ರಸ್ತೆಯುದ್ದಕ್ಕೂ ತಗ್ಗುಗುಂಡಿ, ಸಂಚಾರ ಅಸ್ತವ್ಯಸ್ತ..!

KannadaprabhaNewsNetwork |  
Published : Oct 05, 2026, 02:15 AM IST
ಮುಳಗುಂದ-ಲಕ್ಷ್ಮೇಶ್ವರ ನಡುವಿನ ರಾಜ್ಯ ಹೆದ್ದಾರಿ ರಸ್ತೆ ಹಾಳಾಗಿರುವುದು. | Kannada Prabha

ಸಾರಾಂಶ

ಪಟ್ಟಣದಿಂದ ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-64ರ ಪಾಳಾ-ಬಾದಾಮಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಕನ್ನಡಪ್ರಭ ವಾರ್ತೆ ಮುಳಗುಂದ

ಪಟ್ಟಣದಿಂದ ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-64ರ ಪಾಳಾ-ಬಾದಾಮಿ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆಯುದ್ದಕ್ಕೂ ತಗ್ಗು-ಗುಂಡಿಗಳು ನಿರ್ಮಾಣವಾಗಿರುವುದರಿಂದ ವಾಹನ ಸವಾರರು ಪರದಾಡುವಂತಾಗಿದೆ.

ಮುಳಗುಂದ-ಮಾಗಡಿ ಗ್ರಾಮದ ನಡುವಿನ ರಸ್ತೆಯನ್ನು ಸುಮಾರು ಒಂದು ದಶಕದ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ಆದರೆ ನಿರ್ವಹಣೆ ಹಾಗೂ ದುರಸ್ತಿ ಕಾರ್ಯಕ್ಕೆ ನಿರ್ಲಕ್ಷ್ಯ ವಹಿಸಿರುವ ಪರಿಣಾಮ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ. ರಸ್ತೆಯ ಮದ್ಯೆ ಮೊಣಕಾಲುದ್ದದಷ್ಟು ಆಳವಾದ ಗುಂಡಿಗಳು ಬಿದ್ದಿದ್ದು, ಕೆಲವೆಡೆ ರಸ್ತೆಯೇ ಕಾಣದಂತಾಗಿದೆ. ಈ ಮಾರ್ಗವಾಗಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಬಸ್‍ ಹಾಗೂ ನೂರಾರು ವಾಹನಗಳು ಸಂಚರಿಸುತ್ತವೆ. ಪ್ರಮುಖ ಸಂಪರ್ಕ ರಸ್ತೆಯಾಗಿದ್ದರೂ ಹಲವು ವರ್ಷಗಳಿಂದ ರಸ್ತೆ ದುರಸ್ತಿ ಕಾಣದೆ ಇರುವುದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಅಪಘಾತ ಸಂಭವಿಸುವ ಆತಂಕ:

ದ್ವಿ-ಚಕ್ರ ವಾಹನ ಸವಾರರು ಗುಂಡಿಗಳಿಂದ ತಪ್ಪಿಸಿಕೊಂಡು ಸಂಚರಿಸುವುದು ಸಾಹಸದ ಕೆಲಸವಾಗಿದೆ. ರಾತ್ರಿ ವೇಳೆ ಗುಂಡಿಗಳು ಸರಿಯಾಗಿ ಕಾಣದೆ ಅಪಘಾತ ಸಂಭವಿಸುವ ಆತಂಕ ಎದುರಾಗಿದೆ. ಈಗಾಗಲೇ ಆಯತಪ್ಪಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆದಿವೆ ಎನ್ನುತ್ತಾರೆ ಸ್ಥಳೀಯರು.

ಈಚೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಗದಗ ಜಿಲ್ಲೆ ಬರ ಪರಿಶೀಲನೆ ಪ್ರವಾಸಕ್ಕೆ ಬಂದಾಗ ತರಾತುರಿಯಲ್ಲಿ ಗುಂಡಿ ಮುಚ್ಚುವ ಕೆಲಸವನ್ನ ಲೋಕೋಪಯೋಗಿ ಇಲಾಖೆ ಮಾಡಿತ್ತು, ಆದರೆ ಸಂಪೂರ್ಣ ದುರಸ್ತಿ ಆಗದೇ ಹಾಗೇ ಉಳಿದಿದ್ದು, ರಸ್ತೆ ಯಮಸ್ವರೂಪಿಯಾಗಿ ಪರಣಮಿಸಿದೆ.

ಪರ್ಯಾಯ ಮಾರ್ಗ:

ರಸ್ತೆಯ ದುಸ್ಥಿತಿಯಿಂದ ಗದಗ-ಲಕ್ಷ್ಮೇಶ್ವರ ನಡುವೆ ಸಂಚರಿಸುವ ಕೆಲವು ವಾಹನಗಳು ನಾಗಾವಿ, ಶಿರಹಟ್ಟಿ ಮಾರ್ಗವನ್ನು ಅವಲಂಬಿಸುವಂತಾಗಿದೆ. ಇದರಿಂದ ಹೆಚ್ಚುವರಿ ಕಿಮೀರ್‌ಗಳಷ್ಟು ಪ್ರಯಾಣಿಸಬೇಕಾಗಿದ್ದರೂ, ರಸ್ತೆ ಸಮಸ್ಯೆಗಿಂತ ಜೀವದ ಸುರಕ್ಷತೆಯೇ ಮುಖ್ಯ ಎಂದು ವಾಹನ ಸವಾರರು ಪರ್ಯಾಯ ಮಾರ್ಗ ಬಳಸುವಂತಾಗಿದೆ.

ರಸ್ತೆ ಕಿತ್ತುಹೋಗಿ ವರ್ಷಗಳೇ ಕಳೆದಿವೆ. ಹಿಂದೆ ಅರ್ಧ ಗಂಟೆಯಲ್ಲಿ ಗದಗ ತಲುಪುತ್ತಿದ್ದವರು ಈಗ ತಗ್ಗು-ಗುಂಡಿಗಳಿಂದಾಗಿ ಗಂಟೆಗಟ್ಟಲೆ ಸಮಯ ವ್ಯಯಿಸುವಂತಾಗಿದೆ. ವಾಹನಗಳಿಗೂ ಹಾನಿಯಾಗುತ್ತಿದ್ದು, ಅಪಘಾತದ ಭೀತಿ ಎದುರಾಗಿದೆ. ಕೂಡಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕು. ರಾಜ್ಯ ಹೆದ್ದಾರಿ-64ರ ಮುಳಗುಂದ-ಮಾಗಡಿ-ಲಕ್ಷ್ಮೇಶ್ವರ ಮಾರ್ಗದ ರಸ್ತೆ ದುಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ, ತಾತ್ಕಾಲಿಕ ಗುಂಡಿ ಮುಚ್ಚುವ ಕಾಮಗಾರಿಯ ಜೊತೆಗೆ ಶಾಶ್ವತ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.ರಸ್ತೆ ದುರಸ್ತಿ ಮಾಡುವಂತೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಬೇಗನೆ ರಸ್ತೆ ದುರಸ್ತಿಗೆ ಕ್ರಮ ವಹಿಸಿ, ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎನ್ನುತ್ತಾರೆ ಪಪಂ ಮಾಜಿ ಸದಸ್ಯ ಮಹಾಂತೇಶ ಕಣವಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಾಸಕ ಮೌನ ಮುರಿದು ನಿಲುವು ತಿಳಿಸಲಿ: ಪ್ರಸಾದ ಹೆಗಡೆ
ಇಂದು ಮೋಹನ ಲಿಂಬಿಕಾಯಿ ನಾಮಪತ್ರ ಸಲ್ಲಿಕೆ: ಶಾಸಕ ಎಚ್‌.ಕೆ. ಪಾಟೀಲ