ಶಿಕ್ಷಣ ಪ್ರತಿಯೊಬ್ಬರ ಹಕ್ಕು। ಹಕ್ಕು ನೀಡುವ ಶಿಕ್ಷಕರ ಬದುಕನ್ನೂ ಬೆಳಗಿಸಬೇಕು
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಯಾರೇ ಆಗಲಿ ಐಎಎಸ್ ಅಧಿಕಾರಿ ಆಗಲು ಅದಕ್ಕೆ ಮೂಲ ಕಾರಣಕರ್ತರು ಶಿಕ್ಷಕರು, ಉಪನ್ಯಾಸಕರೇ ಆಗಿರುತ್ತಾರೆ. ಅಂತಹ ಗುರುಗಳೇ ದೇಶವನ್ನು ರೂಪಿಸುವವವರು ಅವರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲಾ ಜನಪ್ರತಿನಿಧಿಗಳು ಸೇರಿದಂತೆ ಸರ್ಕಾರ ಶ್ರಮಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಹೇಳಿದರು.
ನಗರದ ಎಂಇಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ಹಾಗೂ ಜಿಲ್ಲಾ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯರು ಆರು ವರ್ಷಗಳ ಕಾಲ ತಮ್ಮ ಅಧಿಕಾರ ಮುಗಿಸಿ ಹೋದ ನಂತರ ಪಿಂಚಣಿ ನೀಡುತ್ತಾರೆ. ಆದರೆ, ಅನುದಾನಿತ ಶಾಲೆ ಹಾಗೂ ಕಾಲೇಜುಗಳ ಸಿಬ್ಬಂದಿ 40 ವರ್ಷ ಸೇವೆ ಸಲ್ಲಿಸಿದರು ಪಿಂಚಣಿ ಸಿಗುತ್ತಿಲ್ಲ. ಅವರು ಯಾರು ಐಷಾರಾಮಿ ಜೀವನ ನಡೆಸಲು ಪಿಂಚಣಿ ಕೇಳುತ್ತಿಲ್ಲ ಎಂದು ಹೇಳಿದರು.ಸುದೀರ್ಘ ಕೆಲಸ ಮಾಡಿದವರಿಗೆ ನೆಮ್ಮದಿ ಬದುಕು ನೀಡಲು ಪಿಂಚಣಿ ನೀಡಲೇಬೇಕು. ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಸುಧೀರ್ಘ ಸೇವೆ ಸಲ್ಲಿಸಿದರು ಎನ್‌ಪಿಎಸ್ ಅಥವಾ ಓಪಿಎಸ್ ಸಿಗುತ್ತಿಲ್ಲ. ಇದನ್ನು ಪ್ರತಿ ಯೊಬ್ಬ ಜನಪ್ರತಿನಿಧಿಯೂ ಪ್ರಶ್ನೆ ಮಾಡಬೇಕಿದೆ ಎಂದರು.
ನಿಮ್ಮ ಹಕ್ಕುಗಳಿಗೆ ನೀವು ಹೋರಾಟ ಆರಂಭಿಸಿದಾಗ ಅಂದು ಯಾರು ವಿರೋಧ ಪಕ್ಷದಲ್ಲಿ ಇರುತ್ತಾರೋ ಅವರು ಬಂದು ನಿಮ್ಮ ಸಮಸ್ಯೆ ಆಲಿಸುತ್ತಾರೆ. ಸಮಸ್ಯೆ ಆಲಿಸುವುದು ಮುಖ್ಯವಲ್ಲ ಸಮಸ್ಯೆ ಬಗೆಹರಿಸುವುದು ಮುಖ್ಯವಾಗಬೇಕು ಎಂದರು.ಗೋವಾ ಹಾಗೂ ಆಂಧ್ರಪ್ರದೇಶದಲ್ಲಿ ಅನುದಾನಿತ ಶಾಲಾ ಶಿಕ್ಷಕರು ಹಾಗೂ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸರ್ಕಾರ ವಿಲೀನ ಮಾಡಿಕೊಂಡಿದೆ. ಇದನ್ನೇ ಕರ್ನಾಟಕದಲ್ಲಿಯೂ ಅನ್ವಯಿಸಲು ಯಾವುದೇ ಸಮಸ್ಯೆ ಇಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಶಿಕ್ಷಕರು ಎಂದೆಂದಿಗೂ ಗುರುಗಳೇ. ಗುರುಗಳು ಮಾಡುವ ಸೇವೆಯನ್ನು ಸೇವೆ ಎಂದು ಪರಿಗಣಿಸುವ ಜೊತೆಗೆ ಅವರಿಗೆ ಸಿಗಬೇಕಾದ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.ಜಟಿಲ ಸಮಸ್ಯೆಗಳಿಂದ ಹೊರಬರಲು ಸಂಘಟನೆ ಅಗತ್ಯ. ಸಂಘಟನೆ ಗಟ್ಟಿಯಾದಾಗ ಸಮಸ್ಯೆಗಳನ್ನು ಸರ್ಕಾರದ ಮುಂದೆ ತಂದು ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಅನುದಾನಿತ ಕಾಲೇಜುಗಳ ಉಪನ್ಯಾಸಕರ ಸಂಘ ಆರಂಭ ಗೊಂಡಿರುವುದು ಸ್ವಾಗತಾರ್ಹ ಎಂದರು.
ರಾಜ್ಯದಲ್ಲಿ ಶಿಕ್ಷಕರ ಹಾಗೂ ಉಪನ್ಯಾಸಕರ ಪರವಾಗಿ ವಿಧಾನ ಪರಿಷತ್ ಸದಸ್ಯ ಎಸ್. ಎಲ್.ಭೋಜೇಗೌಡ ಗಟ್ಟಿಯಾದ ಧ್ವನಿ ಎತ್ತಿದ್ದಾರೆ. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಶಿಕ್ಷಣ, ಆರೋಗ್ಯ ಹಾಗೂ ಬದುಕಿನ ಬಗ್ಗೆ ಹೆಚ್ಚು ಒತ್ತು ಕೊಡುತ್ತವೆ. ಈ ನಿಟ್ಟಿನಲ್ಲಿ ಅನುದಾನಿತ ಕಾಲೇಜುಗಳ ಉಪನ್ಯಾಸಕರ ಸಮಸ್ಯೆ ಬಗ್ಗೆಹರಿಸಲು ವಿಧಾನ ಮಂಡಲದಲ್ಲಿ ವಿಷಯ ಪ್ರಸ್ತಾಪಿಸುವ ಭರವಸೆ ನೀಡಿದರು.ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಆಂಧ್ರ ಪ್ರದೇಶ ಹಾಗೂ ಗೋವಾದಲ್ಲಿ ಅನುದಾನಿತ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಸರ್ಕಾರಿ ಹುದ್ದೆಗಳಿಗೆ ವಿಲೀನಗೊಳಿಸಲಾಗಿದೆ. ಅಲ್ಲಿ ಹೇಗೆ ವಿಲೀನ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ತರಿಸಿಕೊಂಡು ನಾವು ಚರ್ಚೆ ಮಾಡಿ ನಮ್ಮ ರಾಜ್ಯದಲ್ಲಿಯೂ ಅದನ್ನು ಅನುಷ್ಠಾನಕ್ಕೆ ತರಲು ಕ್ರಮ ಕೈಗೊಳ್ಳಬೇಕಿದೆ ಎಂದರು.
ಅನುದಾನಿತ ಶಾಲೆಗಳ ಶಿಕ್ಷಕರು ಹಾಗೂ ಕಾಲೇಜುಗಳ ಉಪನ್ಯಾಸಕರನ್ನು ವಿಲೀನಗೊಳಿಸಿಕೊಂಡಾಗ ಆರ್ಥಿಕ ಹೊರೆಯಾಗುತ್ತದೆಯೇ? ಅಥವಾ ಇನ್ನೇನಾದರೂ ಸಮಸ್ಯೆ ಇದೆಯೇ ಎಂಬುವ ಬಗ್ಗೆ ಚರ್ಚೆ ಮಾಡಬೇಕಿದೆ. ಈ ಬಗ್ಗೆ ವಿಧಾನ ಮಂಡಲದ ಅಧಿವೇಶನದಲ್ಲಿ ಚರ್ಚೆ ನಡೆಸುವ ಭರವಸೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ಅಧ್ಯಕ್ಷ ಡಾ. ಎಚ್.ಹರೀಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಜಂಟಿ ನಿರ್ದೇಶಕ ಮಹಾಲಿಂಗಯ್ಯ, ಸಂಘದ ಜಿಲ್ಲಾಧ್ಯಕ್ಷ ಲೋಹಿತ್, ಪ್ರಮುಖರಾದ ನಾಗರಾಜರಾವ್ ಕಲ್ಕಟ್ಟೆ, ತಸ್ಲಿಮಾ ಫಾತಿಮಾ ಉಪಸ್ಥಿತರಿದ್ದರು.29 ಕೆಸಿಕೆಎಂ 1ಚಿಕ್ಕಮಗಳೂರಿನ ಎಂಇಎಸ್ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯ ಅನುದಾನಿತ ಪದವಿಪೂರ್ವ ಕಾಲೇಜುಗಳ ನೌಕರರ ಸಂಘದ ರಾಜ್ಯ ಕಾರ್ಯಕಾರಣಿ ಸಭೆ ಹಾಗೂ ಜಿಲ್ಲಾ ಘಟಕದ ಉದ್ಘಾಟನೆ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ, ನಾಗರಾಜರಾವ್ ಕಲ್ಕಟ್ಟೆ, ಲೋಹಿತ್ ಇದ್ದರು.