ಯಲ್ಲಾಪುರ: ರೈತರ ಸಂಕಷ್ಟ ನಿವಾರಣೆಗೆ ಸರ್ಕಾರ ಲಕ್ಷ್ಯ ವಹಿಸುತ್ತಿಲ್ಲ. ತೀವ್ರ ಸಂಕಷ್ಟದಲ್ಲಿರುವ ರೈತರ ಸಾಲ ಮನ್ನಾ ಮಾಡಲೇಬೇಕು ಎಂದು ತಾಲೂಕು ರೈತ ಸಂಘದ ಅಧ್ಯಕ್ಷ ಎನ್.ಎಂ. ಹೆಗಡೆ ಪಣತಗೇರಿ ಹೇಳಿದರು.
ಇಡಗುಂದಿ ವ್ಯ.ಸೇ.ಸ. ಸಂಘದ ಅಧ್ಯಕ್ಷ ನಾರಾಯಣ ಭಟ್ಟ ಬಟ್ಟಲಗುಂಡಿ ಮಾತನಾಡಿ, ರೈತ ಸಂಘಟನೆ ಸದಾ ಚಾಲನೆಯಲ್ಲಿರಬೇಕು. ಹೋರಾಟಕ್ಕೆ ಹಣದ ಅಗತ್ಯವಿದೆ. ನಾವು ಸಂಘಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕು. ಕೇವಲ ಅಡಕೆ ಬೆಳೆಗಾರರು ತೊಂದರೆಯಲ್ಲಿ ಸಿಲುಕಿದರೆ ವ್ಯಾಪಾರಸ್ಥರು, ಕಾರ್ಮಿಕರು ಸೇರಿದಂತೆ ಲಕ್ಷಾಂತರ ಜನರೂ ತೊಂದರೆಯಲ್ಲಿ ಸಿಲುಕುತ್ತಾರೆ. ಆದ್ದರಿಂದ ಈ ಕುರಿತು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನಮ್ಮ ಹೋರಟಕ್ಕೆ ವ್ಯಾಪಾರಸ್ಥರು ಮತ್ತು ಕಾರ್ಮಿಕರು ಬೆಂಬಲ ನೀಡಬೇಕು ಎಂದರು.
ಡಿ.ಜಿ. ಭಟ್ಟ ಧುಂಡಿ ಮಾತನಾಡಿ, ನಾವು ಕೇವಲ ಮನವಿ ನೀಡಿದರೆ ಸರ್ಕಾರಕ್ಕೆ ಬಿಸಿ ತಟ್ಟುವುದಿಲ್ಲ. ಬೇರೆ ಜಿಲ್ಲೆಯ ರೈತಪರ ಹೋರಾಟ ನೋಡಿ ನಾವು ಕಲಿಯಬೇಕಾಗಿದೆ. ಅಧಿಕಾರಿಗಳಿಗೆ ನಮ್ಮ ಬೇಡಿಕೆಗಳು ಅರ್ಥವಾಗದು ಎಂದರು.ಎಲ್‌ಎಸ್‌ಎಂಪಿ ಅಧ್ಯಕ್ಷ ನಾಗರಾಜ ಕವಡೀಕೆರೆ ಮಾತನಾಡಿ, ಇಂದು ಕೇವಲ ಶೇ. ೩೦ರಷ್ಟು ಅಡಕೆ ಬೆಳೆ ರೈತರ ಕೈಗೆ ಬಂದಿಲ್ಲ. ಯಲ್ಲಾಪುರದಲ್ಲಿ ಸಣ್ಣ ರೈತರೇ ಹೆಚ್ಚಿದ್ದಾರೆ. ಇದು ಎಲ್ಲರನ್ನೂ ಆತಂಕಕ್ಕೆ ದೂಡಿದೆ. ಸಂಘಟನೆ ಬಲಗೊಳ್ಳಬೇಕು ಎಂದರು.
ಹಿರಿಯ ಸಹಕಾರಿ ವೆಂಕಟ್ರಮಣ ಬೆಳ್ಳಿ ಮಾತನಾಡಿ, ನಮ್ಮ ಸಂಘಟನೆಯನ್ನು ಬಲಗೊಳಿಸಬೇಕು. ದೆಹಲಿಯಲ್ಲಿ ರೈತರು ಹೇಗೆ ಚಳವಳಿ ಮಾಡಿದ್ದಾರೆಂಬುದನ್ನು ನಾವು ಗಮನಿಸಿದರೆ ಅರ್ಥವಾಗುತ್ತದೆ. ನಾವು ಅಂತಹ ಚಳವಳಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಬಂದೊದಗಿದೆ ಎಂದರು.ರೈತ ಸಂಘದ ಸದಸ್ಯ ಗಣೇಶ ಹೆಗಡೆ ಪಣತಗೇರಿ ಸಂಘದ ನಿರ್ಣಯ ವಾಚಿಸಿದರು. ಗೌರವಾಧ್ಯಕ್ಷ ವಿ.ಎನ್. ಗೇರಗದ್ದೆ, ಸದಸ್ಯರಾದ ಎಲ್.ಪಿ. ಭಟ್ಟ ಗುಂಡ್ಕಲ್, ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ, ಶ್ರೀಧರ ಕೋಟೆಮನೆ, ಕೆ.ಟಿ. ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಆನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.