ಜನರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯವಹಿಸಿದೆ: ಆರೋಪ
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸರ್ಕಾರದ ಪ್ರಚಾರದ ಹಪಾಹಪಿತನದಿಂದ ಸಂಭವಿಸಿದ ಸಾವು. ಜನ ಸೇರಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಸರ್ಕಾರವೇ ಈ ಕಾರ್ಯಕ್ರಮ ಘೋಷಿಸಿತ್ತು. ಆದರೂ ಜನರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಳ್ಳದೆ ಸರ್ಕಾರ ನಿರ್ಲಕ್ಷ್ಯವಹಿಸಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಸರ್ಕಾರಕ್ಕೆ ಜನರ ರಕ್ಷಣೆ ಆದ್ಯತೆಯಾಗಬೇಕಿತ್ತೇ ಹೊರತು ಪ್ರಚಾರದ ತೆವಲು ಅಲ್ಲ. ಈ ದುರಂತಕ್ಕೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ನೈತಿಕ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಮಹಿಳೆಯೊಬ್ಬಳು ಮೃತಪಟ್ಟಿದ್ದಕ್ಕೆ ತೆಲುಗು ನಟ ಅಲ್ಲು ಅರ್ಜುನ್ ಎ1 ಮಾಡಿ ಜೈಲಿಗೆ ಹಾಕಿದ್ದರು. ಈಗ ನೀವೇ ಜೈಲಿಗೆ ಹೋಗಬೇಕು. ಮಾನ ಮಾರ್ಯಾದೆ ಇದ್ದರೆ ರಾಜೀನಾಮೆ ಕೊಡಿ. ಬೇರೆಯವರ ಪ್ರಕರಣಗಳಾದಾಗ ಸಂವಿಧಾನ ಕಾನೂನು ಎನ್ನುವ ನೀವು ನಿಮ್ಮದೇ ಪ್ರಯೋಜಿತಾ ಸಾವುಗಳಾದಾಗ ಅದು ನಮ್ಮದಲ್ಲ ಅಂತ ಕಾಗಕ್ಕ-ಗೂಬಕ್ಕನ ಕಥೆ ಹೇಳೋಕೆ ಶುರು ಮಾಡುತ್ತೀರಿ ಎಂದು ಹರಿಹಾಯ್ದರು.ನ್ಯಾಯಾಂಗ ತನಿಖೆಯಾಗಲಿ:ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ. ರವಿ ಮ್ಯಾಜಿಸ್ಟ್ರೇಟ್ ತನಿಖೆಯನ್ನು ವಿರೋಧಿಸಿದ್ದು, ಈ ಪ್ರಕರಣದ ತನಿಖೆಯನ್ನು ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು ಕಾಲ್ತುಳಿತದಲ್ಲಿ ಮಕ್ಕಳು, ಮೊಮ್ಮಕ್ಕಳನ್ನು ಕಳೆದುಕೊಂಡವರ ಶಾಪ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ತಟ್ಟುತ್ತದೆ ಎಂದು ಸಿ.ಟಿ.ರವಿ ಹೇಳಿದರು.
ನಾನು ಆರ್‌ಸಿಬಿ ವಿರುದ್ಧ ಮಾತನಾಡಿಲ್ಲ. ಬದಲಿಗೆ ಆರ್‌ಸಿಬಿಯಲ್ಲಿ ಎಷ್ಟು ಮಂದಿ ಕನ್ನಡಿಗರು ಇದ್ದಾರೆ ಎಂದು ಕೇಳಿದ್ದೆನೆ. ನನ್ನ ಹಿಂದಿನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ ಎಂದು ಸಿ.ಟಿ.ರವಿ ತಿಳಿಸಿದರು.