70ರ ವಯಸ್ಸು ಉಸ್ಸಪ್ಪಾ ಎನ್ನುವ ಜನರ ನಡುವೆ, ಬೆಂಗಳೂರಿನ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌, ಯುವಕರೂ ನಾಚುವಂಥ ಸಾಧನೆ ಮಾಡಿದ್ದಾರೆ.  ಸ್ನೇಹಿತರ ಸಂಗಡ ಬೆಂಗಳೂರಿನಿಂದ ತಮಿಳುನಾಡಿನ ಕನ್ಯಾಕುಮಾರಿಯ ವರೆಗೆ 702 ಕಿ.ಮೀ. ಸೈಕಲ್‌ ಯಾತ್ರೆ ಪೂರೈಸಿದ್ದಾರೆ

 ಬೆಂಗಳೂರು: 70ರ ವಯಸ್ಸು ಉಸ್ಸಪ್ಪಾ ಎನ್ನುವ ಜನರ ನಡುವೆ, ಬೆಂಗಳೂರಿನ ರಾಜಾಜಿನಗರದ ಬಿಜೆಪಿ ಶಾಸಕ ಸುರೇಶ್‌ ಕುಮಾರ್‌, ಯುವಕರೂ ನಾಚುವಂಥ ಸಾಧನೆ ಮಾಡಿದ್ದಾರೆ. ಅಪರೂಪದ ನ್ಯೂರಾಲಾಜಿಕಲ್‌ ಸಮಸ್ಯೆಗೆ ತುತ್ತಾಗಿ ಕಳೆದ ವರ್ಷ ನಡೆದಾಡಲೂ ಆಗದ ಸ್ಥಿತಿಗೆ ತಲುಪಿದ್ದ ಸುರೇಶ್‌ ಕುಮಾರ್‌ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು. ಅದರ ಬೆನ್ನಲ್ಲೇ ಅವರು ಇದೀಗ ಸ್ನೇಹಿತರ ಸಂಗಡ ಬೆಂಗಳೂರಿನಿಂದ ತಮಿಳುನಾಡಿನ ಕನ್ಯಾಕುಮಾರಿಯ ವರೆಗೆ 702 ಕಿ.ಮೀ. ಸೈಕಲ್‌ ಯಾತ್ರೆ ಪೂರೈಸಿದ್ದಾರೆ. ಈ ಮೂಲಕ, ವಯಸ್ಸು ಅಥವಾ ಅನಾರೋಗ್ಯ ತಮ್ಮನ್ನು ತಡೆಯದು ಎಂಬುದನ್ನು ಸಾಬೀತುಪಡಿಸಿದ್ದಾರೆ.

ಡಿ.23ರ ಮುಂಜಾನೆ 4ರ ಹೊತ್ತಿಗೆ 12 ಸ್ನೇಹಿತರ ಜತೆಗೆ ಬೆಂಗಳೂರಿನ ಬಸವೇಶ್ವರ ನಗರದಲ್ಲಿ ಸೈಕಲ್‌ ಏರಿದ ಸುರೇಶ್‌ ಕುಮಾರ್‌ ಅವರ ‘ರಾಜಾಜಿನಗರ ಪೆಡಲ್‌ ಪವರ್‌’ ತಂಡ, 37 ಗಂಟೆಗಳ ಕಾಲ ಸೈಕ್ಲಿಂಗ್‌ ಮಾಡಿ, ಡಿ.27ರಂದು ಕನ್ಯಾಕುಮಾರಿ ತಲುಪಿದ್ದಾರೆ. ಮೊದಲ ದಿನ 8.25 ತಾಸಿನಲ್ಲಿ 157 ಕಿ.ಮೀ. ಕ್ರಮಿಸಿದ ಈ ಸೈಕ್ಲಿಸ್ಟ್‌ಗಳ ತಂಡ, 2ನೇ ದಿನ 8.35 ಗಂಟೆಯಲ್ಲಿ 159 ಕಿ.ಮೀ. ಪ್ರಯಾಣ ಮಾಡಿತು. 3ನೇ ದಿನ 8.15 ಗಂಟೆಗಳಲ್ಲಿ 155 ಕಿ.ಮೀ. ಹಾಗೂ 4ನೇ ದಿನ 8.20 ತಾಸುಗಳಲ್ಲಿ 73 ಕಿ.ಮೀ. ಪೆಡಲ್‌ ತುಳಿದು ಕನ್ಯಾಕುಮಾರಿ ತಲುಪಿದ್ದರು.

ಫೇಸ್‌ಬುಕ್‌ನಲ್ಲಿ ಇದರ ವಿಡಿಯೋ ಹಂಚಿಕೊಂಡ ಸುರೇಶ್‌ ಕುಮಾರ್‌, ‘ಕಳೆದ ವರ್ಷವೇ ಈ ಸಾಹಸ ಮಾಡಬೇಕು ಎಂದುಕೊಂಡಿದ್ದೆ. ಆದರೆ ಅನಾರೋಗ್ಯ ಅನುವುಮಾಡಿಕೊಟ್ಟಿರಲಿಲ್ಲ. ಆದರೆ ಇಂದು ಅತ್ಯಂತ ಸಂತಸದ ದಿನ. ನನ್ನಾಸೆ ಈಡೇರಿತು’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹದಗೆಟ್ಟಿದ್ದ ಆರೋಗ್ಯ:

2024ರ ಆಗಸ್ಟ್‌ನಲ್ಲಿ ಸುರೇಶ್‌ ಕುಮಾರ್‌ ಅವರು ಚಿಕನ್‌ಗುನ್ಯಾ ಎನ್ಸೆಫಲೋಪತಿ ಎಂಬ ಅತಿವಿರಳ ನರಸಂಬಂಧಿ ಕಾಯಿಲೆಗೆ ತುತ್ತಾಗಿದ್ದರು. ಪರಿಣಾಮವಾಗಿ ಸಂಪೂರ್ಣವಾಗಿ ಹಾಸಿಗೆ ಹಿಡಿದುಬಿಟ್ಟಿದ್ದರು. ಸುಮಾರು 2-3 ತಿಂಗಳು ಇದೇ ಸ್ಥಿತಿಯಲ್ಲಿದ್ದ ಅವರು ಮತ್ತೆ ಮೊದಲಿನಂತಾಗಲು ಸಹಕರಿಸಿದ್ದು ಅವರ ಸೈಕ್ಲಿಂಗ್‌ ಪ್ರೀತಿ. ಕೈಬೆರಳನ್ನೂ ಆಡಿಸಲು ಕಷ್ಟಪಡುತ್ತಿದ್ದ ಸುರೇಶ್‌ ಕುಮಾರ್‌, 2025ರ ಮಾರ್ಚ್‌ ವೇಳೆಗೆ ಸೈಕಲ್‌ ಏರಿ ಸವಾರಿ ಮಾಡುವಷ್ಟು ಚೇತರಿಸಿಕೊಂಡರು.

ಈ ಯಾತ್ರೆ ಮೊದಲಲ್ಲ:

ಸುರೇಶ್‌ ಕುಮಾರ್‌ ಅವರು ಬೆಂಗಳೂರು-ಕನ್ಯಾಕುಮಾರಿಗೆ ಸೈಕಲ್‌ ಯಾತ್ರೆ ಕೈಗೊಂಡಿರುವುದು ಮೊದಲ ಬಾರಿಯೇನಲ್ಲ. 1974ರಲ್ಲಿ ಸ್ವಾಮಿ ವಿವೇಕಾನಂದ ಶಿಲಾಸ್ಮಾರಕ ನಿರ್ಮಾಣದ ಸಮಯದಲ್ಲಿ ಅದನ್ನು ನೋಡಲು ಸೈಕಲ್‌ ಸವಾರಿ ಮಾಡಿಕೊಂಡು ಹೋಗಬೇಕು ಎಂಬಾಸೆ ಅವರಲ್ಲಿ ಮೂಡಿತ್ತು. ಅದರ ಈಡೇರಿಕೆಗಾಗಿ ಇಬ್ಬರು ಗೆಳೆಯರೊಂದಿಗೆ ಡಿ.25ರಂದು ಸೈಕಲ್‌ ಏರಿ ಹೊರಟು, 4 ದಿನಗಳ ಪ್ರವಾಸದ ಬಳಿಕ ಕನ್ಯಾಕುಮಾರಿ ತಲುಪಿದ್ದರು. ಈ ಸಾಹಸ ಮಾಡಿದ್ದು 50 ವರ್ಷಗಳ ಹಿಂದಾದರೂ, ಅದೇ ಸ್ಫೂರ್ತಿ ಹಾಗೂ ಹುರುಪನ್ನು ಸುರೇಶ್‌ ಅವರು ಇನ್ನೂ ಜೀವಂತವಾಗಿಸಿಕೊಂಡಿರುವುದು ಶ್ಲಾಘನೀಯ ಮತ್ತು ಅನುಕರಣೀಯ.

ಸೈಕ್ಲಿಂಗ್‌ ಜೀವನದ ಭಾಗ

ಸೈಕ್ಲಿಂಗ್‌ ನನ್ನ ಜೀವನದ ಭಾಗವೇ ಆಗಿತ್ತು. ಆದರೆ ರಾಜಕೀಯಕ್ಕೆ ಬಂದ ಬಳಿಕ ಅದರಿಂದ ಕೊಂಚ ವಿರಾಮ ಪಡೆದಿದ್ದೆ. ಆದರೆ ಮತ್ತೆ ಈಗ ಹೊಸ ಉದ್ದೇಶದೊಂದಿಗೆ ಸೈಕ್ಲಿಂಗ್‌ಗೆ ಮರಳಿದ್ದೇನೆ. ಎಲ್ಲಾ ಕ್ಷೇತ್ರಗಳಲ್ಲಿ ಸೈಕ್ಲಿಂಗ್‌ ಪ್ರೋತ್ಸಾಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದು ನನ್ನಲ್ಲಿ ಇನ್ನಷ್ಟು ಸ್ಫೂರ್ತಿ ತುಂಬಿತು. ಆಗಿನಿಂದ ಸ್ಥಳೀಯರೊಂದಿಗೆ ಸೈಕಲ್‌ ಸವಾರಿ ಮಾಡುತ್ತಾ, ದೈಹಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇನೆ.

ಸುರೇಶ್‌ ಕುಮಾರ್‌, ಶಾಸಕ

- ಕಳೆದ ವರ್ಷ ನಡೆದಾಡುವ ಸ್ಥಿತಿಯಲ್ಲೂ ಇರಲಿಲ್ಲ

ಸ್ನೇಹಿತರ ಜೊತೆಗೆ ಸೇರಿ ಶಾಸಕರ ಸೈಕ್ಲಿಂಗ್ ಟೂರ್‌

ಡಿ.23ಕ್ಕೆ ಪ್ರಯಾಣ ಆರಂಭ, 37 ಗಂಟೆಗಳ ಕಾಲ ಯಾನ

5 ದಿನಕ್ಕೆ 702 ಕಿ.ಮೀ ಕ್ರಮಿಸಿ ಡಿ.27ಕ್ಕೆ ಕನ್ಯಾಕುಮಾರಿಗೆ

ಅನಾರೋಗ್ಯದಿಂದ ಚೇತರಿಕೆ ಬಳಿಕ ಸುದೀರ್ಘ ಸೈಕ್ಲಿಂಗ್‌

50 ವರ್ಷಗಳ ಹಿಂದಿನ ರೀತಿ ಮತ್ತೊಮ್ಮೆ ಸಾಹಸ ಪಯಣ

ಸೈಕ್ಲಿಂಗ್‌ ಪ್ರೋತ್ಸಾಹ ಕುರಿತ ಮೋದಿ ಹೇಳಿಕೆಯಿಂದ ಸ್ಪೂರ್ತಿ