಿ ನಿರ್ಮೂಲನೆ ಮಾಡಬೇಕೆಂದು ಶ್ರಮಿಸಿದ ಮಹಾನ್ ದಾರ್ಶನಿಕ. ಧರ್ಮ ಸಹಿಷ್ಣುತೆ ಸಾರಿದ ಶ್ರೇಷ್ಠ ಸಂತನನ್ನು ಹಿಂದುತ್ವ ವಾದಕ್ಕೆ ಬಳಸಬಾರದು.

ಕನ್ನಡಪ್ರಭ ವಾರ್ತೆ ಮಂಡ್ಯ

ರಾಷ್ಟ್ರಕವಿ ಕುವೆಂಪು ಅವರ ಪಂಚಶೀಲ ತತ್ವಗಳಾದ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ ಹಾಗೂ ಪೂರ್ಣದೃಷ್ಟಿಯನ್ನು ಎಲ್ಲ ಕಾಲಕ್ಕೂ ನಮ್ಮದಾಗಿಸಿಕೊಳ್ಳಬೇಕು ಎಂದು ಕವಿ ಕೆ.ಪಿ.ಮೃತ್ಯುಂಜಯ ಅವರು ತಿಳಿಸಿದರು.

ಮಂಡ್ಯದ ಎಂ.ಆರ್.ಎಂ. ಪ್ರಕಾಶನದ ವತಿಯಿಂದ ಯಾಚೇನಹಳ್ಳಿಯ ಶ್ರೀರಾಮಕೃಷ್ಣ ಸೇವಾ ಕೇಂದ್ರದಲ್ಲಿ ಆಯೋಜಿಸಿದ್ದ ಪ್ರಥಮ ವಾರ್ಷಿಕೋತ್ಸವ, ʻಅವಧೂತ ಮಾದಪ್ಪʼ ಹಾಗೂ ʻ ದಿ ಕಾಪಿʼ ಕೃತಿಗಳ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎಂ.ಆರ್.ಎಂ. ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಕುವೆಂಪು ಹಾಗೂ ಡಾ. ರಾಜ್‌ಕುಮಾರ್‌ ನಾಡು ಕಂಡ ಶೇಷ್ಠ ಸಾಂಸ್ಕೃತಿಕ ನಾಯಕರು. ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ, ಜಾತೀಯತೆ ಹಾಗೂ ಬಡತನವನ್ನು ಆಮೂಲಾಗ್ರವಾಗಿ ನಿರ್ಮೂಲನೆ ಮಾಡಬೇಕೆಂದು ಶ್ರಮಿಸಿದ ಮಹಾನ್ ದಾರ್ಶನಿಕ. ಧರ್ಮ ಸಹಿಷ್ಣುತೆ ಸಾರಿದ ಶ್ರೇಷ್ಠ ಸಂತನನ್ನು ಹಿಂದುತ್ವ ವಾದಕ್ಕೆ ಬಳಸಬಾರದು. ಗೌತಮ ಬುದ್ಧ ಸ್ವಾಮಿ ವಿವೇಕಾನಂದರಿಗೆ ಆದರ್ಶವಾದರೆ ವಿವೇಕಾನಂದರು ಕುವೆಂಪುಗೆ ಆದರ್ಶ ಎಂದು ತಿಳಿಸಿದರು.

ಎಂ.ಆರ್.ಎಂ. ಪ್ರಕಾಶನ ಪ್ರಶಸ್ತಿ ಸ್ವೀಕರಿಸಿದ ಕವಿತಾ ಪ್ರಕಾಶನದ ಗಣೇಶ ಅಮೀನಗಡ ಮಾತನಾಡಿ, ದೇವರು ರುಜು ಮಾಡಿದನು; ರಸವಶನಾಗುತ ಕವಿ ಅದ ನೋಡಿದನು ಎಂದು ಕುವೆಂಪು ಕವಿತೆಗಳ ಮಹತ್ವವನ್ನು ಸಾರಿ ಪ್ರತಿನಿತ್ಯ ಪ್ರತಿಯೊಬ್ಬರೂ ಕುವೆಂಪು ಸಾಹಿತ್ಯದ ಎರಡು ಸಾಲುಗಳನ್ನು ಓದಬೇಕು ಎಂದು ತಿಳಿಸಿದರು.

ʻಅವಧೂತ ಮಾದಪ್ಪʼ ಮತ್ತು ʻದಿ ಕಾಪಿʼ ಕೃತಿಗಳನ್ನು ಬಿಡುಗಡೆ ಮಾಡಿ ಆಶೀರ್ವಚನ ನೀಡಿದ ಕೆಂಗೇರಿಯ ವಿಶ್ವ ಒಕ್ಕಲಿಗರ ಸಂಸ್ಥಾನದ ಪೀಠಾಧಿಪತಿ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ನಮಗೆ ಇಂದು ಮತ್ತೊಂದು ಧರ್ಮದ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರುವುದು ಮಾನವೀಯ ಧರ್ಮ. ವಸುದೈವ ಕುಟುಂಬಕಂ ಎಂಬುದು ಎಲ್ಲ ಧರ್ಮಗಳ ಸಾರ. ಸರ್ವೇಜನಾ ಸುಖಿನೋ ಭವಂತು ಎಂದು ಸ್ವಾಮಿ ವಿವೇಕಾನಂದರು ನಂಬಿದ್ದರು. ಧರ್ಮಗಳಲ್ಲಿರುವ ಅಂಕುಡೊಂಕುಗಳನ್ನು ಮೊದಲು ತೊಡೆದು ಹಾಕೋಣ. ಮೊದಲು ನಾವು ಪರಿವರ್ತನೆ ಆಗೋಣ. ಆಮೇಲೆ ಸಮಾಜವನ್ನು ಬದಲಾಯಿಸೋಣ. ಮಾನವೀಯ ಧರ್ಮದ, ದಯೆಯುಳ್ಳ, ರಾಷ್ಟ್ರಕವಿ ಕುವೆಂಪು ವಿಶ್ವಮಾನವ ಸಂದೇಶ ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಯಾಚೇನಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎನ್.ಶಂಕರೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಯಾಚೇನಹಳ್ಳಿಯ ಚನ್ನಾಜಮ್ಮ ಅವರನ್ನು ಸನ್ಮಾನಿಸಲಾಯಿತು. ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಎಸ್. ಪಿ.ನಿಧಿ ಹಾಗೂ ಅನ್ಸಿತಾ ಮೆನನ್ ಅವರ ʻದಿ ಕಾಪಿʼ ಕೃತಿ ಕುರಿತು ಪ್ರಕಾಶಕ ಉಮೇಶ್ ದಡಮಹಳ್ಳಿ ಮಾತನಾಡಿದರು. ಎಂಆರ್‌ಎಂ ಪ್ರಕಾಶನದ ಪ್ರಕಾಶಕ ಮಂಜು ಮುತ್ತೇಗೆರೆ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಚಂದ್ರಶೇಖರ ದ.ಕೋ. ಹಳ್ಳಿ ಚಂದ್ರಶೇಖರ ಆಶಯ ನುಡಿಗಳನ್ನಾಡಿದರು.

ಶ್ರೀರಾಮಕೃಷ್ಣ ಸೇವಾ ಕೇಂದ್ರದ ಅಧ್ಯಕ್ಷ ನಾದಾನಂದನಾಥ ಸ್ವಾಮೀಜಿ, ಕಥೆಗಾರ ಅದೀಬ್ ಅಖ್ತರ್, ಕವಿಯತ್ರಿ ಎಚ್.ಆರ್. ಕನ್ನಿಕಾ, ಬನ್ನೂರಿನ ಆಕಾಶ್ ಸ್ಟೀಲ್ಸ್ ಆ್ಯಂಡ್ ಸಿಮೆಂಟ್ ಮಾಲೀಕರಾದ ಜಿ.ಸುರೇಶ್, ಕವಿ ಹಾಗೂ ಶಿಕ್ಷಕ ಕೊತ್ತತ್ತಿ ರಾಜು ಹಾಗೂ ನೇರಲಕೆರೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ನೇರಲಕೆರೆ ಲೋಕೇಶ್‌, ಎಸ್‌ಎನ್‌ ಎಸ್‌ ಎಕ್ಸಲೆನ್ಸ್‌ ಪಿಯು ಕಾಲೇಜಿನ ಮಂಜೇಶ್‌ ಹಾಗೂ ಆಡಳಿತಾಧಿಕಾರಿ ಅವಿನಾಶ್‌ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಡ್ಡಾಯ ಪ್ರವೇಶಕ್ಕೆ ಆಗ್ರಹ
ಹೇಳಿಕೆ ಮಾತು ಬಿಟ್ಟು ಜನಪರ ಅಭಿವೃದ್ಧಿ ಕೆಲಸ ಮಾಡಲಿ: ಸಂಸದ ಬಿ.ವೈ ರಾಘವೇಂದ್ರ