ಕಾರವಾರ: ತ್ಯಾಗ, ಬಲಿದಾನದ ಸಂಕೇತವಾದ ಬಕ್ರಿದ್ ಹಬ್ಬವನ್ನು ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದದಿಂದ ಆಚರಿಸುವಂತೆ ಎಲ್ಲ ಸಮುದಾಯಗಳ ಮುಖಂಡರಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ತಿಳಿಸಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಗೆ ಯಾವುದೇ ರೀತಿಯ ಅಡಚಣೆಯಾಗದಂತೆ ಸಾಂಪ್ರದಾಯಿಕ ರೀತಿಯಲ್ಲಿ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದೇ, ಶಾಂತಿಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಇದಕ್ಕಾಗಿ ಜಿಲ್ಲಾಡಳಿತದಿದ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಬಕ್ರೀದ್ ಸಮಯದಲ್ಲಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಆದ್ಯತೆ ನೀಡಿ, ಅದನ್ನು ವ್ಯವಸ್ಥಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವಂತೆ ನಗಾಭಿವೃದ್ಧಿಕೋಶದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪಶುಪಾಲನೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿದ್ದು ಪೊಲೀಸ್ ಇಲಾಖೆಗೆ ಅಗತ್ಯವಿರುವ ಎಲ್ಲಾ ರೀತಿಯ ಸಹಕಾರ ನೀಡುವಂತೆ ತಿಳಿಸಿದರು.ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಾಟ ತಡೆಗೆ ಪೊಲೀಸ್ ಇಲಾಖೆಯಿಂದ 24 ಕಡೆ ಚೆಕ್ ಪೋಸ್ಟ್ ತೆರೆಯಲಾಗಿದೆ. ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಭಾಗಿಯಾದವರಿಗೆ 7 ವರ್ಷಗಳ ಕಾಲ ಜೈಲು ಶಿಕ್ಷೆ ಮತ್ತು ₹10 ಲಕ್ಷ ತನಕ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.
ಎಸ್ಪಿ ನಾರಾಯಣ್ ಎಂ. ಮಾತನಾಡಿ, ಬಕ್ರಿದ್ ಸಮಯದಲ್ಲಿ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ಕಾಪಾಡಲು ಎಲ್ಲ ತಾಲೂಕುಗಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಂತಿ ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಾದ್ಯಂತ ಪ್ರಾರ್ಥನಾ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಕೆ ಮತ್ತು ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ಕೂಡಾ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ 24*7 ನಿಗಾವಹಿಸಲಾಗಿದೆ. ಬಕ್ರೀದ್ ಪ್ರಯುಕ್ತ 4 ದಿನಗಳ ಕಾಲ ಹೆಚ್ಚಿನ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕೋಮು ಪ್ರಚೋದಕ ಭಾಷಣದ ವಿರುದ್ದ ನಿಗಾ ವಹಿಸಲಾಗಿದ್ದು, ಯಾವುದೇ ಕಾನೂನು ಉಲ್ಲಂಘನೆಯ ಚಟುವಟಿಕೆಗಳು ಕಂಡು ಬಂದಲ್ಲಿ ಸಾರ್ವಜನಿಕರು ಕೂಡಲೇ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ತಿಳಿಸಿದರು. ಕಾನೂನು ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ, ಜಗದೀಶ್, ಜಿಪಂ ಉಪ ಕಾರ್ಯದರ್ಶಿ ಪ್ರಕಾಶ್ ಹಾಲಮ್ಮನವರ್ ಮತ್ತಿತರರು ಇದ್ದರು.