ಅಧಿವೇಶನದಲ್ಲಿ ಸರ್ಕಾರಿ ಚಾಟಿ: ಛಲವಾದಿ, ಶರವಣ

KannadaprabhaNewsNetwork |  
Published : Nov 21, 2025, 01:45 AM IST
ಛಲವಾದಿ ನಾರಾಯಣಸ್ವಾಮಿ | Kannada Prabha

ಸಾರಾಂಶ

ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಜೊತೆಯಾಗಿ ವಿಧಾನಪರಿಷತ್ತಿನಲ್ಲಿ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡುತ್ತೇವೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಜೊತೆಯಾಗಿ ವಿಧಾನಪರಿಷತ್ತಿನಲ್ಲಿ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡುತ್ತೇವೆ ಎಂದು ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದ್ದಾರೆ.ಗುರುವಾರ ವಿಧಾನಸೌಧದಲ್ಲಿ ಉಭಯ ಪಕ್ಷಗಳ ಪರಿಷತ್ ಸದಸ್ಯರ ಜತೆ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಅಧಿವೇಶನದಲ್ಲಿ ನೆರೆ ಹಾವಳಿ, ಬರ ಪರಿಹಾರ ವಿಚಾರವನ್ನು ನಿಲುವಳಿ ಸೂಚನೆಯಾಗಿ ಮಂಡಿಸಲಾಗುವುದು ಎಂದು ಹೇಳಿದರು.ಬೆಳಗಾವಿ ಅಧಿವೇಶನದಲ್ಲಿ ನಾವು ಒಗ್ಗಟ್ಟಿನಿಂದ ಕೆಲಸ ಮಾಡಲು ತೀರ್ಮಾನ ಮಾಡಿದ್ದೇವೆ. ರಾಜ್ಯದಲ್ಲಿ ಈ ಸರ್ಕಾರದಿಂದ ಆಗಿರುವ ಅನಾಹುತಗಳು, ರಸ್ತೆ ಗುಂಡಿಗಳ ಸಮಸ್ಯೆ, ಕರ್ನಾಟಕದ ಆರ್ಥಿಕ ಸಮಸ್ಯೆ, ಕಾನೂನು-ಸುವ್ಯವಸ್ಥೆ ಹದಗೆಟ್ಟಿರುವುದು, ಶಿಕ್ಷಣ ಕ್ಷೇತ್ರದ ಅನಾಹುತಗಳನ್ನು ಮುಖ್ಯ ವಿಚಾರವಾಗಿ ಪರಿಗಣಿಸಲು ಎರಡೂ ಪಕ್ಷಗಳ ಮುಖಂಡರು ತೀರ್ಮಾನ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯಾದ್ಯಂತ ರೈತರ ಸಮಸ್ಯೆಗಳು ದೊಡ್ಡದಾಗಿ ಮತ್ತು ವೇಗವಾಗಿ ಬೆಳೆಯುತ್ತಿವೆ. ಈ ಸರ್ಕಾರ ಮಾತನಾಡುತ್ತದೆ. ಆದರೆ, ಕೆಲಸ ಮಾಡುತ್ತಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸದನದಲ್ಲಿ ನಾವು ಸರ್ಕಾರಕ್ಕೆ ಚಾಟಿ ಬೀಸುವ ಕೆಲಸ ಮಾಡಬೇಕು. ಕಾಲಹರಣ ಮಾಡದೇ ಜನರ ಸಮಸ್ಯೆಗಳಿಗೆ ಪರಿಹಾರ ಕೊಡಬೇಕು. ರೈತರ ಸಮಸ್ಯೆಗಳನ್ನು ಆಮೂಲಾಗ್ರವಾಗಿ ಚಿಂತನೆ ಮಾಡಿ ಅವುಗಳಿಗೆ ಪರಿಹಾರ ನೀಡಬೇಕೆಂಬ ವಿಷಯವನ್ನೂ ಪರಿಗಣಿಸುತ್ತೇವೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೆಕೆಆರ್‌ಡಿಬಿ ರಚಿಸಿದಂತೆ ಕಿತ್ತೂರು ಕರ್ನಾಟಕ ಭಾಗಕ್ಕೂ ಅಭಿವೃದ್ಧಿ ಮಂಡಳಿ ರಚಿಸಬೇಕು. ಆ ಮಂಡಳಿಗೆ ಹೆಚ್ಚಿನ ಅನುದಾನ ಒದಗಿಸಿ ಅಲ್ಲೂ ಅಭಿವೃದ್ಧಿಗೆ ಅವಕಾಶ ಮಾಡಿಕೊಡಬೇಕು ಎಂದು ಛಲವಾದಿ ಒತ್ತಾಯಿಸಿದರು.

ಜಂಟಿ ಹೋರಾಟ-ಶರವಣ:

ಪರಿಷತ್ತಿನ ಜೆಡಿಎಸ್ ನಾಯಕ ಟಿ.ಎ.ಶರವಣ ಮಾತನಾಡಿ, ಸರ್ಕಾರದ ಜನ ವಿರೋಧಿ ಧೋರಣೆಗಳ ವಿರುದ್ಧ ಬೆಳಗಾವಿ ಅಧಿವೇಶನದಲ್ಲಿ ಯಾವ ರೀತಿ ಹೋರಾಟ ಮಾಡಬೇಕು. ವಿಧಾನ ಮಂಡಲದಲ್ಲಿ ಮಿತ್ರ ಪಕ್ಷಗಳಾದ ನಮ್ಮ ಕಾರ್ಯವೈಖರಿ ಹೇಗಿರಬೇಕು ಎಂಬುದರ ಬಗ್ಗೆ ಎರಡೂ ಪಕ್ಷದ ಮುಖಂಡರು ಸುದೀರ್ಘವಾಗಿ ಚರ್ಚಿಸಿ ನಿರ್ಧರಿಸಿದ್ದೇವೆ ಎಂದರು.

ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ನಿರ್ಧರಿಸಿದ್ದೇವೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳು ಚರ್ಚೆಯಾಗಿ ಆ ಭಾಗದ ಸಮಸ್ಯೆಗೆ ಪರಿಹಾರ ದೊರೆಯಬೇಕು ಎಂಬುದು ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಉದ್ದೇಶವಾಗಿತ್ತು. ಆದರೆ, ಸರ್ಕಾರ ಯಾವುದೇ ಅಧಿವೇಶನದಲ್ಲಿ ಆ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ಕೊಡದೇ ವಿಧೇಯಕಗಳನ್ನು ಪಾಸ್ ಮಾಡಿಕೊಳ್ಳುತ್ತಿದೆ ಎಂದು ಹರಿಹಾಯ್ದರು.

ಮುಂದಿನ ದಿನಗಳಲ್ಲಿ ಸರ್ಕಾರದ ಇಂಥ ನೀತಿಗಳ ವಿರುದ್ಧ ಯಾವ ಮಟ್ಟಕ್ಕೆ ಹೋರಾಟ ತೆಗೆದುಕೊಂಡು ಹೋಗಬೇಕು ಎಂದು ಎರಡೂ ಪಕ್ಷದ ನಾಯಕರು ಮಾತನಾಡಿಕೊಂಡಿದ್ದೇವೆ. ಹೋರಾಟಗಳನ್ನು ಜಂಟಿಯಾಗಿ ನಡೆಸಲು ತೀರ್ಮಾನ ಮಾಡಿಕೊಂಡಿದ್ದೇವೆ. ಹಿರಿಯ ನಾಯಕರ ನಿರ್ದೇಶನದಂತೆ ಅದನ್ನು ಮುಂದುವರಿಸುತ್ತೇವೆ ಎಂದರು.

PREV

Recommended Stories

ಸೈಬರ್‌ ವಂಚಕರಿಗೆ ಹಣ ನೀಡಲುಸ್ನೇಹಿತನ ಮನೆಯಲ್ಲಿ ಚಿನ್ನ ಕದ್ದ..!
ಮತ್ತೆ ಟೋಯಿಂಗ್‌ ಆರಂಭಿಸಲು ಜಿಬಿಎ ನಿರ್ಧಾರ