ಸಿದ್ದಾಪುರ: ಪಶ್ಚಿಮ ಘಟ್ಟ ಸಂರಕ್ಷಣೆ ಸಂಬಂಧಿತ ಕಸ್ತೂರಿರಂಗನ್ ವರದಿಯನ್ನು ಒಟ್ಟಾರೆಯಾಗಿ ವಿರೋಧಿಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಬದಲಿಗೆ ಕರಡು ಅಧಿಸೂಚನೆ ಹಂತದಲ್ಲೇ ಸ್ಥಳೀಯರ ಹಕ್ಕುಗಳು ಮತ್ತು ಬದುಕನ್ನು ರಕ್ಷಿಸಲು ಸರ್ಕಾರ ಬಲವಾದ ಕಾನೂನಾತ್ಮಕ ಪ್ರತಿಪಾದನೆ ಮಾಡಬೇಕು ಎಂದು ಹೈಕೋರ್ಟ್ ವಕೀಲ ಲಕ್ಷ್ಮೀಶ ಮುಟಗುಪ್ಪೆ ಅಭಿಪ್ರಾಯಪಟ್ಟರು.
ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಗ್ರಾಮಸ್ಥರನ್ನು ಏಕಾಏಕಿ ಒಕ್ಕಲೆಬ್ಬಿಸುತ್ತಾರೆ ಎಂಬ ಭಯ ಅನಗತ್ಯ. ಸುಪ್ರೀಂ ಕೋರ್ಟ್ ಪರಿಷ್ಕೃತ ಆದೇಶದ ಪ್ರಕಾರ ಜನರ ದೈನಂದಿನ ಚಟುವಟಿಕೆಗಳು, ಮನೆಗಳ ನವೀಕರಣ, ರಸ್ತೆ, ಕುಡಿಯುವ ನೀರು, ಶಾಲೆ ಹಾಗೂ ಆಸ್ಪತ್ರೆಯಂತಹ ಮೂಲ ಸೌಕರ್ಯ ಕಾಮಗಾರಿಗಳಿಗೆ ಯಾವುದೇ ತಡೆ ಇರುವುದಿಲ್ಲ. ಆದರೆ ಮಲೆನಾಡಿನಲ್ಲಿ ಅರಣ್ಯ ಹಕ್ಕು ಮಾನ್ಯತೆ ಸಿಗದೆ ಅತಿಕ್ರಮಣದಾರರ ಹಣೆಪಟ್ಟ ಹೊತ್ತಿರುವ ಸಾವಿರಾರು ಕೃಷಿಕರು ಮತ್ತು ಕುಟುಂಬಗಳಿದ್ದಾರೆ. ಇಂಥವರ ಯಥಾಸ್ಥಿತಿ ಮತ್ತು ಕೃಷಿ ಬದುಕಿಗೆ ಧಕ್ಕೆ ಬಾರದಂತೆ ಸರ್ಕಾರ ಕರಡು ಅಧಿಸೂಚನೆಯಲ್ಲೇ ಸ್ಪಷ್ಟ ರಕ್ಷಣೆ ದಾಖಲಿಸಬೇಕು ಎಂದರು.
ಇದೇ ವೇಳೆ, ಪರಿಸರ ಸೂಕ್ಷ್ಮ ವಲಯ ಕಟ್ಟುನಿಟ್ಟಾಗಿ ಜಾರಿಯಾದರೆ ಪಶ್ಚಿಮ ಘಟ್ಟದ ಜೀವಸೆಲೆಯನ್ನು ನಾಶಪಡಿಸುವ ನದಿ ತಿರುವು ಯೋಜನೆಗಳು, ಬೃಹತ್ ಜಲವಿದ್ಯುತ್ ಹಾಗೂ ಪಂಪ್ಡ್ ಸ್ಟೋರೇಜ್ ನಂತಹ ಯೋಜನೆಗಳಿಗೆ ಶಾಶ್ವತ ಕಡಿವಾಣ ಬೀಳಲಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಸ್ಥಳೀಯರ ಪರವಾಗಿ ನಾವೂ ವಕೀಲರಾಗಿ ಪ್ರತ್ಯೇಕ ಆಕ್ಷೇಪಣೆ ಸಲ್ಲಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದರು.