ಡಿ.ಕೆ. ಶಿವಕುಮಾರ್ ಕೈಗೊಂಬೆಯಾದ ರಾಜ್ಯ ಸರ್ಕಾರ

KannadaprabhaNewsNetwork | Published : Nov 26, 2023 1:15 AM

ಸಾರಾಂಶ

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಇಡೀ ಸರ್ಕಾರ ಡಿ.ಕೆ. ಶಿವಕುಮಾರ್ ಅವರ ಕಪಿಮುಷ್ಠಿಗೆ ಸಿಲುಕಿದಂತೆ ಕಾಣುತ್ತಿದೆ ಎಂದರು. ಇದೇ ವೇಳೆ ಜನಾರ್ದನ ರೆಡ್ಡಿ ಪಕ್ಷಕ್ಕೆ ಬಂದರೆ ಸ್ವಾಗತಿಸುವೆ. ಜನಾರ್ದನ ರೆಡ್ಡಿ ಸೇರಿದಂತೆ ಯಾರೇ ಬಂದರೂ ಪಕ್ಷದ ಬಲ ಹೆಚ್ಚುತ್ತದೆ ಎಂದು ಹೇಳಿದ್ದಾರೆ.

ಬಳ್ಳಾರಿ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯ ಸರ್ಕಾರವನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಆರೋಪಿಸಿದ್ದಾರೆ.

ಡಿ.ಕೆ. ಶಿವಕುಮಾರ್ ಅವರ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ವಹಿಸಿದ್ದ ನಿರ್ಧಾರವನ್ನು ಹಿಂದಕ್ಕೆ ಪಡೆದಿರುವ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶ್ರೀರಾಮುಲು, ಇಡೀ ಸರ್ಕಾರ ಡಿ.ಕೆ. ಶಿವಕುಮಾರ್ ಅವರ ಕಪಿಮುಷ್ಠಿಗೆ ಸಿಲುಕಿದಂತೆ ಕಾಣುತ್ತಿದೆ ಎಂದರು.

ಸರ್ಕಾರದ ಈ ನಿಲುವಿನಿಂದ ಸರ್ಕಾರ ಹಾಗೂ ನ್ಯಾಯಾಂಗ ವ್ಯವಸ್ಥೆ ನಡುವೆ ತಿಕ್ಕಾಟ ನಡೆದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಡಿ.ಕೆ. ಶಿವಕುಮಾರ್ ಅವರ ಹಿಡಿತಕ್ಕೆ ಸಿಕ್ಕಿ ಹಾಕಿಕೊಂಡಂತೆ ಕಾಣುತ್ತಿದೆ. ಸರ್ಕಾರವನ್ನು ಬುಗರಿಯಂತೆ ಆಡಿಸುತ್ತಿರುವ ಡಿ.ಕೆ. ಶಿವಕುಮಾರ್ ಅವರಿಗೆ ಹೋಲಿಕೆಯಾಗುವಂತೆ ಹೊಸದೊಂದು ಹಾಡು ಬರೆಯಬೇಕಾಗಿದೆ ಎಂದು ಟೀಕಿಸಿದರಲ್ಲದೆ, ಅವರು ತಪ್ಪು ಮಾಡಿಲ್ಲ ಎಂದಾದರೆ ಆರೋಪಮುಕ್ತರಾಗಿ ಬರುವ ವಿಶ್ವಾಸದಿಂದ ಇರಬೇಕಿತ್ತು. ಆದರೆ, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಪ್ರಕರಣದ ವಿಚಾರದಲ್ಲಿ ತೆಗೆದುಕೊಂಡಿರುವ ನಿಲುವು ನೋಡಿದರೆ, ಡಿ.ಕೆ. ಶಿವಕುಮಾರ್ ಅವರು ಇಡೀ ಸರ್ಕಾರವನ್ನು ತನ್ನ ಕೈಕೆಳಗೆ ಇಟ್ಟುಕೊಂಡಿರುವಂತೆ ಕಂಡು ಬರುತ್ತಿದೆ ಎಂದರು.

ಜೀನ್ಸ್‌ ಪಾರ್ಕ್ ಏನಾಯ್ತು?: ಚುನಾವಣೆ ಮುನ್ನ ಬಳ್ಳಾರಿಗೆ ಬಂದಿದ್ದ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ನಿರ್ಮಿಸಲಾಗುವುದು. ಇದಕ್ಕಾಗಿ ₹5 ಸಾವಿರ ಕೋಟಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಸರ್ಕಾರ ಅಧಿಕಾರಕ್ಕೆ ಬಂದು ಏಳು ತಿಂಗಳಾದರೂ ಈ ಬಗ್ಗೆ ಚಕಾರ ಎತ್ತಿಲ್ಲ. ಅವರು ಹೊಸದಾಗಿ ಜೀನ್ಸ್‌ ಪಾರ್ಕ್‌ ಮಾಡುವುದಿರಲಿ; ಹಳೆಯ ಜೀನ್ಸ್‌ಪಾರ್ಕ್‌ಗೆ ವಿದ್ಯುತ್ ಕೊಟ್ಟರೆ ಸಾಕು ಎಂದರು.

ಬಳ್ಳಾರಿಯಲ್ಲಿ ಜೀನ್ಸ್‌ ಪಾರ್ಕ್, ಒಣಮೆಣಸಿನಕಾಯಿ ಮಾರುಕಟ್ಟೆ ಸೇರಿದಂತೆ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಸದನದಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸುವಂತೆ ಪಕ್ಷದ ನಾಯಕರಿಗೆ ತಿಳಿಸಲಾಗುವುದು ಎಂದು ತಿಳಿಸಿದರು.

ಎಂಪಿ ಚುನಾವಣೆ ಸ್ಪರ್ಧೆ: ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಪಕ್ಷವು ಸಹ ಈ ವರೆಗೆ ಯಾವುದೇ ಸೂಚನೆ ನೀಡಿಲ್ಲ. ಬಳ್ಳಾರಿಯಿಂದ ಅಥವಾ ರಾಯಚೂರಿನಿಂದ ಸ್ಪರ್ಧಿಸುತ್ತಾರಂತೆ. ಸರ್ವೆ ಮಾಡಿದ್ದಾರಂತೆ ಎಂದು ಜನರು ಮಾತನಾಡುತ್ತಿದ್ದಾರೆಯೇ ಹೊರತು, ನಾನಾಗಲೀ, ಪಕ್ಷವಾಗಲೀ ಈ ಕುರಿತು ಯಾವುದೇ ನಿಲುವುಗಳನ್ನು ತೆಗೆದುಕೊಂಡಿಲ್ಲ. ಬಳ್ಳಾರಿ ಹಾಗೂ ರಾಯಚೂರಿನಲ್ಲಿ ಹಾಲಿ ಸಂಸದರಿದ್ದಾರೆ. ಯಾವುದೇ ನಿರ್ಧಾರವನ್ನು ಪಕ್ಷದ ಹೈಕಮಾಂಡ್ ತೆಗೆದುಕೊಳ್ಳಬೇಕೇ ವಿನಹ ವೈಯುಕ್ತಿಕ ನನ್ನ ನಿರ್ಧಾರ ಇರುವುದಿಲ್ಲ. ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಪಕ್ಷದ ಕಾರ್ಯಕರ್ತನಾಗಿ ಗೆಲ್ಲಿಸಿಕೊಂಡು ಬರುವ ಕೆಲಸ ನನ್ನದು ಎಂದು ಶ್ರೀರಾಮುಲು ತಿಳಿಸಿದರು. ರೆಡ್ಡಿ ವಿಚಾರ ವಿಜಯೇಂದ್ರಗೆ: ಜನಾರ್ದನ ರೆಡ್ಡಿ ಪಕ್ಷಕ್ಕೆ ಬಂದರೆ ಸ್ವಾಗತಿಸುವೆ. ಜನಾರ್ದನ ರೆಡ್ಡಿ ಸೇರಿದಂತೆ ಯಾರೇ ಬಂದರೂ ಪಕ್ಷದ ಬಲ ಹೆಚ್ಚುತ್ತದೆ ಎಂದು ಶ್ರೀರಾಮುಲು ಹೇಳಿದರು.

ಜನಾರ್ದನ ರೆಡ್ಡಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಬಿಟ್ಟದ್ದು. ಒಬ್ಬ ಶ್ರೀರಾಮುಲು ಏನು ಮಾಡಲು ಸಾಧ್ಯವಿಲ್ಲ. ಎಲ್ಲರೂ ಸೇರಿದರೆ ಪಕ್ಷ ಬೆಳೆಯುತ್ತದೆ. ಆದರೆ, ಈ ವಿಚಾರ ಕುರಿತು ನನ್ನ ಬಳಿ ಈ ವರೆಗೆ ಯಾರೂ ಚರ್ಚಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ನಾವೆಲ್ಲ ಬೇರೆ ಬೇರೆಯಾಗಿದ್ದರೆ ಸೋಲುತ್ತೇವೆ. ಅವರೂ ಸೋತಿದ್ದಾರೆ. ಎಲ್ಲರೂ ಸೇರಿದರೆ ಮತ್ತೆ ಗೆಲುವು ಸಾಧ್ಯವಾಗುತ್ತದೆ. ಯಾವಾಗಲೂ ಒಗ್ಗೂಡಿದರಷ್ಟೇ ಶಕ್ತಿ ವೃದ್ಧಿಯಾಗುತ್ತದೆ. ಪಕ್ಷದ ಬೆಳವಣಿಗೆಗೆ ಎಲ್ಲರೂ ಜತೆಗಿರುವುದೇ ಹೆಚ್ಚು ಅನುಕೂಲ ಎಂದರಲ್ಲದೆ, ರೆಡ್ಡಿ ಬರುವಿಕೆಯಿಂದ ಪಕ್ಷಕ್ಕೆ ಹೆಚ್ಚು ಬಲ ಬರುತ್ತದೆ ಎಂದು ಶ್ರೀರಾಮುಲು ಸಮರ್ಥಿಸಿಕೊಂಡರು.

Share this article