ಯಲ್ಲಾಪುರ: ಬೇಡ್ತಿ- ವರದಾ ನದಿ ಜೋಡಣೆ ವಿಚಾರ, ಜಿ+೨ ಮನೆ ಹಂಚಿಕೆ ವಿಚಾರ ಹಾಗೂ ಗ್ರಾಮೀಣ ಭಾಗದ ಸರ್ಕಾರಿ ಜಾಗದಲ್ಲಿನ ನಿವೇಶನ, ಕಟ್ಟಡಗಳ ಕರ ವಸೂಲಿ ನಿಲ್ಲಿಸುವ ಆದೇಶದ ಕುರಿತು ಶಾಸಕರ ನಿಲುವಿನ ಬಗ್ಗೆ ನಾವು ಪ್ರಶ್ನಿಸಿದ್ದೆವು. ಇದರ ಬಗ್ಗೆ ಕಾಂಗ್ರೆಸ್ ಮುಖಂಡರಿಂದ ಪ್ರತಿಕ್ರಿಯೆ ಕೊಡಿಸುವ ಬದಲು, ಸ್ವತಃ ಶಾಸಕರೇ ಮೌನ ಮುರಿದು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಬಿಜೆಪಿ ಮಂಡಲಾಧ್ಯಕ್ಷ ಪ್ರಸಾದ ಹೆಗಡೆ ಆಗ್ರಹಿಸಿದರು.
ಜಿ+೨ ಮನೆಯ ಹಂಚಿಕೆ ವಿಚಾರದಲ್ಲಿ ನಿಜವಾದ ಬಡವರಿಗೆ ಮನೆ ಸಿಗುವಂತಾಗಬೇಕು. ಇನ್ನಾದರೂ ಅರ್ಹರಿಗೆ ಮನೆ ನೀಡುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ ಅವರು, ಸರ್ಕಾರಿ ಜಾಗದಲ್ಲಿನ ನಿವೇಶನ, ಕಟ್ಟಡಗಳ ಕರ ವಸೂಲಿ ನಿಲ್ಲಿಸುವ ಆದೇಶ ತಿದ್ದುಪಡಿಗಾಗಿ ಶಾಸಕರು ಸಚಿವರಿಗೆ ಮನವಿ ಸಲ್ಲಿಸಿದರೆ ಸಾಲದು. ಆದೇಶ ರದ್ದತಿ ಮಾಡಿಸುವ ಧೈರ್ಯ ತೋರಿಸಲಿ ಎಂದು ಸವಾಲು ಹಾಕಿದರು.
ವಿಶೇಷ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಘವೇಂದ್ರ ಭಟ್ಟ ಮಾತನಾಡಿ, ನದಿ ಜೋಡಣೆ ವಿಚಾರದಲ್ಲಿ ಜನರ ಎದುರು ಯೋಜನೆ ವಿರೋಧಿಸುತ್ತ, ಸರ್ಕಾರದ ಮಟ್ಟದಲ್ಲಿ ಅದಕ್ಕೆ ಪ್ರೋತ್ಸಾಹಿಸುತ್ತ ಶಾಸಕರು ದ್ವಂದ್ವ ನಿಲುವು ಹೊಂದಿದ್ದಾರೆ. ಸಂಸದರ ಬಗ್ಗೆ ಅನಗತ್ಯವಾಗಿ ಕೀಳು ಮಟ್ಟದ ಟೀಕೆ ಮಾಡುತ್ತಿದ್ದಾರೆ ಎಂದರು.ಬಿಜೆಪಿ ಮುಖಂಡ, ವಿಶ್ವದರ್ಶನ ಶಿಕ್ಷಣ ಸಮೂಹದ ನಿರ್ದೇಶಕ ಗಣಪತಿ ಮಾನಿಗದ್ದೆ ಮಾತನಾಡಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯನ್ನು ಆರಂಭ ಮಾಡಿದ ದಿ. ಉಮೇಶ ಭಟ್ಟ ಅವರ ಬಗ್ಗೆ ಅಪಾರ ಗೌರವವಿದೆ. ಅವರು ಸದಾ ಸ್ಮರಣೀಯರು. ಸಂಸ್ಥೆಯನ್ನು ಕೋಣೆಮನೆಯವರು ಖರೀದಿಸಿ, ಪ್ರಗತಿ ಹೊಂದುವಂತೆ ಮಾಡಿದ್ದಾರೆ. ಎಲ್‌ಕೆಜಿಯಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಅನೇಕ ಕೋರ್ಸ್‌ಗಳನ್ನು ಆರಂಭಿಸಿ, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಶೈಕ್ಷಣಿಕವಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ ಎಂದರು.