ಭಗವದ್ಗೀತೆ ಅಧ್ಯಯನದಿಂದ ಮನಶುದ್ಧಿ: ಬ್ರಹ್ಮಾನಂದಭಾರತೀ ಸ್ವಾಮಿಗಳು

KannadaprabhaNewsNetwork |  
Published : Oct 05, 2026, 02:30 AM IST
ಭುವನಗಿರಿಯಲ್ಲಿ ಸಂಪೂರ್ಣ ಶ್ರೀಮದ್ಭಗವದ್ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ದಿವ್ಯೋಪದೇಶ ಅನುಗ್ರಹಿಸುತ್ತಿರುವ  ಬ್ರಹ್ಮಾನಂದಭಾರತೀ ಶ್ರೀಗಳು. | Kannada Prabha

ಸಾರಾಂಶ

ಜೀವನವನ್ನು ಅರ್ಥೈಸಿಕೊಳ್ಳದಿರುವುದು ಹಾಗೂ ನಮ್ಮಲ್ಲಿಯ ಅವಿವೇಕ ದುಃಖಕ್ಕೆ ಕಾರಣವಾಗುತ್ತದೆ. ಮನಸ್ಸಿನ ಸಮಾಧಾನ ಕಳೆದುಕೊಳ್ಳಬಾರದು. ಬರುವುದೆಲ್ಲವೂ ಭಗವಂತನ ಪ್ರಸಾದವೆಂದು ಸ್ವೀಕರಿಸಬೇಕು.

ಸಿದ್ದಾಪುರ: ನಿತ್ಯ ಜೀವನದಲ್ಲಿ ಅಧ್ಯಾತ್ಮವನ್ನು ಅಳವಡಿಸಿಕೊಂಡು ಹೋಗುವುದು ಹೇಗೆ ಎಂಬ ವಿಚಾರ ಭಗವದ್ಗೀತೆಯಲ್ಲಿದೆ. ಸಾಧನೆಯ ಪಥದಲ್ಲಿ ಸಾಗಲು ಭಗವದ್ಗೀತೆಯ ಪಠಣ ಮಾಡಬೇಕು. ಭಗವದ್ಗೀತೆಯ ತುಂಬೆಲ್ಲಾ ಭಗವಂತನ ಮಹಿಮೆ ತುಂಬಿದ್ದು, ಇದನ್ನು ಪಠಿಸುವುದರಿಂದ ಮನಸ್ಸು ಶುದ್ಧವಾಗುತ್ತದೆ ಎಂದು ಶಿರಳಗಿ ಶ್ರೀ ಚೈತನ್ಯ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದಭಾರತೀ ಸ್ವಾಮಿಗಳು ಹೇಳಿದರು.

ಶ್ರೀ ಕ್ಷೇತ್ರ ಭುವನಗಿರಿಯ ಭುವನೇಶ್ವರೀ ದೇವಾಲಯದ ಆಶ್ರಯದಲ್ಲಿ ಸುಷಿರ ಸಂಗೀತ ಪರಿವಾರದ ಸಂಯೋಜನೆಯಲ್ಲಿ ಭಾನುವಾರ ಸಂಘಟಿಸಿದ್ದ ಸಂಪೂರ್ಣ ಶ್ರೀಮದ್ಭಗವದ್ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಶ್ರೀಗಳು ದಿವ್ಯೋಪದೇಶ ನೀಡಿ, ರಾಗ, ದ್ವೇಷ, ಮೋಹ, ಶೋಕವನ್ನೊಳಗೊಂಡ ಜೀವನ ಎನ್ನುವ ರಣರಂಗದಲ್ಲಿ ಹೋರಾಟ, ದುಃಖ, ಬೇಸರ ಅನುಭವಿಸುವವರಿಗೆ ಭಗವದ್ಗೀತೆ ದಿವ್ಯ ಔಷಧವಾಗಿದೆ ಎಂದರು.

ಜೀವನವನ್ನು ಅರ್ಥೈಸಿಕೊಳ್ಳದಿರುವುದು ಹಾಗೂ ನಮ್ಮಲ್ಲಿಯ ಅವಿವೇಕ ದುಃಖಕ್ಕೆ ಕಾರಣವಾಗುತ್ತದೆ. ಮನಸ್ಸಿನ ಸಮಾಧಾನ ಕಳೆದುಕೊಳ್ಳಬಾರದು. ಬರುವುದೆಲ್ಲವೂ ಭಗವಂತನ ಪ್ರಸಾದವೆಂದು ಸ್ವೀಕರಿಸಬೇಕು. ಭಗವದ್ಗೀತೆ ಎಲ್ಲರಿಗೂ ಹೇಳಿಕೊಡಬಹುದಾದ ವೇದಸಾರ.

ಮಡಿ, ಮೈಲಿಗೆ, ಜಾತಿ, ಧರ್ಮವೆಂಬ ಭೇದಭಾವ ಭಗವದ್ಗೀತೆಗಿಲ್ಲ. ಹೀಗಾಗಿ ಭಗವದ್ಗೀತೆಯನ್ನು ಮನೆಮನೆಗೂ ತಲುಪಿಸುವ ಕೆಲಸವಾಗಬೇಕು. ಭಗವದ್ಗೀತೆಯ ಎರಡನೇ ಅಧ್ಯಾಯ ಅರ್ಥಮಾಡಿಕೊಂಡರೆ ಉಳಿದೆಲ್ಲಾ ಅಧ್ಯಾಯಗಳು ಸುಲಭವಾಗಿ ಅರ್ಥವಾಗುತ್ತವೆ. ನಮ್ಮ ಶರೀರ ಸಾಯಬಹುದೇ ವಿನಾ ಆತ್ಮಕ್ಕೆ ಸಾವಿಲ್ಲ. ನಮ್ಮ ಶರೀರ, ಬುದ್ಧಿ ಬದಲಾಗಬಹುದು. ಆದರೆ ಆತ್ಮ ನಿತ್ಯ ಸತ್ಯ, ಆತ್ಮನಲ್ಲಿ ಷಡ್ವಿಕಾರಗಳಿಲ್ಲ. ಆತ್ಮ ವಿಚಾರ ಸಂಸಾರದ ತಾಪತ್ರಯಗಳಿಗೆ ಪರಿಹಾರ ನೀಡುತ್ತದೆ. ಆತ್ಮ ಜ್ಞಾನ ಬೇಕೆಂದಾದರೆ ಮನಸ್ಸು ಶುದ್ಧವಾಗಬೇಕು. ಭಗವದ್ಗೀತೆಯ ಅರ್ಥವನ್ನು ಅರಿತು ಪಠಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದರು.

ನೂರಾರು ಮಹಿಳೆಯರು ಸಂಪೂರ್ಣ ಶ್ರೀಮದ್ಭಗವದ್ಗೀತಾ ಪಾರಾಯಣ ನಡೆಸಿಕೊಟ್ಟರು. ಭುವನೇಶ್ವರಿ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡ ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು. ಹಾಳದಕಟ್ಟಾದ ಜಗದ್ಗುರು ಮುರುಘರಾಜೇಂದ್ರ ಅಂಧರ ಶಾಲೆಯ ಮಕ್ಕಳು, ಶಿಕ್ಷಕರು ಪಾಲ್ಗೊಂಡಿದ್ದರು. ವೇ. ಶ್ರೀಧರ ಭಟ್ಟ ಮುತ್ತಿಗೆ ಶ್ರೀಕೃಷ್ಣನ ಪೂಜಾಕಾರ್ಯ ನೆರವೇರಿಸಿದರು.

ಸುಷಿರ ಸಂಗೀತ ಪರಿವಾರದ ನಾರಾಯಣ ಕಲ್ಲಾರೆಮನೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಮತಿ ಶಿರಳಗಿ ಭಗವದ್ಗೀತಾ ಪಠಣ ಕಾರ್ಯಕ್ರಮ ಸಂಘಟನೆಯ ಕುರಿತು ಮಾತನಾಡಿದರು. ಗಣಪತಿ ಹೆಗಡೆ ಗುಂಜಗೋಡ ನಿರ್ವಹಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಜೀವನ ಸಹಕಾರ ಸಂಘ ವಾರ್ಷಿಕ ಮಹಾಸಭೆ
ಸಮಸ್ಯೆಗಳಿಗೆ ಕಾಲಮಿತಿಯ ಪರಿಹಾರ: ಮಂತರ್‌ ಗೌಡ