ಪೂರ್ವ ಪ್ರಾಥಮಿಕ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಜಯವೀರ ಮಾತೆ ಚರ್ಚ್ ಧರ್ಮಗುರು ಅವಿನಾಶ್ ಚಾಲನೆ ನೀಡಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ವೆಂಕಟೇಶ್ವರ ಬ್ಲಾಕ್ ಅಂಗನವಾಡಿ ಕೇಂದ್ರದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ 2025-26ನೇ ಸಾಲಿನ ಪೂರ್ವ ಪ್ರಾಥಮಿಕ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ ಜಯವೀರಮಾತೆ ಚರ್ಚ್ ನ ಧರ್ಮಗುರು ಅವಿನಾಶ್ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಅಂಗನವಾಡಿ ಕೇಂದ್ರಗಳಲ್ಲಿಯೇ ಮಕ್ಕಳ ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರ ನೀಡಲು ಮುಂದಾಗಿರುವುದು ಒಳ್ಳೆಯ ಕೆಲಸ. ಇದರಿಂದಾಗಿ ಎಲ್ಲರೂ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಅಂಗನವಾಡಿ ಕಾರ್ಯಕರ್ತೆಯರು ಬೆಳಗ್ಗಿನಿಂದಲೂ ತುಂಬಾ ಶ್ರಮವಹಿಸಿ ಮನೆ ಮನೆಗಳಿಗೆ ತೆರಳಿ ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಕರೆತಂದು ಶಿಕ್ಷಣ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.ಸಿಡಿಪಿಒ ಶ್ರೀದೇವಿ ಮುದೋಳ ಅವರು ಮಾತನಾಡಿ, ಸರ್ಕಾರದಿಂದ ತಾಲೂಕಿನ 10 ಕೇಂದ್ರಗಳಲ್ಲಿ ಅಂಗನವಾಡಿ ಹಂತದಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸುತ್ತಿದೆ. ಇದರಿಂದಾಗಿ ಬಡಜನರು ಗುಣಮಟ್ಟದ ಪ್ರಾಥಮಿಕ ಶಿಕ್ಷಣವನ್ನು ಪಡೆಯಲು ಅನುಕೂಲವಾಗುವುದು. ಸ್ಮಾರ್ಟ್ ಟಿವಿ ಸೇರಿದಂತೆ ಸರ್ಕಾರದ ನೀಡುತ್ತಿರುವ ಎಲ್ಲ ಸವಲತ್ತುಗಳನ್ನು ಅಂಗನವಾಡಿಗಳಿಗೆ ತಲುಪಿಸಲಾಗುವುದು. ಗುಣಮಟ್ಟದ ಆಹಾರವನ್ನು ನೀಡಲಾಗುವುದು ಎಂದು ತಿಳಿಸಿದರು.ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜಾ ಮಾತನಾಡಿ, ಅಂಗನವಾಡಿ ಮತ್ತು ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ಸಾಕಷ್ಟು ಜನರು ದೇಶದಲ್ಲಿ ಐಎಎಸ್. ಐಪಿಎಸ್ ಸೇರಿದಂತೆ ಸಾಕಷ್ಟು ಸಾಧನೆ ಮಾಡಿರುವುದನ್ನು ಕಾಣಬಹುದು. ಬಡವರು ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಅಂಗನವಾಡಿಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಪ್ರಾರಂಭಿಸಿದೆ. ಇದರ ಪ್ರಯೋಜನವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದರು.ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ಮೋಹಿನಿ, ಇಲಾಖೆ ಮೇಲ್ವಿಚಾರಕಿ ಸಾವಿತ್ರಿ, ಪ್ರಮುಖರಾದ ಮೀನಕುಮಾರಿ, ಪೋಷಕರ ಪಟ್ಟಣ ವ್ಯಾಪ್ತಿಯ ಕಾರ್ಯಕರ್ತರಾದ ತಾರಾ ಲೋಬೋ, ಜಗದಾಂಭ ಗುರುಪ್ರಸಾದ್, ಉಷಾ, ಪದ್ಮ, ಕಲಾ, ಅಶ್ವಿನಿ, ವನಜಾಕ್ಷಿ, ರೇಣುಕಾ ಪಾಲ್ಗೊಂಡಿದ್ದರು. ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.