ಬಳ್ಳಾರಿ: ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ರಂಗಜಂಗಮ ಸಂಸ್ಥೆ ಡಿ.ಕಗ್ಗಲ್ ಹಾಗೂ ಆಲಾಪ್ ಸಂಗೀತ ಕಲಾಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಸಂಕ್ರಾಂತಿ ರಂಗೋತ್ಸವ-2026 ಕ್ಕೆ ಚಾಲನೆ ದೊರೆಯಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿವಲಿಂಗಪ್ಪ ಹಂದಿಹಾಳು ಮಾತನಾಡಿ, ಅಹಿಂಸೆ, ಸಹಿಷ್ಣುತೆ, ಸೌಹಾರ್ದತೆ, ಸಹಬಾಳ್ವೆ, ಸಮಾನತೆ ಹಾಗೂ ಶೋಷಣೆ ರಹಿತ ಸಮಾಜದ ನಿರ್ಮಾಣದ ಆಶಯ ಹೊಂದಿದ್ದ ಗಾಂಧೀಜಿಯವರ ಚಿಂತನೆಗಳು ಪ್ರತಿಯೊಬ್ಬರ ಮನದಲ್ಲಿ ಸದಾ ಪ್ರತಿಧ್ವನಿಸುತ್ತಿರಬೇಕು. ಅದರಲ್ಲೂ ಯುವ ಸಮುದಾಯಕ್ಕೆ ಗಾಂಧೀಜಿಯ ಹೋರಾಟ ಬದುಕು ಪರಿಚಯವಾಗಬೇಕು ಎಂದರು.
ಗ್ರಾಮಗಳ ಅಭಿವೃದ್ಧಿಯಿಂದ ಮಾತ್ರ ದೇಶದ ಅಭಿವೃದ್ಧಿ ಎಂದು ಪ್ರಬಲವಾಗಿ ನಂಬಿಕೆಯಿಟ್ಟುಕೊಂಡಿದ್ದರು. ಸ್ವದೇಶಿ ಅವಲಂಬನೆಯಿಂದ ಮಾತ್ರ ಭಾರತ ಬೆಳಗಲು ಸಾಧ್ಯ ಎಂದು ಭಾವಿಸಿದ್ದರು. ಈ ಕಾರಣಕ್ಕಾಗಿಯೇ ವಿದೇಶಿ ವಸ್ತುಗಳ ಬಹಿಷ್ಕಾರಕ್ಕೆ ಕರೆ ನೀಡಿದರು. ಖಾದಿ ಮತ್ತು ಗ್ರಾಮೋದ್ಯಗಕ್ಕೆ ಉತ್ತೇಜನ ನೀಡಿದರು ಎಂದು ತಿಳಿಸಿದರು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ವಿ.ರಾಮಚಂದ್ರಪ್ಪ, ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಎನ್.ಪ್ರಕಾಶ್, ರಂಗಜಂಗಮ ಸಂಸ್ಥೆಯ ಮುಖ್ಯಸ್ಥ ಅಣ್ಣಾಜಿ ಕೃಷ್ಣಾರೆಡ್ಡಿ ಡಿ.ಕಗ್ಗಲ್, ಎಸ್.ದೊಡ್ಡನಗೌಡ, ಬಳ್ಳಾರಿ ಜಿಲ್ಲಾ ಕಲಾವಿದರ ಸಂಘದ ಕಾರ್ಯದರ್ಶಿ ತಿಪ್ಪೇಸ್ವಾಮಿ ಮುದ್ದಟನೂರು ಉಪಸ್ಥಿತರಿದ್ದರು. ಆಲಾಪ್ ಸಂಗೀತ ಕಲಾ ಟ್ರಸ್ಟ್‌ನ ಅಧ್ಯಕ್ಷ ರಮಣಪ್ಪ ಭಜಂತ್ರಿ, ಆಲಂಬಾಷಾ ಹಾಗೂ ಗೋವರ್ಧನ ರೆಡ್ಡಿ ಕಾರ್ಯಕ್ರಮ ನಿರ್ವಹಿಸಿದರು. ಇದೇವೇಳೆಕರ್ನಾಟಕ ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಂಪ್ಲಿ ಈರಣ್ಣ ಅವರನ್ನು ಸನ್ಮಾನಿಸಲಾಯಿತು . ವಿನೋದ್ ಮತ್ತು ತಂಡದವರು ಜಾನಪದ ಗೀತೆಗಳಿಗೆ ನೃತ್ಯ ಪ್ರದರ್ಶಿಸಿದರು. ಕೊನೆಯಲ್ಲಿ ಶಿವಮೊಗ್ಗ ರಂಗಾಯಣ ತಂಡವು ಡಿ.ಎಸ್.ಚೌಗಲೆ ರಚನೆಯ ನಮ್ಮೊಳಗೊಬ್ಬ ಗಾಂಧಿ ನಾಟಕ ಪ್ರದರ್ಶನ ನೀಡಿತು.