ಸರ್ಕಾರದಿಂದ ಜನೌಷಧಿ ಬಂದ್‌ : ಬಿಜೆಪಿ ಕಿಡಿ

KannadaprabhaNewsNetwork |  
Published : May 30, 2025, 11:52 PM ISTUpdated : May 31, 2025, 12:16 PM IST
ಚಿತ್ರದುರ್ಗದಲ್ಲಿ ಬಿಜೆಪಿಯಿಂದ ಪ್ರತಿಭಟನೆ | Kannada Prabha

ಸಾರಾಂಶ

ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಕೂಡಲೇ ಹಿಂಪಡೆಯುವಂತ ಬಿಜೆಪಿ ಆಗ್ರಹ

 ಬೆಂಗಳೂರು : ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳನ್ನು ಮುಚ್ಚಲು ರಾಜ್ಯ ಸರ್ಕಾರ ಹೊರಡಿಸಿದ ಆದೇಶ ಕೂಡಲೇ ಹಿಂಪಡೆಯುವಂತ ಬಿಜೆಪಿ ಆಗ್ರಹಿಸಿದ್ದು, ಶುಕ್ರವಾರ ಪಕ್ಷದ ವತಿಯಿಂದ ಬೆಂಗಳೂರು, ಬಳ್ಳಾರಿ, ವಿಜಯನಗರ, ಹೊಸಪೇಟೆ, ಕೊಪ್ಪಳ, ಹಾವೇರಿ, ಮೈಸೂರು, ತುಮಕೂರು, ಚಿಕ್ಕಮಗಳೂರು, ಬೀದರ್‌, ರಾಮನಗರ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆದಿದೆ.

ಬೆಂಗಳೂರಿನ ಕೆ.ಸಿ.ಜನರಲ್‌ ಆಸ್ಪತ್ರೆ ಆವರಣದಲ್ಲಿ ಮಾಜಿ ಡಿಸಿಎಂ ಡಾ.ಅಶ್ವತ್ಥ್‌ನಾರಾಯಣ್‌ ಅವರ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿ, ತನ್ನ ಆದೇಶವನ್ನು ವಾಪಸ್‌ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿತು.

ಯಾದಗಿರಿಯ ಹಳೇ ಜಿಲ್ಲಾ ಆಸ್ಪತ್ರೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ನಡೆಸಿದರು. ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದಲ್ಲಿ ಸೇರಿದ್ದ ಬಿಜೆಪಿಗರು ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಧಿಕ್ಕಾರ ಕೂಗಿ, ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಕಲಬುರಗಿ ಜಿಮ್ಸ್ ಆಸ್ಪತ್ರೆಯ ಜನ ಔಷಧಿ ಕೇಂದ್ರದ ಮುಂಭಾಗದಲ್ಲಿಯೇ ಬಿಜೆಪಿ ಮುಖಂಡರು ಕೈಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸಿದರು. ಶಾಸಕ ಅವಿನಾಶ್ ಜಾಧವ್, ಎಂಎಲ್‌ಸಿ ಬಿ.ಜಿ.ಪಾಟೀಲ್‌ ಪಾಲ್ಗೊಂಡಿದ್ದರು.

ಚಿಕ್ಕಮಗಳೂರು ಜಿಲ್ಲಾಸ್ಪತ್ರೆ ಮುಂಭಾಗದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ ಪಕ್ಷದ ಮುಖಂಡರು, ಪ್ರಧಾನಿ ಮೋದಿ ಅವರ ಜನಪರ ಆಡಳಿತ ಹಾಗೂ ಆಸ್ಪತ್ರೆಗಳಲ್ಲಿನ ಫ್ಲೆಕ್ಸ್‌ಗಳನ್ನು ಜನರ ಮನಸ್ಸಿನಿಂದ ಹೊರ ಹಾಕಲು ಕಾಂಗ್ರೆಸ್‌ ಹುನ್ನಾರ ನಡೆಸಿದೆ. ರಾಜ್ಯ ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಕಾಳಜಿಯಿದ್ದಲ್ಲಿ 6ನೇ ಗ್ಯಾರಂಟಿಯಾಗಿ ಉಚಿತ ಶಿಕ್ಷಣ, ಆರೋಗ್ಯ ಸೇವೆ ಒದಗಿಸಲಿ ಎಂದರು.

ಬೀದರ್‌ ಜಿಲ್ಲೆಯ ಹುಮನಾಬಾದ ಸಾರ್ವಜನಿಕ ಆಸ್ಪತ್ರೆಯ ಮುಂಭಾಗಲ್ಲಿ ಕೈಗಳಿಗೆ ಕಪ್ಪುಪಟ್ಟಿ ಕಟ್ಟಿಕೊಳ್ಳುವುದ ಜತೆಗೆ ಬಾವುಟ ಪ್ರದರ್ಶನ ಮಾಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಔರಾದ್ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಸೇರಿದ ಕಾರ್ಯಕರ್ತರು, ಕೇಂದ್ರ ಸರ್ಕರ ಬಡ ರೋಗಿಗಳ ಅನುಕೂಲಕ್ಕಾಗಿ ಪ್ರಾರಂಭಿಸಿರುವ ಜನ ಔಷಧಿ ಕೇಂದ್ರಗಳನ್ನು ಮುಚ್ಚುವಂತೆ ರಾಜ್ಯ ಸರ್ಕಾರ ಆದೇಶ ನೀಡಿರುವುದು ಖಂಡನೀಯ. ಅವುಗಳನ್ನು ಯಥಾಪ್ರಕಾರ ಮುಂದುವರೆಸಬೇಕು ಎಂದು ಆಗ್ರಹಿಸಿದರು.

ಬಸವಕಲ್ಯಾಣ ಆಸ್ಪತ್ರೆ ಮುಂದೆ ಬಿಜೆಪಿಗರು ಕಪ್ಪು ಪಟ್ಟಿ ಕಟ್ಟಿಕೊಂಡು ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದರು. ಶಾಸಕ ಶರಣು ಸಲಗರ ಮಾತನಾಡಿ, ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ವೈದ್ಯರಾಗಿದ್ದು, ಬಡವರ ವಿರುದ್ಧವಾಗಿರುವ ಇಂತಹ ಕ್ರಮ ಕೈಗೊಳ್ಳಬಾರದಿತ್ತು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ