ಗ್ಯಾರಂಟಿ ಪರಿಷ್ಕರಣೆ ಬಜೆಟ್ ಕೊರತೆ ನೀಗಿಸಲು ಸರ್ಕಾರದ ತಿಣುಕಾಟ: ಎನ್.ಮಹೇಶ್

KannadaprabhaNewsNetwork |  
Published : Jul 03, 2026, 01:45 AM IST
2ಕೆಎಂಎನ್ ಡಿ11 | Kannada Prabha

ಸಾರಾಂಶ

ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ನೀಡಿದರೆ ಖಾಸಗೀಕರಣ ನಿಂತು ಹೋಗುತ್ತದೆ. ಶಿಕ್ಷಣ ವ್ಯವಸ್ಥೆ ಮಾರಾಟ ಮಾಡುವುದಲ್ಲ. ಇದಕ್ಕೆ ಸಚಿವರು ಬೆಂಬಲ ಕೊಡುವುದಿಲ್ಲ. ಶಿಕ್ಷಣ ವ್ಯಾಪಾರೀಕರಣವಾದರೆ ರೈತರು, ಬಡ ಮಕ್ಕಳ ಭವಿಷ್ಯದ ಕಥೆ ಏನು..?

ಕನ್ನಡಪ್ರಭ ವಾರ್ತೆ ಮಂಡ್ಯ

ಗ್ಯಾರಂಟಿ ಪರಿಷ್ಕರಣೆ ಮೂಲಕ ಬಜೆಟ್ ಕೊರತೆ ನೀಗಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ತಿಣುಡುತ್ತಿದೆ. ಇದರಿಂದ ಹೊರ ಬರಲಾಗದೆ ಎಡವಿ ಬಿದ್ದು 2028ರ ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಮನೆಗೆ ಹೋಗುತ್ತಾರೆ ಎಂದು ಮಾಜಿ ಸಚಿವ ಎನ್.ಮಹೇಶ್ ಭವಿಷ್ಯ ನುಡಿದರು.

ನಗರದ ಗಾಂಧಿ ಭವನದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆಯಿಂದ ಇಂದಿನ ಶಿಕ್ಷಣದಲ್ಲಿ ದೇಶದ ಪ್ರಗತಿಯ ಒಂದು ಚಿಂತನೆ ವಿಚಾರ ಸಂಕಿರಣದಲ್ಲಿ ಮಾತನಾಡಿ, ಈ ಸರ್ಕಾರಕ್ಕೆ ಗ್ಯಾರಂಟಿ ಯೋಜನೆ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಮತಗಳಿಕೆಗಾಗಿ ಚುನಾವಣೆಯಲ್ಲಿ ಘೋಷಣೆ ಮಾಡಿದರು. ಈಗ ಕೊಡಲಾಗದೆ ಪರದಾಡುತ್ತಿದ್ದಾರೆ ಎಂದು ಟೀಕಿಸಿದರು.

ಗ್ಯಾರಂಟಿಯಲ್ಲಿ ಅರ್ಹರು, ಅನರ್ಹರು ಕಂಡು ಹಿಡಿಯುತ್ತಿದ್ದಾರೆ. ಪರಿಷ್ಕರಣೆ ಮೂಲಕ ಬಜೆಟ್ ಕೊರತೆ ನೀಗಿಸಲು ಕೆಲಸ ಮಾಡುತ್ತಿದ್ದಾರೆ. ಅದು ಸಾಧ್ಯವಾಗದೆ ವಿಫಲವಾಗಿ ಮನೆಗೆ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

ಪ್ರಸ್ತುತ ಖಾಸಗಿ ಶಿಕ್ಷಣ ಬೆಳೆಯುತ್ತಿದೆ. ಸರ್ಕಾರಿ ಶಿಕ್ಷಣ ಕುಸಿಯುತ್ತಿದೆ. ಸರ್ಕಾರ ಆರೋಗ್ಯ ಮತ್ತು ಶಿಕ್ಷಣವನ್ನು ಉಚಿತವಾಗಿ ನೀಡಬೇಕು. ಎಲ್ಲರಿಗೂ ಉಚಿತ ಸೇವೆ ಸಿಗುವಂತಾಗಬೇಕು. ಶಿಕ್ಷಣಕ್ಕೆ ಬೀಳುವ ಖರ್ಚನ್ನು ತೆರಿಗೆ ರೂಪದಲ್ಲಿ ಸಂಗ್ರಹ ಮಾಡಬೇಕು ಎಂದರು.

ಆರೋಗ್ಯ, ಶಿಕ್ಷಣವನ್ನು ಉಚಿತವಾಗಿ ನೀಡಿದರೆ ಖಾಸಗೀಕರಣ ನಿಂತು ಹೋಗುತ್ತದೆ. ಶಿಕ್ಷಣ ವ್ಯವಸ್ಥೆ ಮಾರಾಟ ಮಾಡುವುದಲ್ಲ. ಇದಕ್ಕೆ ಸಚಿವರು ಬೆಂಬಲ ಕೊಡುವುದಿಲ್ಲ. ಶಿಕ್ಷಣ ವ್ಯಾಪಾರೀಕರಣವಾದರೆ ರೈತರು, ಬಡ ಮಕ್ಕಳ ಭವಿಷ್ಯದ ಕಥೆ ಏನು ಎಂದು ಪ್ರಶ್ನಿಸಿದರು.

ಮಂಡ್ಯ ಜಿಲ್ಲೆಯಲ್ಲಿ 1989ರಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ.48ರಷ್ಟು ಫಲಿತಾಂಶ ಇತ್ತು. ಆ ಕಾಲದಲ್ಲಿ ನಾವು ನಕ್ಸಲೇಟ್ಸ್ ತರ ಇದ್ದೆವು. ಸಮಸ್ಯೆಗಳ ವಿರುದ್ಧ ಹೋರಾಡುವ ಕೆಲಸ ಮಾಡುತ್ತಿದ್ದೆವು. ವಿದ್ಯಾರ್ಥಿಗಳಿಗೆ ಮನೆ ಹಾಗೂ ಹಾಸ್ಟೆಲ್ ವಾತಾವರಣ ವ್ಯತ್ಯಾಸ ಬಿಟ್ಟರೆ ಸಾಧನೆ ಮಾಡುತ್ತಾನೆ ಎಂದರು.

ಖಾಸಗಿ ಶಾಲೆಗಳಲ್ಲಿ ಮಕ್ಕಳು ಒಳಗೆ ಹೋಗುವಾಗ ಒಂದು ರೀತಿ, ಹೊರಗೆ ಬರುವಾಗ ಜೈಲಿನಿಂದ ಹೊರ ಬಂದಾಗೆ ಖುಷಿಯಿಂದ ಬರುತ್ತಾರೆ. ಸರ್ಕಾರ ಡಿಪಿಪಿ ಯೋಜನೆ, ನಲಿಕಲಿ ಯೋಜನೆ ತಂದರು. ಜೊತೆಗೆ ಸಾಕ್ಷರತೆ ಯೋಜನೆಯನ್ನೂ ತಂದರು. ಶಿಕ್ಷಕರ ಮೇಲೆ ಮಕ್ಕಳ ದೃಷ್ಟಿ ಇರುತ್ತೆ. ಮಕ್ಕಳಿಗೆ ಚೈತನ್ಯ ನೀಡುವಂತಹ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

ಸರ್ಕಾರಿ ಶಾಲೆಗಳಲ್ಲಿ ನಲಿಕಲಿ ಪದ್ಧತಿ ಬರಬೇಕು. ಮಕ್ಕಳಿಗೆ ಕ್ರಿಯಾತ್ಮಕ ಶಿಕ್ಷಣ ನೀಡಬೇಕು. ಮಕ್ಕಳು ಹಾಗೂ ಶಿಕ್ಷಕರ ಬಾಂಧವ್ಯ ತಾಯಿ-ಮಗನ ರೀತಿ ಇದ್ದಾಗ ಮಾತ್ರ ಮಕ್ಕಳಲ್ಲಿ ಶಿಕ್ಷಣ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು 72 ಸಾವಿರ ಉದ್ಯೋಗ ಘೋಷಣೆ ಮಾಡಿದ್ದಾರೆ. ಒಂದು ಕೋಟಿ ಜನ ಅರ್ಜಿ ಹಾಕುತ್ತಾರೆ. ಇದರಲ್ಲಿ ಶೇ.2ರಷ್ಟು ಮಾತ್ರ ಸರ್ಕಾರಿ ಉದ್ಯೋಗ ಸಾಧ್ಯ ಅಷ್ಟೆ. ಉಳಿದಂತೆ ಖಾಸಗಿಯಾಗಿ ಶೇ.10ರಷ್ಟು ಇದೆ. ಇದಕ್ಕೂ ಕಮ್ಯುನಿಕೇಷನ್ ಸ್ಕಿಲ್ ಬರಬೇಕು. ಕಂಪ್ಯೂಟರ್ ಜ್ಞಾನವೂ ಅಗತ್ಯವಿದೆ. ಆದರೆ, ಶಿಕ್ಷಣ ಪಡೆದು ಶೇ.88 ರಷ್ಟು ಜನ ನಿರುದ್ಯೋಗಿ ಯುವಕರಾಗಿದ್ದಾರೆ ಎಂದು ವಿವರಿಸಿದರು.

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದ ಮಕ್ಕಳನ್ನು ಗುರುತಿಸಿ ಶಿಕ್ಷಣ ಕಲಿಸಿದರೆ ಮಾತ್ರ ಶೇ.100ರಷ್ಟು ಉದ್ಯೋಗ ನೀಡಲು ಸಾಧ್ಯ. ಪ್ರತಿಯೊಬ್ಬ ವ್ಯಕ್ತಿಯ ಪ್ರಗತಿಯಾದರೆ ದೇಶದ ಪ್ರಗತಿ ಸಾಧ್ಯ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸೇನೆ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಅಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಪುರುಷೋತ್ತಮ್ ಬಿಳಿಮಲೆ, ರೈತ ನಾಯಕ ಕುರುಬೂರು ಶಾಂತಕುಮಾರ್, ಬೆಟ್ಟಹಳ್ಳಿ ಮಂಜುನಾಥ್, ಮುನಿರಾಜೇಗೌಡ, ಸೌಭಾಗ್ಯ, ಶಿವಲಿಂಗು, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ರಾಮಮಂದಿರದ ಹುಂಡಿ ಕಳ್ಳತನ ವಿಚಾರ ನೋವಿನ ಸಂಗತಿ

ಮಂಡ್ಯ: ಅಯೋಧ್ಯೆ ರಾಮಮಂದಿರದ ಹುಂಡಿ ಕಳ್ಳತನ ವಿಚಾರ ಬಹಳ ಅನ್ಯಾಯ, ನೋವಿನ ಸಂಗತಿ. ನಂಬಿಕೆ ಪ್ರಶ್ನೆ. ದೇವರ ಮೇಲೆ ಇದ್ದ ನಂಬಿಕೆಗೆ ಡ್ಯಾಮೇಜ್ ಆಗಿದೆ ಎಂದು ಮಾಜಿ ಸಚಿವ ಎನ್.ಮಹೇಶ್ ವ್ಯಾಖ್ಯಾನಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯೋಧ್ಯೆ ರಾಮಂದಿರ ಭಕ್ತರ ಶ್ರದ್ಧಾಕೇಂದ್ರವಾಗಿದೆ. ಇದಕ್ಕೆ ಅಪಚಾರ ಮಾಡುವುದು ಸರಿಯಲ್ಲ. ಅಪರಾಧಿಗಳಿಗೆ ಕಾನೂನಿನನ್ವಯ ಖಂಡಿತಾ ಕ್ರಮ ಆಗುತ್ತದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ. ರಾಜ್ಯಾಧ್ಯಕ್ಷರಾಗಿ ಬಿ.ವೈ.ವಿಜಯೇಂದ್ರ ಅವರೇ ಇದ್ದಾರೆ. ಮುಂದೆಯೂ ಇರುತ್ತಾರೆ. ಇದರಲ್ಲಿ ಯಾವ ಅನುಮಾನವೂ ಬೇಡ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಅಡ್ಡ ಮತದಾನದ ವಿಚಾರಕ್ಕೆ ಸಂಬಂಸಿದಂತೆ ಸಿ.ಟಿ.ರವಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದ್ದರು. ಸಮಿತಿ ಅಧ್ಯಯನ ನಡೆಸಿ ವರದಿಯನ್ನು ರಾಜ್ಯಾಧ್ಯಕ್ಷರಿಗೆ ಕೊಟ್ಟಿದ್ದೇವೆ. ರಾಜ್ಯಾಧ್ಯಕ್ಷರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಂಬೇಡ್ಕರ್ ಸಂವಿಧಾನ ವಿಶ್ವಕ್ಕೆ ಶ್ರೇಷ್ಠ : ಸೋಮಶೇಖರ್‌
ಬಂಡೀಪುರ ಸಫಾರಿ ಕೇಂದ್ರ, ಶಾಲೆ ದೇಗುಲಕ್ಕೆ ಡೀಸಿ ಭೇಟಿ: ಪರಿಶೀಲನೆ